ಬೆಂಗಳೂರು, ಮೇ 9- ಪೆನ್ ಡ್ರೈವ್ ಪ್ರಕರಣದಲ್ಲಿ ಯಾರಾದರೂ ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸಿದರೆ ಎಸ್‌ಐಟಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ಇವೆ ಎಂದು ಮಹಿಳೆಯರನ್ನು ಯಾರಾದರೂ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದರೆ ಅದನ್ನು ಎಸ್‌ಐಟಿ ಗಮನಿಸಿಕೊಳ್ಳುತ್ತದೆ. ಈ ಬಗ್ಗೆ ಸರ್ಕಾರ ಕೂಡ ಸ್ಪಷ್ಟ ಸೂಚನೆ ನೀಡಲಿದೆ ಎಂದರು. ಪ್ರಕರಣದ ಬಗ್ಗೆ ನಿನ್ನೆಯೇ ನಾನು ಸಂಪೂರ್ಣ ವಿವರಣೆ ನೀಡಿದ್ದೇನೆ.
ತನಿಖೆ ಸರಿಯಾಗಿಲ್ಲ ಎಂದು ಜೆಡಿಎಸ್ ಹೇಳಿದಾಕ್ಷಣ ಅದಕ್ಕೆ ನಾನು ಉತ್ತರ ಕೊಡಬೇಕು ಎಂದಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಪ್ರತಿ ದಿನ ಏನಾಗಿದೆ ಎಂದು ಬಹಿರಂಗವಾಗಿ ವಿವರಣೆ ನೀಡಲು ಸಾಧ್ಯವಿಲ್ಲ. ಬಹಳಷ್ಟು ವಿಚಾರಗಳು ನಮಗೇ ಗೊತ್ತಿರುವುದಿಲ್ಲ. ಎಲ್ಲದಕ್ಕೂ ಉತ್ತರ ಕೊಡುತ್ತಾ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅನೇಕ ವಿಚಾರಗಳು ಪ್ರಕ್ರಿಯೆಯ ಹಂತದಲ್ಲಿರುತ್ತವೆ. ಅದನ್ನು ವಿವರಣೆ ನೀಡುತ್ತಾ ಕೂರಲಾಗುವುದಿಲ್ಲ . ವಿರೋಧ ಪಕ್ಷಗಳು ಟೀಕೆ-ಟಿಪ್ಪಣಿ ಮಾಡುತ್ತಿವೆ. ವಕೀಲ ದೇವರಾಜೇಗೌಡ ಎಸ್‌ಐಟಿ ವಿರುದ್ಧ ದೂರು ನೀಡುವುದಾದರೆ ನೀಡಲಿ, ಏನುಬೇಕಾದರೂ ಮಾಡಿಕೊಳ್ಳಲಿ, ಆ ಬಗ್ಗೆ ತಾವು ಏನನ್ನು ಹೇಳುವುದಿಲ್ಲ ಎಂದು ಹೇಳಿದರು.
ಮತ್ತಷ್ಟು ಸಂತ್ರಸ್ಥೆಯರು ಎಸ್‌ಐಟಿಗೆ ದೂರು ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಂತ್ರಸ್ಥ ಅಧಿಕಾರಿಗಳು ತಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳಿಕೆ ನೀಡಿದ್ದರೆ, ಎಸ್‌ಐಟಿ ಅಧಿಕಾರಿಗಳು ಅದನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪರಮೇಶ್ವರ್ ಪ್ರತಿಕ್ರಿಯಿಸಿದರು.