Monday, March 10, 2025
Homeರಾಜ್ಯಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ವೈದ್ಯರ ಕಡ್ಡಾಯ ಸೇವೆಗೆ ಕಟ್ಟುನಿಟ್ಟಿನ...

ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ವೈದ್ಯರ ಕಡ್ಡಾಯ ಸೇವೆಗೆ ಕಟ್ಟುನಿಟ್ಟಿನ ಸೂಚನೆ

Strict instructions for doctors to work from 9 am to 4 pm in government hospitals

ಬೆಂಗಳೂರು,ಮಾ.10- ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕಾರ್ಯ ನಿರ್ವಹಿಸಲಿದ್ದು, ಯಾವುದೇ ಕಾರಣಕ್ಕೂ ಬೇರೆ ಸ್ಥಳಗಳಲ್ಲಿ ಪ್ರಾಕ್ಟೀಸ್‌‍(ಅಭ್ಯಾಸ) ಮಾಡುವಂತಿಲ್ಲ ಎಂದು ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌‍ ಸದಸ್ಯೆ ಬಲ್ಕಿಶ್‌ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ತಮ ಕರ್ತವ್ಯದ ಸಂದರ್ಭದಲ್ಲೇ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿರುವುದಾಗಿ ಹೇಳಿದರು.

9 ಗಂಟೆಗೆ ಕರ್ತವ್ಯಕ್ಕೆ ಹಾಜರಾದರೆ 4 ಗಂಟೆವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲೇ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ. ಈ ಮೊದಲು 2 ಗಂಟೆಗಳ ನಂತರ 1 ಗಂಟೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿತ್ತು. ಆದರೆ ವೈದ್ಯರು 1 ಗಂಟೆ ಮುಂಚಿತವಾಗಿ ಹೋಗುವುದು ಇಲ್ಲವೇ 1 ಗಂಟೆ ತಡವಾಗಿ ಬರುತ್ತಾರೆಂಬ ಆರೋಪ ಕೇಳಿಬರುತ್ತಿದೆ. ಇದನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಂಡಿದ್ದಾಗಿ ಸಚಿವರು ಸಮರ್ಥನೆ ಮಾಡಿಕೊಂಡರು.

ಈಗಾಗಲೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಅಧಿಸೂಚನೆ ಮೂಲಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಒಂದು ವೇಳೆ ಯಾರಾದರೂ ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಇನ್ನು ಮುಂದೆ ವೈದ್ಯರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ನಾಲ್ಕು ಬಾರಿ ಬಯೋಮೆಟ್ರಿಕ್‌ಗೆ ತಮ ಹಸ್ತಮುದ್ರೆ ಹಾಕಬೇಕು. ಬೆಳಗ್ಗೆ 9 ಗಂಟೆ, ಮಧ್ಯಾಹ್ನ 2, 3 ಮತ್ತು 4 ಗಂಟೆಗೆ ಹಾಕಲೇಬೇಕು. ಇದರ ಆಧಾರಿತವಾಗಿಯೇ ಸಂಬಳವನ್ನು ನೀಡಲಾಗುವುದು. ಈ ಕುರಿತು ಮುಖ್ಯಸ್ಥರ ಜೊತೆಯೂ ಚರ್ಚೆ ಮಾಡಲಾಗಿದೆ. ರೋಗಿಗಳಿಗೆ ಸಕಾಲಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಸರ್ಕಾರದ ಮೊದಲ ಆದ್ಯತೆ ಎಂದು ಸಚಿವರು ಹೇಳಿದರು.

ಜಿಲ್ಲಾಸ್ಪತ್ರೆಗಳಲ್ಲಿ ಡಿಎಚ್‌ಒ, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಾರೆ. ನಾವು ಎನ್‌ಎಂಸಿ ಜಾರಿಗೆ ತಂದಿರುವ ಮಾರ್ಗಸೂಚಿಗಳ ಮೂಲಕವೇ ಕಾರ್ಯ ನಿರ್ವಹಿಸುವಂತೆ ಸೂಚನೆ ಕೊಡಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಸರಿಪಡಿಸುವ ಆಶ್ವಾಸನೆಯನ್ನು ನೀಡಿದರು.

ಪ್ರತಿಯೊಂದು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಒಪಿಡಿ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ. ಅಗತ್ಯವಿರುವ ರೋಗಿಗಳಿಗೆ ಒಪಿಡಿ ನೀಡಬೇಕೆಂದು ಸೂಚನೆ ಕೊಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ಉತ್ತಮವಾದ ವೈದ್ಯಕೀಯ ಸೌಲಭ್ಯ ಸಿಗುತ್ತಿದೆ. ಎಲ್ಲಿಯೂ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದಾಗಿ ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆಯ ಮೆಗಾನ್‌ ಆಸ್ಪತ್ರೆಯಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಸದಸ್ಯರು ನನ್ನ ಗಮನಕ್ಕೆ ತಂದಿದ್ದಾರೆ. ಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಹರಿಸುವ ಭರವಸೆಯನ್ನು ನೀಡಿದರು.

ಬೆಳೆಯುತ್ತಿರುವ ಶಿವಮೊಗ್ಗಕ್ಕೆ 100 ಹಾಸಿಗೆ ಆಸ್ಪತ್ರೆಯನ್ನು ಮಂಜೂರು ಮಾಡಬೇಕೆಂದು ಸದಸ್ಯೆ ಬಲ್ಕೀಶ್‌ ಬಾನು ಮನವಿ ಮಾಡಿದ್ದಾರೆ. ಇದು ಪ್ರಾಥಮಿಕ ಮತ್ತು ಆರೋಗ್ಯ ಕುಟುಂಬ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಸಂಬಂಧಪಟ್ಟವರು ಗಮನ ನೀಡುತ್ತಾರೆಂದು ಶರಣಪ್ರಕಾಶ್‌ ಪಾಟೀಲ್‌ ಭರವಸೆ ಕೊಟ್ಟರು.

RELATED ARTICLES

Latest News