ಬೆಂಗಳೂರು,ಜ.30- ಮೈಕ್ರೋ ಫೈನಾನ್ಸ್ ಕಂಪನಿಗಳು ನಿಯಮ ಮೀರಿ ಸಾಲ ವಸೂಲಾತಿ ಪ್ರಕ್ರಿಯೆಗಳನ್ನು ನಡೆಸಿದರೆ ಕನಿಷ್ಠ 6 ತಿಂಗಳಿನಿಂದ ಗರಿಷ್ಠ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಹಾಗೂ ಕನಿಷ್ಠ 10 ಸಾವಿರದಿಂದ ಗರಿಷ್ಠ 1 ಲಕ್ಷ ರೂ.ಗಳವರೆಗೂ ದಂಡ ವಿಧಿಸುವ ಕಠಿಣ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾನೂನು ಇಲಾಖೆ ರೂಪಿಸಿರುವ ಕರಡು ಮಸೂದೆ ಕುರಿತು ಚರ್ಚೆ ನಡೆಸಲಾಯಿತು. ಸಾಲದ ವಹಿವಾಟು ನಿರ್ವಹಿಸುವ ಹಣಕಾಸಿನ ಸಂಸ್ಥೆಗಳು, ಆರ್ಬಿಐ ನಿಯಮಾವಳಿ ಅನುಸಾರ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಈವರೆಗೂ ಕಾರ್ಯ ಚಟುವಟಿಕೆ ನಡೆಸುತ್ತಿದ್ದ ಯಾವುದೇ ಅನಧಿಕೃತ ಸಂಸ್ಥೆಗಳು 30 ದಿನದೊಳಗಾಗಿ ನೋಂದಾಯಿಸಿಕೊಳ್ಳಬೇಕು.
ಒಂದು ವೇಳೆ ನೋಂದಣಿ ಮಾಡಿಕೊಳ್ಳದೇ ಇದ್ದರೆ ಅಂತಹ ಸಂಸ್ಥೆಗಳನ್ನು ಜಪ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಿಯಮ ಮೀರಿ ಸಾಲ ನೀಡುವುದು ಹಾಗೂ ಸಾಲ ವಸೂಲಾತಿಗಾಗಿ ಅತಿಕ್ರಮಣದ ಕಾರ್ಯ ಚಟುವಟಿಕೆಗಳನ್ನು ಅನುಸರಿಸಿದ ಹಣಕಾಸು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸುವ, ಶೋಧ ಕಾರ್ಯಾಚರಣೆ ನಡೆಸುವ ಅಧಿಕಾರವನ್ನು ದೂರು ಆಧರಿಸಿ ಕಾನೂನು ಕ್ರಮ ನಿರ್ವಹಿಸಲು ಪೊಲೀಸರಿಗೆ ಅವಕಾಶ ಕಲ್ಪಿಸಲಾಗಿದೆ.
ಸಾಲ ವಸೂಲಾತಿಯಲ್ಲಿ ಅನಗತ್ಯ ಕಿರುಕುಳ ನೀಡಿದರೆ ಅಂತಹ ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸುವುದು ಹಾಗೂ ಕನಿಷ್ಠ 3 ವರ್ಷ ಶಿಕ್ಷೆ ಹಾಗೂ 1ಲಕ್ಷ ರೂ.ಗಳವರೆಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಸಾಲ ಹಾಗೂ ಹಣಕಾಸಿನ ವಹಿವಾಟಿನ ದಸ್ತಾವೇಜುಗಳನ್ನು ಸ್ಥಳೀಯ ಭಾಷೆಗಳಲ್ಲೇ ಗ್ರಾಹಕರಿಗೆ ಒದಗಿಸಬೇಕು. ಸಾಲ, ಬಡ್ಡಿ ಪ್ರಮಾಣ ಸೇರಿದಂತೆ ಎಲ್ಲಾ ವಿಚಾರದ ಬಗ್ಗೆ ಸಾಲ ಪಡೆಯುವವರಿಗೆ ಸ್ಪಷ್ಟವಾಗಿ ತಿಳುವಳಿಕೆ ನೀಡಬೇಕು. ಸಾಲ ಪಡೆಯುವವರಿಂದ ಪಡೆಯಲಾಗುವ ಭದ್ರತಾ ಆಸ್ತಿ ಪತ್ರಗಳು ಹಾಗೂ ಇತರ ವಿಚಾರಗಳ ಕುರಿತು ಪಾರದರ್ಶಕತೆ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.
ಆರ್ಬಿಐ ಸೂಚಿತ ನಿಯಮಾವಳಿ ಅನುಸಾರವೇ ಪಟ್ಟಿ ಇರಬೇಕು. ಗ್ರಾಹಕರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಸಾಲ ನೀಡಬೇಕು. ಬಲವಂತದ ಸಾಲ ವಸೂಲಾತಿಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸುವ ಮತ್ತು ಅದನ್ನು ತನಿಖೆ ಮಾಡುವ ಅಧಿಕಾರವನ್ನು ಪೊಲೀಸರಿಗೆ ನೂತನ ತಿದ್ದುಪಡಿಯಲ್ಲಿ ಒದಗಿಸಲಾಗಿದೆ. ವಿಧಾನಸಭೆ ಅಧಿವೇಶನ ವಿಳಂಬವಾಗುವುದರಿಂದಾಗಿ ತುರ್ತಾಗಿ ಸುಗ್ರೀವಾಜ್ಞೆಯ ಮೂಲಕವೇ ಮಸೂದೆಯನ್ನು ಜಾರಿಗೊಳಿಸಲು ಚರ್ಚಿಸಲಾಗಿದ್ದು, ರಾಜ್ಯಪಾಲರಿಗೆ ಸುಗ್ರೀವಾಜ್ಞೆಯ ಪ್ರತಿಯನ್ನು 2-3 ದಿನದೊಳಗಾಗಿ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯಿಂದಾಗಿ ಸುಮಾರು 180ಕ್ಕೂ ಹೆಚ್ಚು ಮಂದಿ ಬೇರೆಬೇರೆ ಜಿಲ್ಲೆಗಳಲ್ಲಿ ಜೀವ ಕಳೆದುಕೊಂಡಿರುವುದು ರಾಜ್ಯಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ಇದನ್ನು ಮಟ್ಟ ಹಾಕಲು ಸುಗ್ರೀವಾಜ್ಞೆ ರೂಪಿಸಲಾಗುತ್ತಿದೆ. ಅದರ ಜೊತೆಯಲ್ಲೇ ಆರ್ಬಿಐ ಮತ್ತು ಕೇಂದ್ರ ಹಣಕಾಸು ಇಲಾಖೆಗೂ ಕಾನೂನು ತಿದ್ದುಪಡಿಗೆ ಅಗತ್ಯ ಶಿಫಾರಸ್ಸು ಮಾಡಲು ಚರ್ಚಿಸಲಾಗಿದೆ.