ಬೆಂಗಳೂರು, ಅ.11– ಯಮರೂಪಿಯಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು 4ನೆ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಹಾಲಕ್ಷ್ಮಿ ಬಡಾವಣೆಯ 1ನೆ ಹಂತದ ಸಿಗ್ನಲ್ ಬಳಿ ಇಂದು ಮಧ್ಯಾಹ್ನ ನಡೆದಿದೆ.
ಬೋವಿಪಾಳ್ಯದ ನಿವಾಸಿ ಭುವನಾ (9) ಮೃತ ದುರ್ದೈವಿ. ಪಾಂಚಜನ್ಯ ಶಾಲೆಯಲ್ಲಿ 4ನೆ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಇಂದು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಸುಮಾರು 12.20ರ ಸಮಯದಲ್ಲಿ ಒಂದನೆ ಹಂತದ ಸಿಗ್ನಲ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ.
ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯರು ಆರೈಕೆ ಮಾಡಿ ನಂತರ ಹತ್ತಿರದ ಪೋರ್ಟಿಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ತೀವ್ರವಾಗಿ ಪೆಟ್ಟುಬಿದ್ದ ಹಿನ್ನೆಲೆಯಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ.
ಘಟನೆ ನಂತರ ಬಿಎಂಟಿಸಿ ಚಾಲಕ ವಾಹನ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಈ ಘಟನೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆ ಜತೆಗಿದ್ದ ಕೆಲ ಸಹಪಾಠಿಗಳು ಈ ದೃಶ್ಯ ನೋಡಿ ಕಣ್ಣೀರು ಹಾಕಿದ್ದಾರೆ. ಸುದ್ದಿ ತಿಳಿದ ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.