ಕೊರೋನಾ ಆತಂಕದ ನಡುವೆಯೇ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಬೆಂಗಳೂರು, ಜ.1- ಕಾಲೇಜಿಗೆ ಬಂದು ಪಾಠ ಕಲಿಯದಿದ್ದರೆ ಮುಂದೆ ಬಹಳ ಕಷ್ಟವಾಗಲಿದೆ… ಖುಷಿ ಹಾಗೂ ಆತಂಕದಲ್ಲಿ ಬಂದಿದ್ದೇವೆ… ಹೀಗೆಂದು ನಗರದ ಮಹಾರಾಣಿ ಪಿಯು ವಿದ್ಯಾರ್ಥಿನಿಯರು ಹೇಳಿದರು. ಈ ಸಂಜೆಯೊಂದಿಗೆ ಮಾತನಾಡಿದ ಬಹುತೇಕ ವಿದ್ಯಾರ್ಥಿನಿಯರು ಮೊದಲು ಕೊರೊನಾ ಭಯ ಕಾಡಿತ್ತು. ಈಗ ರೋಗ ನಿಯಂತ್ರಣದಲ್ಲಿದೆ. ಅಲ್ಲದೆ, ಕಾಲೇಜುಗಳಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಹಾಗಾಗಿ ಬರುತ್ತಿದ್ದೇವೆ ಎಂದು ಹೇಳಿದರು.

ಪೋಷಕರಿಗೆ ಭಯವಿದೆ. ಆದರೂ ನಾವು ಅವರ ಒಪ್ಪಿಗೆ ಪಡೆದುಕೊಂಡು ಬಂದಿದ್ದೇವೆ. ಆನ್‍ಲೈನ್ ತರಗತಿಯಲ್ಲಿ ಎಲ್ಲವನ್ನೂ ಕಲಿಯುವುದು ಕಷ್ಟ. ಕಾಲೇಜಿಗೆ ಬಂದರೆ ಪಾಠ ಸುಲಭವಾಗಿ ಅರ್ಥವಾಗುತ್ತದೆ. ಮುಂದಿನ ಪರೀಕ್ಷೆಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮಹಾರಾಣಿ ಕಾಲೇಜಿನಲ್ಲಿ 2000 ವಿದ್ಯಾರ್ಥಿನಿಯರಿದ್ದಾರೆ. ವರ್ಷದ ಮೊದಲ ದಿನವಾದ್ದರಿಂದ ಕೇವಲ 60 ಮಂದಿ ಮಾತ್ರ ಹಾಜರಾಗಿದ್ದಾರೆ. ಕೆಲವು ಪೋಷಕರು ಮಾತನಾಡಿ, ಈಗ ರೂಪಾಂತರಿ ಕೊರೊನಾ ಇದೆ ಎಂಬ ಭಯ ಕಾಡುತ್ತಿದೆ. ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸಲು ಆತಂಕವಾಗುತ್ತಿದೆ. ಆದರೆ, ಏನು ಮಾಡುವುದು ಅವರ ಭವಿಷ್ಯದ ಹಿತದೃಷ್ಟಿಯಿಂದ ಕಳುಹಿಸಬೇಕಾಗಿದೆ ಎಂದಿದ್ದಾರೆ.

ನಗರದ ಮರಿಮಲ್ಲಪ್ಪ, ಸದ್ವಿದ್ಯಾಪಾಠ ಶಾಲೆ, ಜೆಎಸ್‍ಎಸ್ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಖಾಸಗಿ ಶಾಲೆಗಳು, ಕಾನ್ವೆಂಟ್‍ಗಳು ಇಂದು ಜನವರಿ 1 ಆಗಿರುವುದರಿಂದ ರಜೆ ಘೋಷಿಸಿದ್ದಾರೆ. ಸೋಮವಾರದಿಂದ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗುವ ವಿಶ್ವಾಸವಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಎಲ್ಲ ಕಾಲೇಜುಗಳಲ್ಲೂ ತಾಪಮಾನ ಪರೀಕ್ಷೆ ಮಾಡಿ ಸ್ಯಾನಿಟೈಸರ್ ಹಾಕಿ ವಿದ್ಯಾರ್ಥಿಗಳನ್ನು ಒಳಗೆ ಬಿಡಲಾಯಿತು.