ಬೆಂಗಳೂರು, ಜು.7- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಪ್ರೇರೇಪಣೆ ಯಾಗಿದೆಯೇ ಎಂಬ ಬಗ್ಗೆ ಮಾನಸಿಕ ಅಥವಾ ಸಾಮಾಜಿಕ ತಜ್ಞರು ಅಧ್ಯಯನ ನಡೆಸಬೇಕಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿ ಬಳಿ ನಡೆದಿರುವ ಹಲ್ಲೆ ಪ್ರಕರಣದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆರೋಪಿಗಳು ಬಂಧನವಾಗಿರುವ ಬಗ್ಗೆ ತಿಳಿಸಲಾಗಿದೆ. ಮತ್ತಷ್ಟು ಮಾಹಿತಿ ಪಡೆದು ಅನಂತರ ಪ್ರತಿಕ್ರಿಯಿ ಸುತ್ತೇನೆ ಎಂದು ಅವರು ಹೇಳಿದರು.
ಹಲ್ಲೆ ನಡೆಸಿದ ಆರೋಪಿಗಳು ಚಿತ್ರದುರ್ಗದ ರೇಣುಕಾಸ್ವಾಮಿ ಮಾದರಿಯ ಪ್ರಕರಣ ಇದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಟ ದರ್ಶನ್ ಅವರು ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ಪ್ರೇರೇಪಣೆಯಿಂದ ಈ ರೀತಿಯ ಇತರ ಘಟನೆಗಳು ವರದಿಯಾಗುತ್ತಿವೆ ಎಂಬ ಬಗ್ಗೆ ನಾನು ಹೇಳಲೂ ಸಾಧ್ಯವಿಲ್ಲ. ದರ್ಶನ್ ಪ್ರಕರಣ ಸಮಾಜದ ಯುವಕರಲ್ಲಿ ಪರಿಣಾಮ ಬೀರಿದೆಯೇ ಎಂಬ ಬಗ್ಗೆ ಸಾಮಾಜಿಕ ಅಥವಾ ಮಾನಸಿಕ ತಜ್ಞರು ಅಧ್ಯಯನ ನಡೆಸಬೇಕು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಬೇಕು ಎಂದು ರಂಭಾಪುರಿಯ ಸ್ವಾಮೀಜಿ ನೀಡಿರುವ ಹೇಳಿಕೆ ಅವರ ಅಭಿಪ್ರಾಯ. ಅದಕ್ಕೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ರಾಜ್ಯಸಭಾ ಸದಸ್ಯರಾಗಿ ರಾಷ್ಟ್ರರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅಥವಾ ಪರಮೇಶ್ವರ್ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ದಿನ ಬೆಳಗಾದರೆ ಮುಖ್ಯಮಂತ್ರಿ, ಸಚಿವರ ಬದಲಾವಣೆಯ ಬಗ್ಗೆ ಚರ್ಚೆ ಮಾಡುವ ಬದಲು, ರಾಜಕೀಯ ಬಿಟ್ಟು ಅಭಿವೃದ್ಧಿಯ ಕುರಿತು ಚರ್ಚೆ ಮಾಡಿ ಎಂದು ಸಲಹೆ ನೀಡಿದರು.
ಬಸವರಾಜರಾಯರೆಡ್ಡಿ ಸೇರಿದಂತೆ ಯಾರೇ ಹೇಳಿಕೆ ನೀಡಿದರೂ ಅದನ್ನು ಮುಖ್ಯಮಂತ್ರಿಯವರೇ ಗಮನಿಸುತ್ತಾರೆ. ನಾವು ಆ ವಿಷಯದಲ್ಲಿ ಏನನ್ನೂ ಹೇಳುವುದಿಲ್ಲ ಎಂದರು. ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗೆ ಕಳುಹಿಸಲು ಕ್ರಮ ಕೈಗೊಂಡಿದ್ದೇವೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ವಿವಿಧ ದೇಶಗಳ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ. ಅವರನ್ನು ಹೊರಗೆ ಹಾಕಲು ಎಫ್‌ಆರ್‌ಆರ್‌ಒ ಜೊತೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಾವು ಪ್ರತಿನಿತ್ಯ ಪರಿಶೀಲನೆ ನಡೆಸುತ್ತಲೇ ಇರುತ್ತೇವೆ. ಅದು ನಿರಂತರ ಪ್ರಕ್ರಿಯೆ. ಪಾಸ್‌ಪೋರ್ಟ್ ಮತ್ತು ಪ್ರವೇಶದ ಅನುಮತಿ ವೀಸಾ ಅವಧಿ ನೋಡಿ ಅವಧಿ ಮುಗಿದ ನಂತರ ಉಳಿದಿರುವ ಅಥವಾ ಅಕ್ರಮವಾಗಿ ವಲಸೆ ಬಂದಿರುವವರನ್ನು ಪತ್ತೆ ಹಚ್ಚಿ ಹೊರಹಾಕಲಾಗುವುದು ಎಂದರು.
ಬಾಂಗ್ಲಾ ವಲಸಿಗರು ಸೇರಿದಂತೆ ಯಾವುದೇ ವಿಚಾರದಲ್ಲಿ ನಾವು ಮೃದುಧೋರಣೆ ಅನುಸರಿಸುವುದಿಲ್ಲ. ನುಸುಳುಕೋರರಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ. ಬಾಂಗ್ಲಾ ವಲಸಿಗರನ್ನು ಕರೆತಂದು ಮತ ಹಾಕಿಸಿಕೊಳ್ಳುವ ದುಃಸ್ಥಿತಿ ಕಾಂಗ್ರೆಸ್ ಪಕ್ಷಕ್ಕಿನ್ನೂ ಬಂದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್‌ನ ವರಿಷ್ಠ ಮಂಡಳಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸಭೆಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದ ವಾರ ಭೇಟಿ ಮಾಡಲು ನನಗೆ ಸಮಯ ನೀಡಲಾಗಿತ್ತು. ಆದರೆ ಆ ವೇಳೆ ನಾನು ಊರಿನಲ್ಲಿದ್ದೆ. ಮುಂದಿನ ವಾರ ಭೇಟಿಯಾಗುವುದಾಗಿ ಹೇಳಿದ್ದೆ. ಈಗ ಅವಕಾಶ ಸಿಕ್ಕರೆ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.
ಸಚಿವ ಪ್ರಿಯಾಂಕ ಖರ್ಗೆ ಇಂದು ಬೆಳಿಗ್ಗೆ ತಮ ಮನೆಗೆ ಭೇಟಿ ನೀಡಿರುವುದರಲ್ಲಿ ವಿಶೇಷ ಏನಿಲ್ಲ. ನಮ ಮನೆಯ ಹಿಂದಿನ ರಸ್ತೆಯಲ್ಲೇ ಅವರ ಮನೆಯಿದೆ. ದಿನಾ ಬರುತ್ತಲೇ ಇರುತ್ತಾರೆ. ನಮ ಮತ್ತು ಅವರ ಕುಟುಂಬ ಒಂದು. ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಬಂದಾಗ ನಾನು ಹೋಗಿ ಅವರನ್ನು ಮಾತನಾಡಿಸಿ, ಆರೋಗ್ಯ ವಿಚಾರಿಸಿಕೊಂಡು ಬರುತ್ತೇನೆ. ನನ್ನ ತಂದೆ ಅವರನ್ನು ಹಿರಿಯ ಮಗ ಎನ್ನುತ್ತಿದ್ದರು. ನನಗೂ ಅವರು ಹಿರಿಯಣ್ಣ. ನಮ ಸಂಬಂಧವೇ ಬೇರೆ ರೀತಿಯಲ್ಲಿದೆ. ಅದು ನಿಮಗೆ ಅರ್ಥವಾಗುವುದಿಲ್ಲ ಎಂದು ಹೇಳಿದರು.
- 73.72 ಲಕ್ಷ ರೂ ವಂಚಿಸಿದ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಮಹಿಳೆ..!
- ಬ್ರಿಕ್ಸ್ ರಾಷ್ಟ್ರಗಳ ಜೊತೆ ನಿಲ್ಲುವ ದೇಶಗಳಿಗೆ ಟ್ರಂಪ್ ‘ಟ್ಯಾಕ್ಸ್ ವಾರ್ನಿಂಗ್’
- ಆಪರೇಷನ್ ಸಿಂಧೂರ ವೇಳೆ ರಫೇಲ್ ಯುದ್ಧ ವಿಮಾನಗಳ ಬಗ್ಗೆ ಅಪಪ್ರಚಾರ ಮಾಡಿದ ನರಿಬುಬುದ್ದಿಯ ಚೀನಾ
- ಸದ್ಯಕ್ಕೆ ಗ್ರೇಟರ್ ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ ಇಲ್ಲ : ಡಿಕೆಶಿ
- ಹೃದಯಾಘಾತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲು ಮುಂದಾದ ಸರ್ಕಾರ