ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.
ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದಾರೆ. ಈ ವೇಳೆ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿದೆ. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದಾರೆ.
ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿಲ್ಲ. ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿದೆ. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸಿದ್ದಾರೆ. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ.
ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ. ನಂತರ ಅವರು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು.
ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವಿವರಣೆ ನೀಡಿದರು.