ಬೆಂಗಳೂರು,ನ.5– ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಹಾಗೂ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ನಡೆಸಿದ ಸಂಧಾನವು ವಿಫಲವಾಗಿದೆ.
ರೈತರ ಸಹನೆ ಕಟ್ಟೆ ಒಡೆದಿದ್ದು, ಬೆಳಗಾವಿಯ ಸುವರ್ಣಸೌಧದ ಬಳಿ ಪುಣೆ-ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4ನ್ನು ಬಂದ್ ಮಾಡಿದ್ದಾರೆ. ಮತ್ತೊಂದೆಡೆ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ, ಚಿಕ್ಕೋಡಿ, ಹುಕ್ಕೇರಿ ಸೇರಿದಂತೆ ಮತ್ತಿತರ ಕಡೆ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರ ಕಬ್ಬಿಗೆ ಬೆಲೆ ನಿಗದಿಪಡಿಸುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಗುಡುಗಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಬಂದು ರೈತರ ಮನವೊಲಿಸುವ ಪ್ರಯತ್ನ ನಡೆಸಿದರು. ಸರ್ಕಾರ ನಿಮ ಪರವಾಗಿದೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಪ್ರತಿಭಟನೆಯನ್ನು ಕೈಬಿಡಿ ಎಂದು ಮನವಿ ಮಾಡಿಕೊಂಡರು.
ಆದರೆ ಪಟ್ಟು ಸಡಿಲಿಸದ ರೈತರು ನಮಗೆ ಸ್ಥಳದಲ್ಲೇ ದರ ಘೋಷಣೆ ಮಾಡಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಈ ಸ್ಥಳದಿಂದ ಕದಲುವುದಿಲ್ಲ ಎಂದರು.
ಇನ್ನೊಂದೆಡೆ ರೈತರು ಹೆದ್ದಾರಿಗಳನ್ನು ಬಂದ್ ಮಾಡಿ ಅರೆಬೆತ್ತಲೆ ಮೆರವಣಿಗೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಕಣರೆಯಾಗಿದ್ದಾರೆ ಇವರನ್ನು ಹುಡುಕಿಕೊಡಿ ಎಂದು ಎಂದು ಶವಯಾತ್ರೆಯ ಅಣಕು ಪ್ರದರ್ಶನ ನಡೆಸಿದರು. ಇನ್ನು ಕೆಲವು ರೈತರು ಬಾರುಕೋಲು ಚಳವಳಿಯನ್ನೂ ಸಹ ನಡೆಸಿ ತಮ ಆಕ್ರೋಶವನ್ನು ಹೊರಹಾಕಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಬ್ಬಿಗೆ ಬೆಲೆ ನಿಗದಿ ಮಾಡದ ಕಾರಣ ನಾವು ಬೀದಿಗೆ ಬಿದ್ದಿದ್ದೇವೆ. ತತಕ್ಷಣವೇ ಪ್ರತಿ ಟನ್ ಕಬ್ಬಿಗೆ 3,500 ಬೆಲೆ ನಿಗದಿ ಹಾಗೂ ಹಿಂದಿನ ಎರಡು ವರ್ಷಗಳ ಬಾಕಿ ಪಾವತಿಸಬೇಕು. ಮತ್ತೊಂದೆಡೆ ಅನ್ನದಾತರು ಪಂಜಾಬ್ ಮಾದರಿಯ ಹೋರಾಟಕ್ಕೂ ಮುಂದಾಗಿದ್ದು, ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಕರೆ ಕೊಟ್ಟಿದ್ದಾರೆ.
ಅನೇಕ ಜಿಲ್ಲೆಗಳಲ್ಲಿ ಹೆದ್ದಾರಿಗಳು ನಿರ್ಬಂಧಿಸಲ್ಪಟ್ಟಿರುವುದರಿಂದ, ರೈತರ ಚಳವಳಿಯು ಈಗ ರಾಜ್ಯವು ಇತ್ತೀಚಿನ ದಿನಗಳಲ್ಲಿ ಕಂಡ ಅತಿದೊಡ್ಡ ಕೃಷಿ ಸಂಘರ್ಷಗಳಲ್ಲಿ ಒಂದಾಗಿದೆ, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ರಾಜಕೀಯ ಸವಾಲನ್ನು ತಂದೊಡ್ಡಿದೆ. ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಬಿಜೆಪಿ ನಾಯಕರು ರೈತರ ಜೊತೆ ರಾತ್ರಿ ಇಡೀ ಕೊರೆಯುವ ಚಳಿಯಲ್ಲೇ ಮಲಗಿದ್ದರು.
ಕಬ್ಬು ಬೆಳೆಗಾರರ ಹೋರಾಟಕ್ಕೆ ನೆರೆಯ ರಾಜ್ಯ ಮಹಾರಾಷ್ಟ್ರದ ರಾಜಕಾರಣಿಗಳು, ರೈತ ನಾಯಕರು ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ರಾಷ್ಟ್ರವ್ಯಾಪಿ ರೈತ ಚಳುವಳಿಯ ನಾಯಕ ರಾಜು ಶೆಟ್ಟಿ ಅವರ ಆಗಮನ ಗಮನ ಸೆಳೆದಿದೆ. ಆದರೆ ರಾಜ್ಯವನ್ನು ಆಳುವ ಪಕ್ಷದ ನಾಯಕರಿಂದ ಯಾವುದೇ ಸ್ಪಂದನೆ ಕಾಣಿಸುತ್ತಿಲ್ಲ. ಇತ್ತ ಸಕ್ಕರೆ ಕಾರ್ಖಾನೆ ಮಾಲೀಕರು ಜಾಣ ಮೌನ ವಹಿಸಿರುವುದು ಚರ್ಚೆಗೆ ಕಾರಣವಾಗಿದೆ.
ಗುರ್ಲಾಪುರ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟ ನಡೆಯುತ್ತಿದ್ದು, ಮನೆಮಠ ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲೇ ರೈತರು ಜೀವನ ನಡೆಸುತ್ತಿದ್ದಾರೆ. ರಸ್ತೆಯಲ್ಲಿಯೇ ಊಟ, ನಿದ್ದೆ ಎಲ್ಲವೂ ನಡೆಯುತ್ತಿದೆ. ರಸ್ತೆ ಪಕ್ಕದಲ್ಲಿ ರೈತರಿಗಾಗಿ ಬೃಹತ್ ಪ್ರಮಾಣದ ಊಟ ತಯಾರಿಸಲಾಗುತ್ತಿದೆ. ಅಕ್ಕಪಕ್ಕದ ಗ್ರಾಮಸ್ಥರು ರೈತರಿಗೆ ದವಸ ಧಾನ್ಯಗಳನ್ನು ನೀಡಿದ್ದಾರೆ.
ಕನ್ನಡ ಸಂಘಟನೆಗಳ ಬೆಂಬಲದೊಂದಿಗೆ ರೈತರು ಅಥಣಿಯಲ್ಲಿ ಬಂದ್ಗೆ ಕರೆ ನೀಡಿದ್ದು, ಇದು ಚಿಕ್ಕೋಡಿ, ಗುರ್ಲಾಪುರ, ಜಂಬೋಟಿ ಮತ್ತು ಗೋಕಾಕ್ಗೆ ವ್ಯಾಪಿಸಿ, ಸಾಮಾನ್ಯ ಜನಜೀವನ ಸ್ಥಗಿತಗೊಂಡಿದೆ. ಅಂಗಡಿಗಳು ಮತ್ತು ವ್ಯವಹಾರಗಳು ಸ್ವಯಂಪ್ರೇರಣೆಯಿಂದ ಮುಚ್ಚಲ್ಪಟ್ಟಿದ್ದರೆ, ಗೋಕಾಕ್-ಅಥಣಿ ರಸ್ತೆ ಮತ್ತು ದರೂರ್-ಹಲ್ಯಾಲ್ ಸೇತುವೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ರೈತರು ಪ್ರಮುಖ ಹೆದ್ದಾರಿಗಳನ್ನು ತಡೆದಿದ್ದಾರೆ.
ರೈತರ ಬೇಡಿಕೆಗಳೇನು?:
ಸರ್ಕಾರವು ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆ ಘೋಷಿಸಬೇಕು ಮತ್ತು ಬಾಕಿ ಪಾವತಿಗಳನ್ನು ವಿಳಂಬ ಮಾಡದೆ ಪಾವತಿಸಬೇಕೆಂದು ಒತ್ತಾಯಿಸಿದ್ದು, ನಾವು ಸರ್ಕಾರಕ್ಕೆ ಸಂಜೆಯವರೆಗೆ ಸಮಯ ನೀಡುತ್ತಿದ್ದೇವೆ. ಸಕಾರಾತಕವಾಗಿ ಪ್ರತಿಕ್ರಿಯಿಸಲು ವಿಫಲವಾದರೆ, ರಾಜ್ಯಾದ್ಯಂತ ತೀವ್ರ ಆಂದೋಲನ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿ ಟನ್ ಕಬ್ಬಿಗೆ ಕೇಂದ್ರ, ರಾಜ್ಯ ತಲಾ 5 ಸಾವಿರ ರೂ ತೆರಿಗೆ ತೆಗೆದುಕೊಳ್ಳುತ್ತೆ. ರಾಜ್ಯ, ಕೇಂದ್ರ ಸರ್ಕಾರ ತಲಾ ಒಂದು ಸಾವಿರ ರೂ ತೆರಿಗೆ ಹಣ ರೈತರಿಗೆ ನೀಡಲಿ. ಸಕ್ಕರೆ ಕಾರ್ಖಾನೆಯಿಂದ 3,500, ಕೇಂದ್ರ, ರಾಜ್ಯದಿಂದ 2 ಸಾವಿರ ರೂ.ನಂತೆ. ಆ ಮೂಲಕ ಪ್ರತಿ ಟನ್ ಕಬ್ಬಿಗೆ 5500 ರೂ. ನೀಡಬೇಕೆಂದು ಮತ್ತೊಂದು ಬೇಡಿಕೆಯಾಗಿದೆ.
ಹತ್ತು ವರ್ಷಗಳ ಹಿಂದೆ ಸಕ್ಕರೆ ಕೆ.ಜಿ.ಗೆ 27 ಇತ್ತು, ಆಗಲೂ ರೈತರಿಗೆ 3,000 ಮಾತ್ರ ಸಿಕ್ಕಿತು. ಈಗ ಅದು 50 ತಲುಪಿದರೂ ರೈತನ ಪಾಲಿನ ದರದಲ್ಲಿ ಬದಲಾವಣೆ ಇಲ್ಲ. ರೈತರು ಹೇಳುವಂತೆ ಕಾರ್ಖಾನೆ ಮಾಲೀಕರು ನಮಿಂದ 100 ರೂ.ತೆಗೆದುಕೊಳ್ಳುತ್ತಾರೆ. ಅದರಲ್ಲಿ 40 ರೂ. ತಾವು ಇಟ್ಟುಕೊಂಡು 60 ರೂ.ರೈತನಿಗೆ ನೀಡಲಿ. ಆದರೆ 100 ರೂ.ಗಳಲ್ಲಿ 90 ರೂ. ತಮ ಜೇಬಿಗೆ ಹಾಕಿಕೊಂಡು 10 ರೂ.ಮಾತ್ರ ಬೆಳೆಗಾರರಿಗೆ ಕೊಟ್ಟು ಅನ್ಯಾಯ ಮಾಡುತ್ತಿದ್ದಾರೆ ಎಂಬ ಆರೋಪ ಇದೆ.
