ಬೆಂಗಳೂರು, ಮೇ 3- ಹಿಂದು ಸಂಘಟನೆಗಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಶಂಕಿತ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖುದ್ದು ಮಂಗಳೂರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಮತ್ತೊಂದೆಡೆ ರಾಜ್ಯದ ಹಲವು ಸೂಕ್ಷ್ಮ ಜಿಲ್ಲೆಗಳಲ್ಲಿ ಪೊಲೀಸರು ವಿಶೇಷ ಪೆರೇಡ್ ಮೂಲಕ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮೊನ್ನೆ ರಾತ್ರಿ 8.30ರ ಸುಮಾರಿನಲ್ಲಿ ಸುಹಾಸ್ ಶೆಟ್ಟಿಯನ್ನು ಜನ ಸಂದಣಿ ಇರುವ ಪ್ರದೇಶದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ತಕ್ಷಣವೇ ಬಿರುಸಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಶಂಕಿತ ಎಂಟು ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಆದರೆ ಪೊಲೀಸ್ ಇಲಾಖೆಯಿಂದ ಬಂಧನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ಮಂಗಳೂರಿಗೆ ಭೇಟಿ ನೀಡಿದ್ದು, ಅಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಮಂಗಳೂರಿನಲ್ಲಿ ಪದೇ ಪದೇ ಕೋಮು ಪ್ರಚೋದಿತ ದುರ್ಘಟನೆಗಳು ನಡೆಯುತ್ತಿರುವ ಬಗ್ಗೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸರು ಯಾವುದೇ ಪಕ್ಷಪಾತ ಇಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಷ್ಟೆ ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಏಕಮುಖವಾಗಿ ಕೆಲಸ ಮಾಡುತ್ತಿರುವುದರಿಂದ ಪದೇ ಪದೇ ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ, ಆತನಿಗೆ ಒಂದೂವರೆ ವರ್ಷದಲ್ಲೇ ಜಾಮೀನು ಸಿಕ್ಕಿದ್ದು ಹೇಗೆ ? ಕೊಲೆಯಂತಹ ಕೃತ್ಯಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಕರಾವಳಿ ಭಾಗದ ಪ್ರತಿಯೊಂದು ಸಣ್ಣ ಘಟನೆಗೂ ಕೋಮು ಬಣ್ಣ ದೊರೆಯುತ್ತಿದೆ. ರಾಜ್ಯದ ಯಾವ ಭಾಗದಲ್ಲೂ ಈ ರೀತಿಯ ಸೂಕ್ಷ್ಮ ವಾತಾವರಣ ಇಲ್ಲ. ಇನ್ನೂ ಮುಂದೆ ಕೋಮುವಾದ ಹಾಗೂ ಮೂಲಭೂತವಾದ ಎರಡನ್ನೂ ಕಟ್ಟುನಿಟ್ಟಾಗಿ ಎಡೆಮುರಿ ಕಟ್ಟಬೇಕು. ಎಷ್ಟೇ ಪ್ರಬಲಶಾಲಿಗಳಾಗಿದ್ದರೂ ಮುಲ್ಲಾಜಿಲ್ಲದೆ ಕಾನೂನಿನ ಸಂಕೋಲೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸುಹಾಸ್ ಕೊಲೆಯ ಬಳಿಕ ಪರಿಸ್ಥಿತಿ ನಿಯಂತ್ರಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ಪಡೆದಿದ್ದಾರೆ. ಅಗತ್ಯವಾದರೆ ಬೇರೆಯ ಜಿಲ್ಲೆಗಳಿಂದ ಅಥವಾ ಬೆಂಗಳೂರಿನಿಂದ ಹೆಚ್ಚಿನ ಭದ್ರತಾಪಡೆಗಳನ್ನು ಕರೆಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಬೆಳಗಾವಿ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮೈಸೂರಿನಲ್ಲಿ ಪಥಸಂಚಲನ ನಡೆಸಿ ನಾಗರಿಕರಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಯಾವಾಗ ಮತ್ತೇನು ಘಟಿಸಲಿದೆಯೋ ಎಂಬ ದುಗುಡದಲ್ಲಿ ಜನ ಸಾಮಾನ್ಯರು ದಿನ ಕಳೆಯುವಂತಾಗಿದೆ.
ಮಂಗಳೂರಿನ ಘಟನೆಯ ಬಗ್ಗೆ ಖುದ್ದು ಮುಖ್ಯಮಂತ್ರಿಯವರು ಕಾಳಜಿ ವಹಿಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಸೂಚನೆ ನೀಡಿದರು. ಸಿಎಂ ಸೂಚನೆಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿಗೆ ತೆರಳಿದ್ದಾರೆ.
ಕರಾವಳಿ ಬೂದಿ ಮುಚ್ಚಿದ ಕೆಂಡಂತಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತರು ಸುಹಾಸ್ ಕೊಲೆಯಿಂದಾಗಿ ಕೆರಳಿ ಕೆಂಡವಾಗಿದ್ದಾರೆ. ನಿನ್ನೆ ಶವದ ಮೆರವಣಿಗೆಯ ವೇಳೆ ಭಾರೀ ಆಕ್ರೋಶ ಘೋಷಣೆಗಳು ಕೇಳಿ ಬಂದಿದ್ದವು, ರಸ್ತೆಯುದ್ದಕ್ಕೂ ಜನ ಸಾಲುಗಟ್ಟಿ ಮೆರವಣಿಗೆಯಲ್ಲಿ ಧಾವಿಸಿ ಬಂದಿದ್ದರು.