Saturday, April 13, 2024
Homeರಾಜಕೀಯಬಿಜೆಪಿಗೆ ಬೆಂಬಲ ಘೋಷಿಸಿ ಸ್ಪರ್ಧೆಯಿಂದ ಹಿಂದೆ ಸರಿದ ಸುಮಲತಾ

ಬಿಜೆಪಿಗೆ ಬೆಂಬಲ ಘೋಷಿಸಿ ಸ್ಪರ್ಧೆಯಿಂದ ಹಿಂದೆ ಸರಿದ ಸುಮಲತಾ

ಮಂಡ್ಯ, ಏ.3- ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಯಿಂದ ಹಿಂದೆ ಸರಿದ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಸೇರುವುದಾಗಿ ಪ್ರಕಟಿಸಿದ್ದಾರೆ. ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ಬೆಂಬಲಿಗರ ಸಭೆ ನಡೆಸಿ ಮಾತ ನಾಡಿದ ಸುಮಲತಾ, ಕಳೆದ ಐದು ವರ್ಷಗಳ ಸಂಸದೆಯಾಗಿ ತಾವು ಮಾಡಿದ ಸಾಧನೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಸುಮಲತಾ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಟೀ ಅಂಗಡಿ, ಹಳ್ಳಿ ಕಟ್ಟೆಯ ಮೇಲೆ ಅಥವಾ ಮಾಧ್ಯಮಗಳ ಮುಂದೆ ಪ್ರಶ್ನಿಸುವವರಿಗೆ ನನ್ನ ಬೆಂಬಲಿಗರು ಉತ್ತರ ನೀಡಬೇಕು. ನಾನು ಮಂಡ್ಯದ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ ಎಂದರು. ಈಗ ಮತ್ತೊಂದು ಚುನಾವಣೆ, 2019ಕ್ಕಿಂತ ಹೆಚ್ಚಿನ ಸವಾಲು ನಮ್ಮ ಮುಂದೆ ಈಗ ಇದೆ. ಪಕ್ಷೇತರಳಾಗಿ ಸ್ಪರ್ಧಿಸಿದ್ದಾಗ ಬಿಜೆಪಿ ನನಗೆ ಬಾಹ್ಯ ಬೆಂಬಲ ಕೊಟ್ಟಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಪ್ರಚಾರ ಸಭೆಯಲ್ಲಿ ಅಂಬರೀಶ್ ಹೆಸರನ್ನು ಪ್ರಸ್ತಾಪಿಸಿ ಸುಮಲತಾರಿಗೆ ಮತ ಹಾಕಿ ಎಂದು ಕರೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ನಾನು ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದೆ ಎಂದರು. ಇಂದು ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಾಗಿದೆ.

ಬದಲಾದ ಪರಿಸ್ಥಿತಿಯಲ್ಲಿ ಯಾರು ಸಂಸದ ರಾಗುತ್ತಾರೋ ಗೋತ್ತಿಲ್ಲ. ನಾನು ಕೊನೆಯ ಕ್ಷಣದವರೆಗು ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಲಿ ಎಂದು ಪ್ರಯತ್ನ ಪಟ್ಟೆ. ನಾನಾ ರೀತಿಯ ಚರ್ಚೆಗಳು ನಡೆದವು. ಮಂಡ್ಯದ ಬದಲಿಗೆ ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಸೇರಿ ಬೇರೆ ಯಾವುದೇ ಕ್ಷೇತ್ರಗಳನ್ನಾದರೂ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ನನಗೆ ಸಲಹೆ ನೀಡಿದರು. ನಾನು ಎಲ್ಲೂ ಹೋಗಲ್ಲ. ಇದ್ದರೂ, ಗೆದ್ದರೂ, ಸೋತರು ಮಂಡ್ಯದಲ್ಲೇ ಎಂದು ನಿರ್ಧರಿಸಿದ್ದೇನೆ ಎಂದರು.

ಅಂಬರೀಶ್ ಎಂದಿಗೂ ಸ್ವಾರ್ಥ ರಾಜಕಾರಣ ಮಾಡಿಲ್ಲ. ಅಂಬರೀಶ್ ನಮಗೆ ಸದಾ ಕಾಲ ಮಾರ್ಗದರ್ಶಕರು ಎಂದಾಗ, ಕಾರ್ಯಕರ್ತರಿಂದ ಪಕ್ಷೇತರರಾಗಿ ಸ್ರ್ಪಸುವಂತೆ ಒತ್ತಾಯ ಕೇಳಿ ಬಂತು. ಅದಕ್ಕೆ ಕಣ್ಣೀರು ಹಾಕುತ್ತಾ ಪ್ರತಿಕ್ರಿಯಿಸಿದ ಸುಮಲತಾ, ತಮ್ಮ ವಿರುದ್ಧ ಟೀಕೆಗಳು, ಹೊಗಳಿಕೆಗಳು ಸರ್ವೇ ಸಾಮಾನ್ಯ ಬಿಡಿ, ಎಲ್ಲವನ್ನೂ ದಾಟಿಕೊಂಡೆ ಬಂದಿದ್ದೇನೆ.

ಮೊನ್ನೆ ಆಪ್ತ ವಲಯದ ಬೆಂಬಲಿಗರು ಬೆಂಗಳೂರಿಗೆ ಬಂದು ಚರ್ಚೆ ಮಾಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆ ಮಾಡಿ ಎಂದು ಒತ್ತಡ ಹಾಕಿದರು. ಕೆಲವರು ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿ, ಬೆಂಬಲ ಕೊಡಿ ಎಂದಿದ್ದರು. ಇನ್ನೂ ಕೆಲವು ನೀವು ಯಾವ ನಿರ್ಧಾರ ತೆಗೆದುಕೊಂಡರು ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದಿದ್ದರು. ನಾನು ಆಪ್ತರು, ವರಿಷ್ಠರ ಜೊತೆ ಚರ್ಚೆ ಮಾಡಿದ್ದೇನೆ.

ದೆಹಲಿಯಿಂದ ಹಿಡಿದ ನಮ್ಮ ಮನೆಯವರೆಗೂ ಎಲ್ಲರ ಜೊತೆಯಲ್ಲೂ ಚರ್ಚಿಸಿದ್ದೇನೆ. ಎಂಪಿ ಚುನಾವಣೆ ಹುಡುಗಾಟ ಅಲ್ಲ. ನಾವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪಕ್ಷೇತರರಾಗಿ ಸ್ರ್ಪಧಿಸುವುದಾದರೆ ಯಾವುದೋ ದ್ವೇಷ ಮತ್ತು ಹಠಕ್ಕೆ ಬಿದ್ದು ಸ್ಪರ್ಧೆ ಮಾಡಿದ್ದೇನೆ ಎಂದು ಭಾವಿಸಲಾಗುತ್ತದೆ. ಅದರಿಂದ ಯಾರಿಗೆ ಲಾಭ ಎಂಬ ಪ್ರಶ್ನೆಯೂ ಇದೆ ಎಂದರು.

ನಾನು ನನ್ನ ಸ್ವಾರ್ಥ ನೋಡಿಕೊಳ್ಳುವುದಾದರೆ ಬೇರೆ ಕ್ಷೇತ್ರಗಳಿದ್ದವು. ಕಿಪಿಕಲ್ ರಾಜಕಾರಣಿಯಾಗಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಮಂಡ್ಯ ಬಿಟ್ಟರೆ ನನಗೆ ರಾಜಕೀಯವೇ ಬೇಡ. ನನ್ನನ್ನು ನಂಬಿದವರು, ಬೆಂಬಲಿಸಿದವರು, ಅಂಬರೀಶ್‍ರನ್ನು ಪ್ರೀತಿಸುವವರನ್ನು ಬಿಟ್ಟು ಹೋದರೆ ಮಂಡ್ಯದ ಸೊಸೆ ಎನಿಸಿಕೊಳ್ಳಲು ಅರ್ಹಳಲಾಗುವುದಿಲ್ಲ ಎಂದರು.

ಕಾಂಗ್ರೆಸ್ ಸೇರುವಂತೆ ಕೆಲವರು ಹೇಳಿದ್ದಾರೆ. ಅಲ್ಲಿ ನಡೆಯುತ್ತಿರುವ ಒಳ ಮಾತುಗಳು ಜನ ಸಾಮಾನ್ಯರಿಗೆ ಅರ್ಥವಾಗಲ್ಲ. ಕಾಂಗ್ರೆಸ್‍ನ ಹಿರಿಯ ನಾಯಕರೊಬ್ಬರು ಸುಮಲತಾರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ನನಗೆ ಗೌರವ ಇಲ್ಲದ ಕಡೆ ನಾನು ಹೋಗಲು ಸಾಧ್ಯವಾಗುತ್ತಾ. ಅಂಬರೀಶ್ ಸ್ವಾಭಿಮಾನದ ಗಂಡು, ನಾನು ಅವರಿಂದ ಸ್ವಾಭಿಮಾನ ಕಲಿತಿದ್ದೇನೆ. ಗೌರವ ಇಲ್ಲದ ಕಡೆ ಹೋಗಿ ಎಂದು ನನ್ನನ್ನು ಒತ್ತಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

ಸಂಸದ ಸ್ಥಾನ ಬದಲಾಗಬಹುದು, ಈ ಮಣ್ಣಿನ ಸೊಸೆ ಎಂಬುದನ್ನು ಯಾರು ಕಿತ್ತುಕೊಳ್ಳಲಾಗುವುದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಆಸರೆ ತೆಗೆದುಕೊಂಡು ನನ್ನ ಕಾರ್ಯಕರ್ತರಿಗೆ ಶಕ್ತಿ ತುಂಬುವುದಾದರೆ ಆ ನಿರ್ಧಾರವನ್ನೇ ನಾನು ತೆಗೆದುಕೊಳ್ಳಬೇಕಾಗುತ್ತದೆ, ನೀವು ಬೇಡ ಎನ್ನುವವರ ಪಕ್ಷಕ್ಕೆ ನಾನು ಹೋಗುವುದಿಲ್ಲ ಎಂದರು.

ಪಕ್ಷೇತರರಾಗಿದ್ದರೂ ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದ ಬಿಜೆಪಿ ಸರ್ಕಾರ 4 ಸಾವಿರ ಕೋಟಿ ಅನುದಾನ ನೀಡಿದೆ. ಪ್ರತಿ ವಿಷಯದಲ್ಲೂ ನನ್ನೊಂದಿಗೆ ಚರ್ಚೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಖುದ್ದು ಪ್ರಧಾನಿಯೇ ನನ್ನೊಂದಿಗೆ ಚರ್ಚೆ ಮಾಡಿ ನಿಮ್ಮಂತಹ ನಾಯಕರು ನಮಗೆ ಬೇಕು, ಬೇರೆ ಪಕ್ಷಕ್ಕೆ ಹೋಗಬೇಡಿ ಎಂದಿದ್ದಾರೆ. ಅದು ನಾಯಕತ್ವ ಬೆಳೆಸುವ ಗುಣ ಎಂದರು.

ಭ್ರಷ್ಟಚಾರ ರಹಿತ ನಾಯಕತ್ವವನ್ನು ನಾನು ಒಪ್ಪಿಕೊಳ್ಳುತ್ತೇನೆ. ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ ಮಂಡ್ಯವನ್ನು ಬಿಟ್ಟು ಹೋಗುತ್ತಿಲ್ಲ. ಒಂದು ಪಕ್ಷದ ಶಕ್ತಿ ಬಳಸಿಕೊಂಡು ಕೆಲಸ ಮಾಡುತ್ತೇನೆ. ಸಂಸದಳಾಗಿ ಇಲ್ಲದೆ ಇರಬಹುದು, ಮುಂದೆ ಬೇರೆನೋ ಆಗಬಹುದು.ಲೋಕಸಭೆ ಟಿಕೆಟ್ ಬಿಟ್ಟುಕೊಟ್ಟು , ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ.

ಸೋತವರು ಕೂಡ ಕ್ಷೇತ್ರ ಬಿಟ್ಟುಕೊಡುವುದಿಲ್ಲ. ನಾನು ಗೆದ್ದ ಕ್ಷೇತ್ರವನ್ನು ಬಿಟ್ಟು ಕೊಡುತ್ತಿದ್ದೇನೆ. 50 ವರ್ಷಗಳ ಬಳಿಕ ರಾಜ್ಯದಲ್ಲಿ ಪಕ್ಷೇತರರಾಗಿ ಗೆದ್ದಿದ್ದು ಮಂಡ್ಯದಲ್ಲಿ ಮಾತ್ರ. ಸರ್ಕಾರವನ್ನು ಎದುರಿಸಿ ಗೆದ್ದಿರುವ ಬಗ್ಗೆ ಎಲ್ಲೆಡೆ ಅಭಿಮಾನದಿಂದ ಮಾತನಾಡುತ್ತಾರೆ. ನಾನು ನಿಮಗೆ ಪ್ರಮಾಣ ಮಾಡುತ್ತೇನೆ, ಮಂಡ್ಯದ ಋಣವನ್ನು ಎಂದೆಂದಿಗೂ ಬಿಡುವುದಿಲ್ಲ. ನಿಮ್ಮ ಪ್ರೀತಿ ಸದಾ ಇರಲಿ ಎಂದರು.

ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸ್ಪರ್ಧೆ ಮಾಡಿರುವ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ಬಗ್ಗೆ ನೇರವಾಗಿ ಉತ್ತರ ನೀಡಲಿಲ್ಲ. ನಾನಿನ್ನೂ ಪಕ್ಷೇತರಳಾಗಿದ್ದೇನೆ. ಮೊದಲು ಬಿಜೆಪಿಯನ್ನು ಅಕೃತವಾಗಿ ಸೇರುತ್ತೇನೆ. ನಂತರ ಪಕ್ಷ ಹೇಳಿದ ಸೂಚನೆಯನ್ನು ಪಾಲಿಸುತ್ತೇನೆ ಎಂದರು.
ನಟ ದರ್ಶನ್ ಅವರು ಮಂಡ್ಯದಲ್ಲಿ ಪ್ರಚಾರಕ್ಕೆ ಬರುವ ಬಗ್ಗೆ ಅವರೇ ನಿರ್ಧಾರ ತಿಳಿಸಬೇಕು. ನಾನು ಸ್ಪರ್ಧೆ ಮಾಡಿದ್ದರೆ ಅವರು ಬರುವುದಾಗಿ ಹೇಳಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೋತ್ತಿಲ್ಲಎಂದರು.

ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ.ಪಕ್ಷದ ನಿಲುವೇ ನನ್ನ ನಿಲುವಾಗಿರುತ್ತೆ. ಇನ್ನೂ ಕೆಲವೇ ದಿನಗಳಲ್ಲಿ ಬಿಜೆಪಿ ಸೇರುತ್ತೇನೆ. ನನ್ನ ನಿರ್ಧಾರಕ್ಕೆ ಕೆಲವರು ಬೆಂಬಲ ನೀಡುತ್ತಾರೆ, ಇನ್ನೂ ಕೆಲವರು ಮುನಿಸಿಕೊಳ್ಳುತ್ತಾರೆ. ಆದರೂ ನನ್ನ ಜೊತೆ ಇರುತ್ತಾರೆ. ಶೇಕಡ ನೂರಕ್ಕೆ ನೂರರಷ್ಟು ಎಲ್ಲರನ್ನೂ ಮೆಚ್ಚಿಸಲಾಗುವುದಿಲ್ಲ ಎಂದು ಸುಮಲತಾ ಹೇಳಿದರು.

RELATED ARTICLES

Latest News