Wednesday, July 9, 2025
Homeರಾಜಕೀಯ | Politicsನೀವು ಅರ್ಧನಾರೀಶ್ವರರೋ, ಪುರುಷ ಪುಂಗವರೋ..? : ಹರಿಪ್ರಸಾದ್‌ಗೆ ಸುನೀಲ್‌ಕುಮಾರ್ ಪ್ರಶ್ನೆ

ನೀವು ಅರ್ಧನಾರೀಶ್ವರರೋ, ಪುರುಷ ಪುಂಗವರೋ..? : ಹರಿಪ್ರಸಾದ್‌ಗೆ ಸುನೀಲ್‌ಕುಮಾರ್ ಪ್ರಶ್ನೆ

Sunil Kumar Karkala Attack on BK hariprasad

ಬೆಂಗಳೂರು,ಜು.9 – ಇಂದಿರಾ ಗಾಂಧಿ, ಸೋನಿಯಾಗಾಂಧಿ ಎದುರು ಕೈಕಟ್ಟಿ ನಿಂತ ನಿಮ್ಮಂಥ ಘಟಾನುಘಟಿ ಚುನಾವಣಾ ಕಲಿ ಗಳೆಲ್ಲ ಅರ್ಧನಾರೀಶ್ವರರೋ, ಪುರುಷ ಪುಂಗವರೋ? ಎಂದು ಶಾಸಕ ಸುನೀಲ್‌ಕುಮಾರ್ ಅವರು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಸಾಲು ಸಾಲು ಪೋಸ್ಟ್ ಮಾಡಿರುವ ಸುನಿಲ್ ಕುಮಾರ್, ಹರಿಪ್ರಸಾದ್ ಅವರೇ ಮೊದಲನೆಯದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಅಧ್ಯಕ್ಷರ ಆಯ್ಕೆ ಮಾಡುವುದಕ್ಕೆ ಬಿಜೆಪಿ ತನ್ನದೇ ಆದ ನಿಯಮ ಹಾಗೂ ಪದ್ಧತಿಯನ್ನು ಹೊಂದಿದ್ದು ಆ ಪ್ರಕ್ರಿಯೆಯ ಭಾಗ ಈಗ ಅಂತಿಮ ಹಂತಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

ದಶಕಗಳ ಕಾಲ ಎಐಸಿಸಿ ಅಖಾಡದಲ್ಲಿ ಅಲೆದಾಡಿದ ನಿಮಗೆ ಪ್ರತಿಸ್ಪರ್ಧಿ ರಾಜಕೀಯ ಪಕ್ಷವೊಂದರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಸಾಮಾನ್ಯ ಜ್ಞಾನದ ಕೊರತೆ ಇರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಎರಡನೆಯದಾಗಿ ತಾವು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಅರ್ಧನಾರೀಶ್ವರನನ್ನು ಬೇಕಾದರೂ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಭಾರತೀಯ ತತ್ವಶಾಸ್ತ್ರದ ಮಹೋನ್ನತ ಚಿಂತನೆಯೊಂದನ್ನು ಅಣಕ ಮಾಡಿದ್ದೀರಿ. ಅರ್ಧನಾರೀಶ್ವರ ಎಂಬುದರ ಅರ್ಥ ವಿಸ್ತಾರವನ್ನು ನಿಮಗೆ ಪಾಠ ಮಾಡಬೇಕಾದ ಅನಿವಾರ್ಯತೆ ನಮಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಆದರೆ ಈ ಪದವನ್ನು ವ್ಯಂಗ್ಯಕ್ಕೆ ಬಳಸಿಕೊಂಡ ನೀವು ನಾರೀ ಶಕ್ತಿ ಹಾಗೂ ನಾರಿ ತತ್ವವನ್ನೇ ಅಪಮಾನಕ್ಕೆ ಗುರಿ ಮಾಡಿದ್ದೀರಿ. ಇತ್ತೀಚಿನ ದಿನಗಳಲ್ಲಿ ಅತೀವವಾಗಿ ಮಹಿಳಾಪರ ಕಾಳಜಿ ವ್ಯಕ್ತಪಡಿಸುತ್ತಿರುವ ನಿಮ್ಮ ಪಕ್ಷ ಈ ವಿಚಾರವನ್ನು ಹೇಗೆ ಗ್ರಹಿಸುತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿ ಎಂದು ನಾವು ಬಯಸುವುದಿಲ್ಲ. ನಿಮಗೆ ನಿಮ್ಮದೇ ರೀತಿಯಲ್ಲಿ ಉತ್ತರ ನೀಡಬೇಕಷ್ಟೇ ಎಂದು ವಾಗ್ದಳಿ ನಡೆಸಿದ್ದಾರೆ.

ಮತ್ತೊಂದು ಪೋಸ್ಟ್ ಮಾಡಿರುವ ಸುನಿಲ್ ಕುಮಾರ್, ಹದೆಗೆಟ್ಟ ಕಾನೂನು ವ್ಯವಸ್ಥೆ ಒಂದು ರಾಜ್ಯ ಅನಭಿವೃದ್ಧಿಯ ಕೂಪದಲ್ಲಿ ಮುಳುಗುತ್ತಿರುವುದರ ಸಂಕೇತ.ರಾಜ್ಯದಲ್ಲಿ ಮಂಗಳವಾರ ತಡರಾತ್ರಿ ನಡೆದ ಎನ್ ಐಎ ದಾಳಿ ಕಾನೂನು ಸುವ್ಯವಸ್ಥೆ ಹಾಗೂ ಗೃಹ ಇಲಾಖೆಯ ದಕ್ಷತೆ ಪಾತಾಳ ತಲುಪಿರುವುದನ್ನು ಬೆತ್ತಲೆಗೊಳಿಸಿದೆ. ಸರ್ಕಾರಿ ನೌಕರರೇ ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಹಾಗೂ ಕಾರಾಗೃಹದ ಸಿಬ್ಬಂದಿಗಳು ಅಂತಾರಾಷ್ಟ್ರೀಯ ಭಯೋತ್ಪಾದಕರ ಜತೆ ಕೈ ಜೋಡಿಸಿ ಸದ್ದಿಲ್ಲದೇ ಉಗ್ರ ಚಟುವಟಿಕೆಗೆ ಪೋಷಣೆ ನೀಡಿದ್ದು ಆತಂಕಕಾರಿಯಷ್ಟೇ ಅಲ್ಲ, ಸರ್ಕಾರದ ಟೆರರ್ ಸಾಫ್ಟ್ ಕಾರ್ನರ್ ಧೋರಣೆಯ ಪ್ರತಿಬಿಂಬ ಎಂದು ಟೀಕಿಸಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಲಷ್ಕರ್ ಉಗ್ರ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಪಾಷಾ ಎಂಬ ಭಯೋತ್ಪಾದಕನಿಗೆ ಗೃಹ ಇಲಾಖೆಯ ಸಿಬ್ಬಂದಿಯೇ ಸಹಕಾರ ಕೊಡುತ್ತಿದ್ದರೂ ರಾಜ್ಯದ ಭಯೋತ್ಪಾದಕ ನಿಗ್ರಹ ದಳ ಕಡಲೆಪುರಿ ತಿನ್ನುತ್ತಿತ್ತೇ ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ಹಾಗೂ ಗೃಹ ಸಚಿವರ ಕಣ್ಣಂಚಿನಲ್ಲೇ ಇಂಥ ವಿದ್ಯಮಾನ ನಡೆದಿದ್ದರೂ ರಾಜ್ಯ ಪೊಲೀಸರು ಕೈಕಟ್ಟಿ ಕುಳಿತಿದ್ದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ಖುರ್ಚಿಗಾಗಿ ನಡೆಯುತ್ತಿರುವ ಸಂಗ್ರಾಮದಲ್ಲಿ ರಾಜ್ಯದ ಭವಿಷ್ಯವನ್ನು ಸ್ಫೋಟಗೊಳಿಸಬೇಡಿ. ಕಿಂಚಿತ್ತಾದರೂ ಜವಾಬ್ದಾರಿ ತೋರಿ ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

Latest News