Friday, November 22, 2024
Homeರಾಜಕೀಯ | Politicsಒಂದೇ ಒಂದು ಗುದ್ದಲಿ ಪೂಜೆ ಮಾಡಿಲ್ಲ, ಸರ್ಕಾರದ ಸಾಧನೆ ಶೂನ್ಯ : ಸುನಿಲ್ ಕುಮಾರ್

ಒಂದೇ ಒಂದು ಗುದ್ದಲಿ ಪೂಜೆ ಮಾಡಿಲ್ಲ, ಸರ್ಕಾರದ ಸಾಧನೆ ಶೂನ್ಯ : ಸುನಿಲ್ ಕುಮಾರ್

ಬೆಂಗಳೂರು,ಮೇ 15- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯ ಶೂನ್ಯ. ನಾವೆಲ್ಲಾ ಶಾಸಕರು ಒಂದು ವರ್ಷದಿಂದ ಒಂದೇ ಒಂದು ಗುದ್ದಲಿ ಪೂಜೆ ಕೂಡ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ಕುಮಾರ್ ಇಂದಿಲ್ಲಿ ಗುಡುಗಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಯಾವುದೇ ಅನುದಾನ ಬಂದಿಲ್ಲ. ಯಾವ ಯೋಜನೆಗಳಿಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದರ ಬಗ್ಗೆ ಲೆಕ್ಕ ಬಿಡುಗಡೆ ಮಾಡಲಿ. ಈ ಸರ್ಕಾರದಿಂದ ಅನುದಾನ ಬರುವುದಿಲ್ಲ ಎಂಬ ಅಭಿಪ್ರಾಯ ಜನರಲ್ಲಿ ಕೇಂದ್ರೀಕೃತವಾಗಿದೆ. ಇಡೀ ಸಚಿವ ಸಂಪುಟವೇ ಅಸಮರ್ಥ ಸಂಪುಟವಾಗಿದೆ. ಸಚಿವರ ಮೇಲೆ ಹಿಡಿತ ಇಲ್ಲದಂತಾಗಿದೆ. ಕಾನೂನು ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಗೃಹಸಚಿವರು ಇದರಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಪಿಎಲ್ಡಿ ಬ್ಯಾಂಕುಗಳಲ್ಲಿ ರೈತರಿಗೆ ಮರು ಸಾಲ ಸಿಗುತ್ತಿಲ್ಲ. ಕೃಷಿ, ಸಹಕಾರ, ಇಂಧನ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರಾಭಿವೃದ್ಧಿ ಸಚಿವರಿಗೆ ಸಂಬಂಧಿಸಿದ ಯಾವುದೇ ಕೆಲಸಗಳಾಗುತ್ತಿಲ್ಲ. ಬ್ರಾಂಡ್ ಬೆಂಗಳೂರು ಈಗ ದಿಕ್ಕೆಟ್ಟ ಬೆಂಗಳೂರು ಆಗಿದೆ.

ಕರ್ನಾಟಕದಲ್ಲಿ ಆಡಳಿತವನ್ನು ಕೆಲವು ಕುಟುಂಬದ ಸದಸ್ಯರು, ಈವೆಂಟ್ ಮ್ಯಾನೇಜ್ಮೆಂಟ್ನ ಸದಸ್ಯರು ನಡೆಸುತ್ತಿದ್ದಾರೆ. ವಿಧಾನಸೌಧದ ಆಡಳಿತ ಯಾರದೋ ಮನೆಯ ಕಿಚನ್ನಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಜನಪ್ರತಿನಿಧಿಗಳಿಗೆ ಅಪಮಾನವಾಗುವಂತಹ ರೀತಿ ಆಡಳಿತ ನಡೆಸುತ್ತಿದೆ. ಇದರ ವಿರುದ್ಧ ಬಿಜೆಪಿ ಜನಾಂಧೋಲನ ಆರಂಭ ಮಾಡಲಿದೆ ಎಂದರು.

ಗ್ಯಾರಂಟಿಗಳ ಗುಂಗಿನಲ್ಲಿ ಸರ್ಕಾರ ಕಾಲ ಕಳೆಯುತ್ತಿದೆ. ಅಭಿವೃದ್ಧಿಯತ್ತ ಮಾತ್ರ ಗಮನ ನೀಡುತ್ತಿಲ್ಲ. ಜನರು ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು. ರಾಜ್ಯಸರ್ಕಾರ ಪತನ ಕುರಿತು ಏಕನಾಥ ಶಿಂಧೆ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕತ್ವದಲ್ಲಿ ಗೊಂದಲ ಉಂಟಾಗಿದೆ. ಅವರದ್ದೇ ಅಸಮಾಧಾನದಿಂದ ಸರ್ಕಾರ ಪತನವಾಗಬಹುದು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮತ್ತೆ ಸಿಎಂ ವಾರ್ ಪ್ರಾರಂಭವಾಗಿದೆ ಎಂದು ಹೇಳಿದರು.

RELATED ARTICLES

Latest News