Thursday, August 14, 2025
Homeರಾಜ್ಯBREAKING : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್-ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದುಗೊಳಿಸಿದ ಸುಪ್ರೀಂ,...

BREAKING : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್-ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದುಗೊಳಿಸಿದ ಸುಪ್ರೀಂ, ತಕ್ಷಣ ಬಂಧನಕ್ಕೆ ಆದೇಶ

Supreme Court cancels bail of 7 accused including Darshan-Pavithra Gowda in Renukaswamy murder case

ನವದೆಹಲಿ, ಆ.14- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಖ್ಯಾತ ನಟ ಡಿ ಬಾಸ್‌‍ ಖ್ಯಾತಿಯ ದರ್ಶನ್‌ಗೆ ರಾಜ್ಯ ಹೈಕೋರ್ಟ್‌ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಮಾತ್ರವಲ್ಲ, ಅವರನ್ನು ಈ ಕೂಡಲೆ ಬಂಧಿಸಬೇಕು ಎಂದು ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್‌.ಮಹಾದೇವನ್‌ ಅವರಿದ್ದ ದ್ವಿಸದಸ್ಯ ಪೀಠ ದರ್ಶನ್‌, ಪವಿತ್ರಾಗೌಡ ಸೇರಿ ಏಳು ಮಂದಿಗೆ ಹೈಕೋರ್ಟ್‌ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸುವ ಮಹತ್ವದ ಆದೇಶ ಹೊರಡಿಸಿದೆ. ದರ್ಶನ್‌ ಜೈಲಿನಲ್ಲಿದ್ದಾಗ ಅವರಿಗೆ ರಾಜಾತಿಥ್ಯ ನೀಡಿದ್ದ ಆರೋಪಕ್ಕೆ ಗುರಿಯಾಗಿದ್ದ ಜೈಲು ಅಧಿಕಾರಿಯನ್ನು ಈ ಕೂಡಲೇ ಅಮಾನತುಗೊಳಿಸುವಂತೆ ಆದೇಶಿಸುವ ಮೂಲಕ ನ್ಯಾಯಾಲಯ ಅಧಿಕಾರಿವರ್ಗಕ್ಕೂ ಬಿಸಿ ಮುಟ್ಟಿಸಿದೆ.

ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.ಕಳೆದ ವರ್ಷ ಜೂನ್‌ 11ರಂದು ದರ್ಶನ್‌ ಬಂಧನಕ್ಕೆ ಒಳಗಾಗಿದ್ದರು.ಆ ಸಂದರ್ಭದಲ್ಲಿ ಅವರು ನಾಲ್ಕು ತಿಂಗಳಿಗೂ ಅಧಿಕ ಸಮಯ ಜೈಲಿನಲ್ಲಿದ್ದರು. ಬಳಿಕ ಬೆನ್ನು ನೋವಿನ ಕಾರಣದ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಅವರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಹೈಕೋರ್ಟ್‌ ತೀರ್ಪನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹಲವು ದಿನಗಳ ಕಾಲ ಸುಪ್ರೀಂ ಕೋರ್ಟ್‌ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಅಲ್ಲದೆ, ಕರ್ನಾಟಕ ಹೈಕೋರ್ಟ್‌ ಜಾಮೀನು ಕೊಡಲು ನೀಡಿದ ಕಾರಣಗಳ ಬಗ್ಗೆ ಬೇಸರ ಹೊರಹಾಕಿತ್ತು. ಇದೀಗ ದರ್ಶನ್‌ ಜಾಮೀನು ರದ್ದುಗೊಳಿಸುವ ಮಹತ್ವದ ತೀರ್ಪು ನೀಡಿದೆ.

ದರ್ಶನ್‌ ಜಾಮೀನು ರದ್ದುಗೊಳಿಸುವಂತೆ ಸರ್ಕಾರ ಮಾಡಿಕೊಂಡಿದ್ದ ಮೇಲನವಿ ಅರ್ಜಿಯನ್ನು ಜು.24ರಂದು ವಿಚಾರಣೆ ನಡೆಸಿದ ನ್ಯಾ.ಜೆ.ಬಿ ಪರ್ದಿವಾಲಾ ಮತ್ತು ನ್ಯಾ.ಆರ್‌ ಮಹದೇವನ್‌ ಅವರಿದ್ದ ಪೀಠ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಪ್ರಕರಣದ ಹಿನ್ನೆಲೆ: ಕಳೆದ ಜೂನ್‌ 8 ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕಿಡ್ನಾಪ್‌ ಮಾಡಲಾಗಿತ್ತು. ಬೆಂಗಳೂರಿನ ಆರ್‌ಆರ್‌ ನಗರದ ಖಾಲಿ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಟ ದರ್ಶನ್‌, ಪವಿತ್ರಾ ಗೌಡ ಗ್ಯಾಂಗ್‌ನಿಂದ ನಡೆದಿತ್ತು.ಜೂನ್‌ 9 ಭಾನುವಾರ ಬೆಳಗ್ಗೆ 8 ಗಂಟೆಗೆ ಸುಮನಹಳ್ಳಿ ರಾಜಕಾಲುವೆ ಬಳಿ ಶವ ಪತ್ತೆಯಾಗಿತ್ತು.

ಅಪರಿಚಿತ ಶವದ ಬಗ್ಗೆ ಸೆಕ್ಯೂರಿಟಿ ಗಾರ್ಡ್‌ನಿಂದ ದೂರು ಪಡೆದು ಪೊಲೀಸರ ತನಿಖೆ. ಜೂನ್‌ 10 ಸೋಮವಾರ ನಾಲ್ವರು ಆರೋಪಿಗಳು ಪೊಲೀಸರಿಗೆ ಸರೆಂಡರ್‌ ಆಗಿದ್ದರು.ರಾಘವೇಂದ್ರ, ಕೇಶವಮೂರ್ತಿ, ಕಾರ್ತಿಕ್‌, ನಿಖಿಲ್‌ ನಾಯಕ್‌ ಸರೆಂಡರ್‌ ಆದ ಬಳಿಕ ಸೋಮವಾರ ರಾತ್ರಿ ಕೊಲೆ ಕೇಸ್‌‍ ಗೆ ಮೇಜರ್‌ ಟ್ವಿಸ್ಟ್‌ ದೊರಕಿತ್ತು.

ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ನಟ ದರ್ಶನ್‌ ಹಾಗೂ ಪವಿತ್ರಾಗೌಡ ಹೆಸರು ಬಾಯ್ಬಿಟ್ಟಿದ್ದರು. ಈ ಮಾಹಿತಿ ಪಡೆದ ಇನ್ಸ್ ಪೆಕ್ಟರ್‌ ಗಿರೀಶ್‌ ನಾಯ್ಕ್ ಅಂಡ್‌ ಎಸಿಪಿ ಚಂದನ್‌ ನೇತೃತ್ವದ ತಂಡ ಮೈಸೂರಿಗೆ ದೌಡಾಯಿಸಿ ಹೋಟೇಲ್‌ನಿಂದ ದರ್ಶನ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.

ನಂತರ ಆರ್‌ಆರ್‌ ನಗರ ಮನೆಯಿಂದ ಪವಿತ್ರಾಗೌಡ ಅವರನ್ನು ಕಸ್ಟಡಿಗೆ ಪಡೆಯಲಾಗಿತ್ತು. ಬಳಿಕ ನಟ ದರ್ಶನ್‌ ಹಾಗೂ ಪವಿತ್ರಾಗೌಡ ಅವರನ್ನು ಬಂಧಿಸಲಾಗಿತ್ತು. ಆರೋಪಿಗಳನ್ನ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿ ಜೂನ್‌ 15 ರವರೆಗೆ ಪೊಲೀಸ್‌‍ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು.

ಜೂನ್‌ 15 ಶನಿವಾರ ಕೋರ್ಟ್‌ಗೆ ಪುನಃ ಆರೋಪಿಗಳು ಹಾಜರುಪಡಿಸಿದ ಪೊಲೀಸರು ಮತ್ತೆ ಜೂನ್‌ 20ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಜೂನ್‌ 20ರಂದು ಸಂಜೆ ಮತ್ತೆ ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು ದರ್ಶನ್‌ ಸೇರಿ ನಾಲ್ವರನ್ನ ಎರಡು ದಿನ ಕಸ್ಟಡಿಗೆ ಪದಿದ್ದರು.

ಜೂನ್‌ 22ರಂದು ಎಸಿಎಂಎಂ ಕೋರ್ಟ್‌ಗೆ ದರ್ಶನ್‌ ಸೇರಿ ನಾಲ್ವರನ್ನ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಲಯ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
24ನೇ ಎಸಿಎಂಎಂ ಕೋರ್ಟ್‌ಗೆ 2024 ಸೆಪ್ಟೆಂಬರ್‌ 3ರಂದು ನಟ ದರ್ಶನ್‌‍, ಪವಿತ್ರಾಗೌಡ ಸೇರಿ 17 ಆರೋಪಿಗಳ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಲಾಗಿತ್ತು.

ಸೆಪ್ಟೆಂಬರ್‌ 21 ರಂದು ಜಾಮೀನು ಕೋರಿ ದರ್ಶನ್‌ ಸಿಟಿ ಸಿವಿಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್‌ 14ರಂದು ದರ್ಶನ್‌‍, ಪವಿತ್ರಗೌಡ ಜಾಮೀನು ಅರ್ಜಿ ವಜಾಗೊಂಡಿತ್ತು. ನಂತರ ಅನಾರೋಗ್ಯ ಕಾರಣ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಎಸ್‌‍ಪಿಪಿ ಪ್ರಸನ್ನಕುಮಾರ್‌ ವಾದ ಮಂಡಿಸಿದ್ದರು. ದರ್ಶನ್‌ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್‌ ವಾದ ಮಾಡಿದ್ದರು.

2024 ಅಕ್ಟೋಬರ್‌ 30ರಂದು ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರಾಗಿತ್ತು.ಅಕ್ಟೋಬರ್‌ 30 ರಂದು ಸಂಜೆ 6 ಗಂಟೆಗೆ ಬಳ್ಳಾರಿ ಜೈಲಿನಿಂದ ದರ್ಶನ್‌ ರಿಲೀಸ್‌‍ ಆಗಿದ್ದರು. ನವೆಂಬರ್‌ 1ರಂದು ಬಿಜಿಎಸ್‌‍ ಆಸ್ಪತ್ರೆಗೆ ದರ್ಶನ್‌ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಕಾರಣದಿಂದಾಗಿ ಹೈಕೋರ್ಟ್‌ 2024 ಡಿಸೆಂಬರ್‌ 13ರಂದು ದರ್ಶನ್‌ಗೆ ರೆಗ್ಯುಲರ್‌ ಬೇಲ್‌ ಮಂಜೂರು ಮಾಡಿತ್ತು. 2025 ಜನವರಿ 6ರಂದು ದರ್ಶನ್‌ ಹಾಗೂ ಏಳು ಆರೋಪಿಗಳ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲನವಿ ಸಲ್ಲಿಸಿತ್ತು.

RELATED ARTICLES

Latest News