ನವದೆಹಲಿ, ಆ.23 (ಪಿಟಿಐ) ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಸಿಬಿಐನಿಂದ ಬಂಧನವನ್ನು ಪ್ರಶ್ನಿಸಿ ಮತ್ತು ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5 ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಸಿಬಿಐಗೆ ಈ ಪ್ರಕರಣದಲ್ಲಿ ತನ್ನ ಪ್ರತಿವಾದ ಅಫಿಡವಿಟ್ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಕೇಜ್ರಿವಾಲ್‌ಗೆ ಮರು ಅರ್ಜಿ ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ನೀಡಿತು.
ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಸಿಬಿಐ ಕೇವಲ ಒಂದು ಅರ್ಜಿಯಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಿದೆ ಮತ್ತು ಗುರುವಾರ ರಾತ್ರಿ 8 ಗಂಟೆಗೆ ಅದನ್ನು ಅವರಿಗೆ ಸಲ್ಲಿಸಲಾಗಿದೆ ಎಂಬುದನ್ನು ನ್ಯಾಯಲಯದ ಗಮನಕ್ಕೆ ತಂದರು. ಒಂದು ವಾರದಲ್ಲಿ ಇನ್ನೊಂದು ಅರ್ಜಿಯಲ್ಲಿ ಕೌಂಟರ್ ಸಲ್ಲಿಸುತ್ತೇವೆ ಎಂದು ಎಎಸ್‌ಜಿ ಎಸ್‌ವಿ ರಾಜು ತಿಳಿಸಿದ ನಂತರ ಪೀಠವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಿತು.
ಆ. 14 ರಂದು, ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು ಮತ್ತು ಅವರ ಬಂಧನವನ್ನು ಪ್ರಶ್ನಿಸಿ ಅವರ ಮನವಿಯ ಕುರಿತು ತನಿಖಾ ಸಂಸ್ಥೆಯಿಂದ ಪ್ರತಿಕ್ರಿಯೆಯನ್ನು ಕೇಳಿತು. ಜೂನ್ 26 ರಂದು ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು.
ಮಾರ್ಚ್ 21ರಂದು ಇಡಿಯಿಂದ ಬಂಧನಕ್ಕೊಳಗಾಗಿದ್ದ ಮುಖ್ಯಮಂತ್ರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಜೂನ್ 20ರಂದು ಜಾಮೀನು ನೀಡಿತ್ತು.ಆದರೆ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಜುಲೈ 12 ರಂದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತು.