Thursday, November 14, 2024
Homeರಾಷ್ಟ್ರೀಯ | NationalBIG NEWS : ಬುಲ್ಡೋಜರ್‌ ಕಾರ್ಯಾಚರಣೆಗೆ ಬ್ರೇಕ್ ಹಾಕಿ ಮಹತ್ವದ ಆದೇಶ ನೀಡಿದ ಸುಪ್ರೀಂಕೋರ್ಟ್‌

BIG NEWS : ಬುಲ್ಡೋಜರ್‌ ಕಾರ್ಯಾಚರಣೆಗೆ ಬ್ರೇಕ್ ಹಾಕಿ ಮಹತ್ವದ ಆದೇಶ ನೀಡಿದ ಸುಪ್ರೀಂಕೋರ್ಟ್‌

Supreme Court Issues Directions Against 'Bulldozer Action'

ನವದೆಹಲಿ,ನ.13- ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಕಾನೂನು ಉಲ್ಲಂಘನೆ ಮಾಡಿದ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸುವ ಬುಲ್ಡೋಜರ್‌ ಕಾರ್ಯಾಚರಣೆಗೆ ಸುಪ್ರೀಂಕೋರ್ಟ್‌ ತೀವ್ರಅಸಮಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ.

ದೇಶಾದ್ಯಂತ ಬುಲ್ಡೋಜರ್‌ ನ್ಯಾಯ ವ್ಯಾಪಿಸದಂತೆ ತಡೆಯಲು ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಜಮಾಯಿತ್‌ ಉಲಾಮ- ಇ-ಹಿಂದ್‌ ಸಲ್ಲಿಸಿದ್ದ ಮೇಲನವಿಯ ಅಂತಿಮ ತೀರ್ಪಿನಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ಸದ್ಯ ದೇಶಾದ್ಯಂತ ಬುಲ್ಡೋಜರ್‌ ಕಾರ್ಯಚರಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್‌ ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್‌‍ ನೀಡದೆ ಯಾವುದೇ ಕಟ್ಟಡಗಳನ್ನು ನೆಲಸಮಗೊಳಿಸಬಾರದೆಂದು ಸೂಚನೆ ನೀಡಿ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕಾಯ್ದಿರಿಸಿದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಕೆ.ಬಿ.ವಿಶ್ವನಾಥ್‌ ಅವರನ್ನೊಳಗೊಂಡ ದ್ವೀಸದಸ್ಯ ಪೀಠ , ಆರೋಪಿಯ ಆಸ್ತಿಯನ್ನು ಕೆಡವಲು ಅಥವಾ ನಿರ್ಧರಿಸಲು ಸಾಧ್ಯವಿಲ್ಲ. ಸರ್ಕಾರ ನಾಶ ಮಾಡುವ ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್‌‍ ನೀಡದೇ ನೆಲಸಮಗೊಳಿಸಬಾರದು ಎಂದು ತಾಕೀತು ಮಾಡಿತು.

ನೋಟಿಸ್‌‍ನ್ನು ಮಾಲೀಕರಿಗೆ ನೊಂದಾಯಿತ ಅಂಚೆ ಮೂಲಕ ನೀಡಬೇಕು. ಅನಧಿಕೃತ ಕಟ್ಟಡವಾಗಿದ್ದರೆ ನಿರ್ಮಾಣದ ಸ್ವರೂಪ ನಿರ್ಧಿಷ್ಟ ಉಲ್ಲಂಘನೆಯ ವಿವರಗಳನ್ನು ನೋಟಿಸ್‌‍ನಲ್ಲಿ ಉಲ್ಲೇಖಿಸಿ ಆಕ್ಷೇಪಣೆ ಸಲ್ಲಿಸಲು ಆರೋಪಿಯ ಮನೆಯವರಿಗೆ ಕಾಲಾವಕಾಶ ನೀಡಬೇಕು. ಜೊತೆಗೆ ಕಟ್ಟಡ ತೆರವು ಕಾರ್ಯಾಚರಣೆಯನ್ನು ವಿಡಿಯೋ ಚಿತ್ರೀಕರಣ ಮಾಡುವಂತೆ ನ್ಯಾಯಾಧೀಶರು ಸೂಚಿಸಿದರು.

ಒಬ್ಬ ವ್ಯಕ್ತಿಯ ಮೇಲೆ ಆರೋಪವಿದೆ ಎಂಬ ಕಾರಣಕ್ಕೆ ಕಾರ್ಯಾಂಗವು ನಿರುಕುಂಶವಾಗಿ ಅವರ ಮನೆಯನ್ನು ಕೆಡವಿದರೆ ಅದು ಅಧಿಕಾರ ವಿಭಜನೆಯ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅಸಮಾಧಾನ ಹೊರಹಾಕಿದರು.

ಸಾರ್ವಜನಿಕ ರಸ್ತೆ, ರೈಲುಮಾರ್ಗ ಅಥವಾ ಜಲ ಮೂಲದಲ್ಲಿದ್ದರೆ ಇಲ್ಲವೇ ನ್ಯಾಯಾಲಯವು ಕಟ್ಟಡವನ್ನು ತೆರವುಗೊಳಿಸಲು ಆದೇಶ ನೀಡಿದ್ದರೆ ನಾವು ನೀಡುವ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲ. ಕಾನೂನು ಉಲ್ಲಂಘಿಸಿದ್ದಾರೆ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಬೇಕೆ ಹೊರತು ಅಧಿಕಾರಿಗಳು ತೀರ್ಮಾನಿಸಿದರೆ ನ್ಯಾಯಪೀಠ ಏನು ಮಾಡಬೇಕೆಂದು ಅಟಾರ್ನಿ ಜನರಲ್‌ ಅವರನ್ನು ಪ್ರಶ್ನೆ ಮಾಡಿದರು.

ಮಾಲೀಕರಿಗೆ ಮುಂಚಿತವಾಗಿ ಸೂಚನೆ ನೀಡದೇ ಯಾವುದೇ ಕಟ್ಟಡವನ್ನು ತೆರವುಗೊಳಿಸಬಾರದು. ಶೋಕಾಸ್‌‍ ನೋಟಿಸ್‌‍ ನೀಡಿದ ಮೇಲೆ ಮನೆ ಮಾಲೀಕರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಿ. ನೋಟಿಸ್‌‍ ನೀಡಿದ ತಕ್ಷಣ ಇಮೇಲ್‌ನ್ನು ಜಿಲ್ಲಾಧಿಕಾರಿ/ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಬೇಕು. ಇಮೇಲ್‌ ಐಡಿಗಳನ್ನು ಎಲ್ಲಾ ಮ್ಯಾಜಿಸ್ಟ್ರೇಟ್‌ಗಳು ರಚಿಸಬೇಕು.

ಕಟ್ಟಡವನ್ನು ಯಾವ ದಿನಾಂಕ, ಯಾವ ಸಮಯದಲ್ಲಿ ತೆರವು ಮಾಡುತ್ತೇವೆ ಎಂಬುದರ ಬಗ್ಗೆ ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಈ ಪ್ರದರ್ಶಿಸಲಾದ ವಿವರಗಳನ್ನು ಮೂರು ತಿಂಗಳೊಳಗೆ ಡಿಜಿಟಲ್‌ ಪೋರ್ಟಲ್‌ ರಚಿಸಬೇಕು. ಕಟ್ಟಡ ಮಾಲೀಕರಿಗೆ ವಿವರಣೆ ನೀಡಲು ಒಂದು ತಿಂಗಳು ಅವಕಾಶ, ದಾಖಲೆಗಳನ್ನು ಸಲ್ಲಿಸಲು ಸಮಯ ಅವಕಾಶ ಕೊಡಿ. ಇಡೀ ಕಟ್ಟಡವನ್ನು ತೆರವುಗೊಳಿಸುವ ಬದಲು ಭಾಗಶಃ ಎಷ್ಟು ತೆರವು ಮಾಡಬೇಕೆಂಬುದನ್ನು ಅಧಿಕಾರಿಗಳು ನಿರ್ಧರಿಸಬೇಕು. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಆಸ್ತಿ ಮರುಪಾವತಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹೇಗಿರಬೇಕೆಂಬುದನ್ನು ನ್ಯಾಯಾಲಯ ಹೇಳುವ ಮಟ್ಟಕ್ಕೆ ಬರಬಾರದು. ಯಾರ ಆಸ್ತಿಯನ್ನು ಸ್ವೇಚ್ಚೆಯಿಂದ ತೆಗೆದುಕೊಳ್ಳಲು ಅವಕಾಶವಿಲ್ಲ. ಯಾರಾದರೂ ತಪ್ಪಿತಸ್ಥರಾದರೂ ಕಾನೂನು ಬದ್ದವಾಗಿ ಮನೆ ಕೆಡವಬಹುದು. ಆರೋಪಿಯಾಗಿರುವುದು ಮತ್ತು ತಪ್ಪಿತಸ್ಥರಾಗಿದ್ದಾರೆ ಎಂದರೆ ಮನೆ ಹೊಡೆಯಲು ಅದು ಆಧಾರವಾಗಬಾರದು.

ಬುಲ್ಡೋಜರ್‌ಗಳನ್ನು ನಿರಂಕುಶವಾಗಿ ಬಳಸಿದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ. ಅಪರಾಧಕ್ಕೆ ಶಿಕ್ಷೆ ನೀಡುವುದು ನ್ಯಾಯಾಲಯದ ಕೆಲಸ. ಆರೋಪಿ ಮತ್ತು ಶಿಕ್ಷೆಗೊಳಗಾಗಿದ್ದವರಿಗೂ ಕೆಲವು ಹಕ್ಕುಗಳಿವೆ ಎಂಬುದನ್ನು ಮರೆಯಬೇಡಿ. ಆರೋಪಿ ಎಂಬ ಕಾರಣಕ್ಕೆ ಮನೆ ಕೆಡವುದು ಕಾನೂನು ಉಲ್ಲಂಘನೆಯಾಗುತ್ತದೆ. ಅಲ್ಲದೆ ಮನ ಬಂದಂತೆ ಮನೆ ಕೆಡವಿದರೆ ಪರ್ಯಾಯ ಕೊಡಬೇಕೆಂದು ಸೂಚನೆ ಕೊಟ್ಟರು.

ಒಬ್ಬ ವ್ಯಕ್ತಿತಪ್ಪು ಮಾಡಿದರೆ ಇಡೀ ಕುಟುಂಬವನ್ನು ಶಿಕ್ಷಿಸಲು ಸಾಧ್ಯವಿಲ್ಲ. ಒಬ್ಬನೇ ಆರೋಪಿಯಾಗಿದ್ದರೆ ಇಡೀ ಕುಟುಂಬದವರು ಮನೆ ಕಳೆದುಕಂಡು ಬೀದಿಗೆ ಬೀಳಬೇಕೆ. ಕೆಲವು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳು ನಮಗೆ ತೃಪ್ತಿ ತಂದಿಲ್ಲ ಎಂದು ನ್ಯಾಯಮೂರ್ತಿಗಳು ಬುಲ್ಡೋಜರ್‌ ಕಾರ್ಯಾಚರಣೆಗೆ ಅಸಮಾಧಾನ ಹೊರಹಾಕಿದರು.

ಒಬ್ಬ ಸಾಮಾನ್ಯ ನಾಗರಿಕನಿಗೆ ಮನೆ ನಿರ್ಮಾಣವು ವರ್ಷಗಳ ಕಠಿಣ ಪರಿಶ್ರಮ, ಕನಸಾಗಿರುತ್ತದೆ. ಮನೆಯು ಭದ್ರತೆ ಮತ್ತು ಭವಿಷ್ಯದ ಸಾಮೂಹಿಕ ಭರವಸೆಯನ್ನು ಸಾಕಾರಗೊಳಿಸುತ್ತದೆ. ಆಶ್ರಯದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಅಂತಹ ಹಕ್ಕನ್ನು ಕಸಿದುಕೊಳ್ಳುವುದು ಸಂಪೂರ್ಣವಾಗಿ ಅಸಾಂವಿಧಾನಿಕ. ಅಪರಾಧಕ್ಕೆ ಶಿಕ್ಷೆಗೊಳಗಾದ ಯಾರೊಬ್ಬರ ವಿರುದ್ಧವೂ ಇಂತಹ ಕ್ರಮ ತೆಗೆದುಕೊಳ್ಳುವಂತಿಲ್ಲ. ಇಂತಹ ಕ್ರಮ ಕಾನೂನು ಬಾಹಿರಬಾಹಿರವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಆದೇಶದಲ್ಲಿ ಏನಿದೆ?:
ಆರೋಪಿಯ ಆಸ್ತಿಯನ್ನು ಕೆಡವಲು ನಿರ್ಧರಿಸುವುದು ಕಾರ್ಯಾಂಗದ ಕೆಲಸವಲ್ಲ. ಸರ್ಕಾರ ನಾಶ ಮಾಡುವ ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್‌‍ ನೀಡದೇ ಯಾವುದೇ ಆಸ್ತಿ ನೆಲಸಮವನ್ನು ನಡೆಸಬಾರದು.ನೋಟಿಸ್‌‍ ಅನ್ನು ಮಾಲೀಕರಿಗೆ ನೋಂದಾಯಿತ ಅಂಚೆ ಮೂಲಕ ನೀಡಬೇಕು. ಅನಧಿಕೃತ ಕಟ್ಟಡವಾಗಿದ್ದರೆ ನಿರ್ಮಾಣದ ಸ್ವರೂಪ, ನಿರ್ದಿಷ್ಟ ಉಲ್ಲಂಘನೆಯ ವಿವರಗಳನ್ನು ನೋಟಿಸ್‌‍ನಲ್ಲಿ ಉಲ್ಲೇಖಿಸಬೇಕು.
ಆಕ್ಷೇಪಣೆ ಸಲ್ಲಿಸಲು ಆರೋಪಿಯ ಮನೆಯವರಿಗೆ ಅವಕಾಶ ನೀಡಬೇಕು. ಕಟ್ಟಡ ತೆರವು ಕಾರ್ಯಚರಣೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಬೇಕು.

RELATED ARTICLES

Latest News