ಬೆಂಗಳೂರು, ಅ.14– ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಅನೂರ್ಜಿತಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ನಂಜೇಗೌಡ ಅವರ ಶಾಸಕ ಸ್ಥಾನವನ್ನು ಊರ್ಜಿತಗೊಳಿಸಿದೆ. ಆದಾಗ್ಯೂ ಮರುಮತ ಎಣಿಕೆ ನಡೆಸಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯಾಲಾ ಬಾಗ್ಚಿ ಅವರನ್ನೊಳಗೊಂಡ ವಿಭಾಗೀಯ ಪೀಠ ಅನರ್ಹತೆಗೊಂಡಿದ್ದ ಶಾಸಕ ಕೆ.ವೈ.ನಂಜೇಗೌಡ ಅವರ ಮೇಲನವಿಯ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಮಾಲೂರಿನಲ್ಲಿ ಚುನಾವಣಾ ಅಕ್ರಮಗಳಾಗಿವೆ ಎಂದು ಪರಾಜಿತ ಅಭ್ಯರ್ಥಿ ಬಿಜೆಪಿಯ ಕೆ.ಎಸ್.ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ತಿಂಗಳು 16ರಂದು ಹೈಕೋರ್ಟ್ನ ನ್ಯಾಯಮೂರ್ತಿ ಆರ್.ದೇವದಾಸ್ ಅವರನ್ನೊಳಗೊಂಡ ಪೀಠ ತೀರ್ಪು ನೀಡಿ, ಫಲಿತಾಂಶವನ್ನು ಅನೂರ್ಜಿತಗೊಳಿಸಿತ್ತು.
ಇದರಿಂದ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ನಂಜೇಗೌಡ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮೇಲನವಿ ಸಲ್ಲಿಸಲು ನಂಜೇಗೌಡರಿಗೆ 30 ದಿನಗಳ ಕಾಲಾವಕಾಶ ನೀಡಿತ್ತು. ಅಲ್ಲಿಯವರೆಗೂ ತನ್ನದೇ ಆದೇಶವನ್ನು ಹೈಕೋರ್ಟ್ ತಡೆ ಹಿಡಿದಿತ್ತು.
ನಂಜೇಗೌಡರ ಪರವಾಗಿ ಸುಪ್ರೀಂಕೋರ್ಟ್ಗೆ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಮೇಲನವಿ ಸಲ್ಲಿಸಿದ್ದರು. ಹೈಕೋರ್ಟ್ನ ನ್ಯಾಯ ಮೂರ್ತಿಗಳು ಏಳು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಯಾವ ಅಂಶದ ಕುರಿತು ಸ್ಪಷ್ಟ ನಿರ್ದೇಶನ ನೀಡಿಲ್ಲ ಎಂದು ವಾದಿಸಿದ್ದರಲ್ಲದೆ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದ್ದರು.ಇದನ್ನು ಮಾನ್ಯ ಮಾಡಿರುವ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಶಾಸಕ ಸ್ಥಾನವನ್ನೂ ಊರ್ಜಿತಗೊಳಿಸಿದೆ. ಆದರೆ ಮರುಮತ ಎಣಿಕೆಗೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಮತಗಳ ಮರು ಎಣಿಕೆಗೆ ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು ಮತ್ತು ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಈ ನ್ಯಾಯಾಲಯದ ಮುಂದೆ ಸಲ್ಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಈ ನ್ಯಾಯಾಲಯದ ಅನುಮತಿಯಿಲ್ಲದೆ ಮರು ಎಣಿಕೆಯ ಫಲಿತಾಂಶಗಳನ್ನು ಬಹಿರಂಗಪಡಿಸಬಾರದು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ.