ನವದೆಹಲಿ,ಜು.24-ಮುಂಬೈನ ಲೋಕಲ್ ರೈಲುಗಳಲ್ಲಿ 2006ರ ಜು.11ರಂದು ನಡೆದಿದ್ದ ಸರಣಿ ಬಾಂಬ್ ಸ್ಫೋಟ ಸಂಭವಿಸಿದಂತೆ ಬಾಂಬೆ ಹೈಕೋರ್ಟ್, ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಕ ಕಾಯ್ದೆಯಡಿ ಬಾಕಿ ಇರುವ ಹಲವಾರು ವಿಚಾರಣೆಗಳ ಮೇಲೆ ಪರಿಣಾಮ ಬೀರಬಹುದೆಂಬ ಮಹಾರಾಷ್ಟ್ರ ಸರ್ಕಾರದ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು ತಡೆಯಾಜ್ಞೆ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಆದರೆ ಪ್ರಕರಣದಲ್ಲಿ ಖುಲಾಸೆಗೊಂಡ ನಂತರ ಈಗಾಗಲೇ ಬಿಡುಗಡೆಯಾಗಿರುವ 12 ಆರೋಪಿಗಳ ಬಿಡುಗಡೆಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು. ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಅನಿಲ್ ಕಿಲೊರ್ ಮತ್ತು ಶ್ಯಾಮ್ ಚಾಂದಕ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕಳೆದ ಜು.21ರಂದು ಆರೋಪಿಗಳನ್ನು ಖುಲಾಸೆಗೊಳಿಸಿ ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಆದೇಶ ನೀಡಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲನವಿ ಅರ್ಜಿ ಸಲ್ಲಿಸಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್ ಮತ್ತು ಎನ್.ಕೋಟೇಶ್ವರ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠ, ಖುಲಾಸೆಗೊಂಡಿದ್ದ 12 ಮಂದಿ ಆರೋಪಿಗಳಿಗೆ ನೋಟಿಸ್ ನೀಡಿತು.
ಆಕ್ಷೇಪಿಸಲಾದ ತೀರ್ಪನ್ನು ಪೂರ್ವ ನಿದರ್ಶನವೆಂದು ಪರಿಗಣಿಸದಂತೆ ನಾವು ಅಭಿಪ್ರಾಯಪಡುತ್ತೇವೆ. ಆದ್ದರಿಂದ ಆಕ್ಷೇಪಿಸಲಾದ ತೀರ್ಪಿಗೆ ತಡೆ ಹಿಡಿಯಲಾಗುವುದು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಮಹಾರಾಷ್ಟ್ರ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ, ಪ್ರಕರಣದಲ್ಲಿ ಖುಲಾಸೆಗೊಂಡವರ ಬಿಡುಗಡೆಗೆ ನಾವು ವಿರೋಧಿಸುತ್ತಿಲ್ಲ. ಬದಲಿಗೆ ಪ್ರಸ್ತುತ ವಿಚಾರಣೆಯಲ್ಲಿರುವ ಮೊಕಾ ಪ್ರಕರಣಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮುಂಬೈ ಹೈಕೋರ್ಟ್ ನ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದರು.
ಸ್ವತಂತ್ರದ ವಿಷಯದ ಬಗ್ಗೆ ನನಗೆ ಅರಿವಿದೆ. ನಾನು ಅವರ ಬಿಡುಗಡೆಗೆ ತಡೆಯಾಜ್ಞೆ ಕೇಳುತ್ತಿಲ್ಲ. ಹೈಕೋರ್ಟ್‌ನಲ್ಲಿ ಬಾಕಿ ಇರುವ ಮೊಕಾ ಪ್ರಕರಣಗಳ ಬಗ್ಗೆ ಪರಿಣಾಮ ಬೀರಬಹುದೆಂಬುದಷ್ಟೇ ನನ್ನ ಆತಂಕ. ಇದೇ ಕಾರಣಕ್ಕಾಗಿ ತಡೆಯಾಜ್ಞೆ ನೀಡಬೇಕು ಎಂಬುದು ನಮ ಮನವಿಯಾಗಿದೆ ಎಂದು ಮೆಹ್ತಾ ವಾದ ಮಂಡಿಸಿದ್ದರು. ಇದನ್ನು ಅಂಗೀಕರಿಸಿದ ಪೀಠವು, ಮುಂದಿನ ಆದೇಶದವರೆಗೆ ಹೈಕೋರ್ಟ್ ನೀಡಿರುವ ತೀರ್ಪು ನಿದರ್ಶನದ ಮೌಲ್ಯವನ್ನು ಹೊಂದಿರುವುದಿಲ್ಲ ಎಂದು ಹೇಳಿದೆ.
ತೀರ್ಪಿನ ಹಿನ್ನೆಲೆ:
ಮುಂಬೈನ ಲೋಕಲ್ ರೈಲುಗಳಲ್ಲಿ 2006ರ ಜುಲೈ 11ರಂದು ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ಅನಿಲ್ ಕಿಲೊರ್ ಹಾಗೂ ಶ್ಯಾಮ್ ಚಾಂದಕ್ ನೇತೃತ್ವದ ನ್ಯಾಯಪೀಠವು, ಎಲ್ಲಾ 12 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಸೋಮವಾರ ತೀರ್ಪು ನೀಡಿತ್ತು.ಆರೋಪಿಗಳೆಲ್ಲರೂ, ಅಪರಾಧ ಎಸಗಿದ್ದಾರೆ ಎಂದು ನಂಬಲು ಕಷ್ಟವಾಗಿತ್ತು, ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಿದ ನ್ಯಾಯಪೀಠ, 2015ರಲ್ಲಿ ವಿಶೇಷ ನ್ಯಾಯಾಲಯವು 12 ಮಂದಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿತ್ತು.
ಅಪರಾಧ ಕೃತ್ಯಕ್ಕೆ ಬಳಸಿದ್ದ ಬಾಂಬ್‌ನ ಮಾದರಿಗಳನ್ನು ಮುಂದಿಡಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಈಗ ಪ್ರಸ್ತುತಪಡಿಸಿರುವ ಸಾಕ್ಷ್ಯಗಳು ಆರೋಪಿಗಳನ್ನು ಶಿಕ್ಷಿಸಲು ನಿರ್ಣಾಯಕವಾಗಿಲ್ಲ. ಸಾಕ್ಷಿ ಹೇಳಿಕೆಗಳು ಹಾಗೂ ಆರೋಪಿಗಳಿಂದ ವಶಕ್ಕೆ ಪಡೆಯಲಾದ ವಸ್ತುಗಳಿಗೂ ಸಾಕ್ಷ್ಯ ಮೌಲ್ಯವಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು.ಈ ಪ್ರಕರಣದಲ್ಲಿ ಆರೋಪಿಗಳು ನೀಡಿದ ತಪ್ಪೊಪ್ಪಿಗೆ ಹೇಳಿಕೆಯು ಪರಿಪೂರ್ಣವಾಗಿಲ್ಲ. ಕೆಲವು ಭಾಗಗಳಲ್ಲಿ ಒಬ್ಬರ ತಪ್ಪೊಪ್ಪಿಗೆ ಹೇಳಿಕೆಯನ್ನೇ ಮತ್ತೊಬ್ಬರಿಗೂ ನಕಲು ಮಾಡಲಾಗಿದೆ. ತಪ್ಪೊಪ್ಪಿಗೆ ಹೇಳಿಕೆ ಪಡೆಯುವಾಗ ಚಿತ್ರಹಿಂಸೆ ನೀಡಲಾಗಿತ್ತು ಎಂದು ಆರೋಪಿಗಳು ಸಾಬೀತುಪಡಿಸಿದ್ದಾರೆ ಎಂದು ಹೇಳಿತ್ತು.
ಸಾಕ್ಷಿಗಳು ನೀಡಿದ ಸಾಕ್ಷ್ಯವನ್ನು ಮಾನ್ಯಮಾಡಲು ಹೈಕೋರ್ಟ್ ನಿರಾಕರಿಸಿ, ಸಾಕ್ಷಿದಾರರು ನೀಡಿದ ಹೇಳಿಕೆ ನಂಬಲು ಅರ್ಹವಾಗಿಲ್ಲ. ಆರೋಪಿಗಳನ್ನು ಶಿಕ್ಷಿಸಲು ನಿರ್ಣಾಯಕವಾಗಿಲ್ಲ . ಆರೋಪಿಗಳ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲದಿದ್ದರೆ, ಎಲ್ಲರನ್ನೂ ಜೈಲಿನಿಂದ ಬಿಡುಗಡೆಗೊಳಿಸಬಹುದು ಎಂದಿತ್ತು.
ಆರೋಪಿಗಳ ಪರ ವಾದ ಮಂಡಿಸಿದ್ದ ಯುಗ್ ಚೌಧರಿ, ನ್ಯಾಯಾಲಯದ ತೀರ್ಪಿನಿಂದ ನ್ಯಾಯ ಹಾಗೂ ಮಾನವೀಯತೆ ಮೇಲಿನ ನಂಬಿಕೆ ಪುನರ್‌ಸ್ಥಾಪನೆಯಾಗಿದೆ. ತಾವು ಅಪರಾಧ ಮಾಡದಿದ್ದರೂ, 12 ಮಂದಿ 19 ವರ್ಷ ಜೈಲಿನಲ್ಲಿ ಕೊಳೆಯುವಂತಾಯಿತು ಎಂದು ಹೇಳಿದ್ದರು. ಕೆಲ ಆರೋಪಿಗಳ ಪರ ಹಾಜರಾಗಿದ್ದ ಹಿರಿಯ ವಕೀಲ ಎಸ್.ಮುರಳೀಧರ್, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮಾಡುವಾಗ ತನಿಖಾ ತಂಡವು ಕೋಮು ಪಕ್ಷಪಾತವಾಗಿ ತನಿಖೆ ನಡೆಸಿತು ಎಂದು ಆರೋಪಿಸಿದ್ದರು.