Friday, November 22, 2024
Homeರಾಷ್ಟ್ರೀಯ | Nationalವೋಟಿಂಗ್ ಡೇಟಾ ಅಪ್‌ಲೋಡ್‌ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ

ವೋಟಿಂಗ್ ಡೇಟಾ ಅಪ್‌ಲೋಡ್‌ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ

ನವದೆಹಲಿ,ಮೇ24- ಲೋಕಸಭಾ ಚುನಾವಣೆ ವೇಳೆ ವೆಬ್‌ಸೈಟ್‌ನಲ್ಲಿ ಮತದಾರರ ಮತದಾನದ ಅಂಕಿಅಂಶಗಳು(ಡೇಟಾ)ವನ್ನು ಅಪ್‌ಲೋಡ್‌ ಮಾಡಲು ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

ಆರಂಭಿಕ ಎರಡು ಹಂತಗಳ ಮತದಾರರ ಮತದಾನದ ಮಾಹಿತಿ ಪ್ರಕಟಿಸಲು ವಿಳಂಬವಾಗಿದೆ ಎಂದು ಉಲ್ಲೇಖಿಸಿ, ಎಡಿಯಾರ್‌ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಭಾರತೀಯ ಚುನಾವಣಾ ಆಯೋಗಕ್ಕೆ ಯಾವುದೇ ಸ್ಪಷ್ಟ ನಿರ್ದೇಶನ ನೀಡಲು ನ್ಯಾಯಾಲಯ ನಿರಾಕರಿಸಿತು.

ಮತದಾನ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾವು ಯಾವುದೇ ನಿರ್ದೇಶನ ನೀಡಿದರೆ ಮತದಾನದ ಸಂದರ್ಭದಲ್ಲಿ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು. ಆದರೆ 6ನೇ ಅಥವಾ 7ನೇ ಹಂತದ ಮತದಾನ ಮುಗಿದ ನಂತರ ನಾವು ಅರ್ಜಿ ವಿಚಾರಣೆಯನ್ನು ಪರಿಗಣಿಸುತ್ತೇವೆ ಎಂದು ಸುಪ್ರೀಂಕೋರ್ಟ್‌ನ ಪ್ರಜಾಪೀಠದ ನ್ಯಾಯಮೂರ್ತಿಗಳಾದ ದೀಪಂಕರ್‌ ದತ್ತ ಹಾಗೂ ಸತೀಶ್‌ಚಂದ್ರ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೇಳಿದೆ.

6ನೇ ಹಂತದ ಮತದಾನದ ನಂತರ ಅರ್ಜಿ ವಿಚಾರಣೆಯನ್ನು ನಾವು ಪರಿಗಣಿಸುತ್ತೇವೆ. ಈಗ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ನಾವು ಹೇಳುವುದಿಲ್ಲ ಎಂದು ತಿಳಿಸಿತು.ಈ ವೇಳೆ ಆಯೋಗದ ಪರ ವಾದ ಮಂಡಿಸಿದ ವಕೀಲರು ಇದು ಮತದಾರರ ಮನಸ್ಸಲ್ಲಿ ಅನುಮಾನ ಮೂಡಿಸುವ ಪ್ರಯತ್ನವಾಗಿದೆ. ಅರ್ಜಿಯನ್ನು ಕೇವಲ ಅನುಮಾನ ಮತ್ತು ಆತಂಕದ ಮೇಲೆ ಸಲ್ಲಿಸಲಾಗಿದೆ. ಚುನಾವಣೆಗಳನ್ನು ನಡೆಸುವುದೇ ಕಠಿಣವಾಗಿದೆ. ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಹಸ್ತಕ್ಷೇಪ ಮಾಡಲು ನ್ಯಾಯಾಲಯ ಅವಕಾಶ ಕೊಡಬಾರದೆಂದು ಮನವಿ ಮಾಡಿದರು.

ಈಗಾಗಲೇ ಆಯೋಗ ಹಂತ ಹಂತವಾಗಿ ಅಂಕಿಅಂಶಗಳ ವಿವರಗಳನ್ನು ಹಾಕುತ್ತಿದೆ. ಏಕಕಾಲದಲ್ಲಿ ಇದು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿತು. ಈ ಹಿಂದೆ ಆಯೋಗ ಮೊದಲ ಹಂತದ ಮತದಾನದ ನಂತರ ಅದರ ಅಂತಿಮ ದತ್ತಾಂಶ ಘೋಷಣೆಗೆ 11 ದಿನಗಳನ್ನು ತೆಗೆದುಕೊಂಡಿತ್ತು. ಅಂತೆಯೇ ಎರಡನೇ ಹಂತದ ಮತದಾನ ನಡೆದ ನಾಲ್ಕು ದಿನಗಳ ಬಳಿಕ ಅದರ ಅಂತಿಮ ಮತದಾನ ಪ್ರಮಾಣ ಘೋಷಣೆ ಮಾಡಿತ್ತು.

ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ದತ್ತಾಂಶ ಘೋಷಣೆಯಲ್ಲಿ ಇಷ್ಟು ವಿಳಂಬ ಮಾಡುತ್ತಿದ್ದು, ಹಿಂದಿನ ಚುನಾವಣೆಗಳಲ್ಲಿ ಮತದಾನದ 24 ಗಂಟೆಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾದ ಅಂತಿಮ ಅಂಕಿಅಂಶಗಳನ್ನು ಪ್ರಕಟಿಸುತ್ತಿತ್ತು. ಆದರೆ ಆಗ ಇಲ್ಲದ ವಿಳಂಬ ಈಗ ಏಕೆ? ಅಲ್ಲದೆ ಅಂತಿಮ ಅಂಕಿಅಂಶವು ಮತದಾನದ ದಿನಗಳ ಕೊನೆಯಲ್ಲಿ ಆಯೋಗವು ಘೋಷಿಸಿದ ಮತದಾನದ ಶೇಕಡಾವಾರು ಶೇಕಡಾ 5ಕ್ಕಿಂತ ಹೆಚ್ಚು ತೀವ್ರ ಹೆಚ್ಚಳವನ್ನು ತೋರಿಸಿದೆ.

ಇದು ಆಯೋಗದ ಮೇಲಿನ ಒತ್ತಡವೋ ಅಥವಾ ಚುನಾವಣೆಯಲ್ಲಿ ಗೆಲುವಿಗಾಗಿ ನಡೆಯುತ್ತಿರುವ ಪಿತೂರಿಯೋ? ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾಮ್ರ್ಸೌ ಸಂಸ್ಥೆ ಪ್ರಶ್ನಿಸಿತ್ತು. ಅಲ್ಲದೆ ಪ್ರತಿ ಸಂಸದೀಯ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಒಟ್ಟು ಸಂಖ್ಯೆಯ ದತ್ತಾಂಶ ಆಯೋಗದ ವೆಬ್‌‍ಸೈಟ್‌‍ನಲ್ಲಿ ಏಕೆ ಲಭ್ಯವಾಗಲಿಲ್ಲ ಎಂಬ ಪ್ರಶ್ನೆಗಳನ್ನು ಸಹ ಕೇಳಲಾಗಿತ್ತು.

ಒಂದು ಕ್ಷೇತ್ರದಲ್ಲಿ ಒಟ್ಟು ನೋಂದಾಯಿತ ಮತದಾರರ ಸಂಖ್ಯೆಯನ್ನು ಬಹಿರಂಗಪಡಿಸದೆ ಆಯೋಗವು ನೀಡಿರುವ ಮತದಾನದ ಶೇಕಡಾವಾರು ಅರ್ಥಹೀನ ಎಂದು ವಿರೋಧ ಪಕ್ಷಗಳು ಕಿಡಿಕಾರಿದ್ದು, ಇವು ಆಯೋಗವು ಪರಿಹರಿಸಬೇಕಾದ ಕಾಳಜಿಯ ಅಂಶಗಳಾಗಿವೆ ಎಂದು ಹೇಳಿದೆ.

ದುರ್ಬಳಕೆ ಸಾಧ್ಯತೆ:
ಈ ವಿಚಾರವಾಗಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸೌ ಸಂಸ್ಥೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು ಇದಕ್ಕೆ ಕೇಂದ್ರ ಚುನಾವಣಾ ಆಯೋಗ ಕೂಡ ಸ್ಪಂದಿಸಿದೆ. ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಮತಗಟ್ಟೆವಾರು ಮತದಾನ ಪ್ರಮಾಣವನ್ನು ವೆಬ್‌‍ಸೈಟ್‌‍ನಲ್ಲಿ ನಮೂದಿಸಿದರೆ ಅದು ಗೊಂದಲ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಎನ್ನುತ್ತಾ 225 ಪುಟಗಳ ಅಫಿಡವಿಟ್‌ ದಾಖಲಿಸಿತ್ತು.

ಪ್ರತಿ ಮತಗಟ್ಟೆಯಲ್ಲಿ ಬಿದ್ದ ಮತಗಳ ಸಂಖ್ಯೆಯನ್ನು ತಿಳಿಸುವ ಫಾರಂ 17ಸಿ ಪತ್ರವನ್ನು ಬಹಿರಂಗ ಮಾಡುವಂತೆ ಎಲ್ಲಿಯೂ ನಿಯಮಗಳಿಲ್ಲ. ಸದ್ಯ ಈ 17ಸಿ ಮೂಲ ಫಾರಂಗಳನ್ನು ಸ್ಟ್ರಾಂಗ್‌ ರೂಂನಲ್ಲಿ ಇಡಲಾಗಿದೆ. ಕೇವಲ ಮತಗಟ್ಟೆ ಏಜೆಂಟ್‌‍ಗೆ ಇದರ ಕಾಪಿಯನ್ನು ಪಡೆಯಲು ಅನುಮತಿ ಇದೆ. ಅರ್ಜಿದಾರ ಕೋರಿದಂತೆ ಮತಗಟ್ಟೆವಾರು ಪೋಲಿಂಗ್‌ ಪ್ರಮಾಣವನ್ನು ಬಹಿರಂಗಪಡಿಸಿದರೆ ಅದು ದುರ್ಬಳಕೆ ಆಗುವ ಸಂಭವ ಇದೆ ಎಂದು ತಿಳಿಸಿದೆ.

ಮಾರ್ಫಿಂಗ್‌ ಅಪಾಯ: ಅಂತೆಯೇ ದತ್ತಾಂಶವನ್ನು ಮಾರ್ಫಿಂಗ್‌ ಮಾಡುವ ಸಂಭವ ಇದೆ ಎಂದು ಆರೋಪಿಸಿರುವ ಆಯೋಗ, ಇದರಿಂದ ಗೊಂದಲ ಉಂಟಾಗಿ ಇಡೀ ಚುನಾವಣೆ ಪ್ರಕ್ರಿಯೆ ಮೇಲೆ ಜನರಲ್ಲಿ ಅಪನಂಬಿಕೆ ಮೂಡಬಹದು ಎಂಬ ಆತಂಕವನ್ನು ವ್ಯಕ್ತಪಡಿಸಿದೆ. ಮತದಾನ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಆಯೋಗ, ಎಲ್ಲಿಯೂ ಲೋಪ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

RELATED ARTICLES

Latest News