ಬೆಂಗಳೂರು,ಜು.21- ಮುಡಾ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯಕ್ಕೆ ಭಾರೀ ಹಿನ್ನಡೆಯಾಗಿದ್ದು, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಗಳು ಕಠಿಣ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಇ.ಡಿ.ಯ ಮೇಲನವಿಯನ್ನು ವಜಾಗೊಳಿಸಿದ್ದಾರೆ. ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇಂದಿನ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನೊಳಗೊಂಡ ವಿಭಾಗೀಯ ಪೀಠ ತೀವ್ರ ಸ್ವರೂಪದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಜಾರಿ ನಿರ್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿ.ಎಂ.ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿ ನೋಟೀಸ್ ನೀಡಿತ್ತು. ಈ ನೋಟೀಸ್ ಅನ್ನು ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಜಾರಿ ನಿರ್ದೆಶನಾಲಯ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇಂದಿನ ವಿಚಾರಣೆಯ ಆರಂಭದಲ್ಲೇ ಮುಖ್ಯ ನ್ಯಾಯಮೂರ್ತಿಗಳು ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ದುರಾದೃಷ್ಟವಶಾತ್ ನನಗೆ ಮಹಾರಾಷ್ಟ್ರದಲ್ಲಿ ಕೆಲ ಅನುಭವಗಳಾಗಿವೆ. ದಯವಿಟ್ಟು ನಮನ್ನು ಬಾಯಿ ತೆರೆಯುವಂತೆ ಒತ್ತಾಯ ಮಾಡಬೇಡಿ. ಇಲ್ಲವಾದರೆ ಜಾರಿ ನಿರ್ದೆಶನಾಲಯದ ವಿರುದ್ಧವಾಗಿ ನಾವು ಕಠಿಣವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗುತ್ತದೆ ಎಂದಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಅವರುಗಳ ನಡುವೆ ರಾಜಕೀಯ ಯುದ್ಧ ಮಾಡಿಕೊಳ್ಳಲು ಬಿಡಿ. ಜಾರಿ ನಿರ್ದೆಶನಾಲಯವನ್ನು ಅಸ್ತ್ರವನ್ನಾಗಿ ಏಕೆ ಬಳಸುತ್ತೀರ? ಎಂದು ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರನ್ನು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಇದರಿಂದ ತಬ್ಬಿಬ್ಬಾದ ರಾಜು ಅವರು, ನಾವು ನಮ ನೋಟೀಸ್ ಅನ್ನು ಹಿಂಪಡೆಯುತ್ತೇವೆ. ಆದರೆ ಇದು ಮುಂದಿನ ದಿನಗಳಲ್ಲಿ ಎಲ್ಲಾ ಪ್ರಕರಣಗಳಲ್ಲೂ ರೂಢಿ ಸಂಪ್ರದಾಯವಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮುರ್ತಿಗಳು, ಹೈಕೋರ್ಟ್‌ನ ಏಕವ್ಯಕ್ತಿ ನ್ಯಾಯಮೂರ್ತಿಗಳ ಪೀಠದ ಆದೇಶದಲ್ಲಿ ನಮಗೆ ಯಾವುದೇ ಲೋಪಗಳು ಕಂಡುಬಂದಿಲ್ಲ. ಕೆಲವು ವಿಚಿತ್ರ ಸಂಗತಿಗಳು ಮತ್ತು ಸಂದರ್ಭಗಳಲ್ಲಿ ಮೇಲನವಿಗಳನ್ನು ವಜಾಗೊಳಿಸಬೇಕಾಗುತ್ತದೆ. ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ನೋಟೀಸ್ ಅನ್ನು ಹಿಂಪಡೆಯುವುದಾಗಿ ಹೇಳಿಕೆ ನೀಡುವ ಮೂಲಕ ಇ.ಡಿ ಕುರಿತ ಕಠಿಣ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂದರ್ಭವನ್ನು ತಡೆದಿದ್ದಕ್ಕಾಗಿ ನಾವು ಧನ್ಯವಾದ ಹೇಳುತ್ತೇವೆ ಎಂದಿದ್ದಾರೆ.
ಈ ಮೂಲಕ ಜಾರಿ ನಿರ್ದೇಶನಾಲಯ ಮೇಲನವಿಯನ್ನು ವಜಾಗೊಳಿಸಿದೆ. ಪ್ರಮುಖವಾಗಿ ಮಹಾರಾಷ್ಟ್ರ ಪ್ರಕರಣಗಳನ್ನು ಉದಾಹರಣೆಯಾಗಿ ನೀಡುವ ಮೂಲಕ ಸುಪ್ರೀಂಕೋರ್ಟ್ ಇ.ಡಿ.ಯ ಕ್ರಮಗಳನ್ನು ತೀವ್ರವಾಗಿ ಪರಿಗಣಿಸಿದೆ. ರಾಜಕೀಯವಾಗಿ ಚುನಾವಣಾ ಸಂದರ್ಭದಲ್ಲಿ ಅವರು ಹೋರಾಟ ಮಾಡಿಕೊಳ್ಳಲಿ. ಆದರೆ ಜಾರಿ ನಿರ್ದೆಶನಾಲಯದಂತಹ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವುದೇಕೆ ಎಂಬ ಪ್ರಶ್ನೆ ಮುಂದಿಡುವ ಮೂಲಕ ತೀವ್ರ ಸ್ವರೂಪದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್‌ನ ಬಹುತೇಕರು ಮುಡಾ ಪ್ರಕರಣದಲ್ಲಿ ಜಾರಿ ನಿರ್ದೆಶನಾಲಯದ ತನಿಖೆಯನ್ನು ರಾಜಕೀಯಪ್ರೇರಿತ ಎಂದು ಹೇಳುತ್ತಲೇ ಬಂದಿದ್ದರು. ಈಗ ಸುಪ್ರೀಂಕೋರ್ಟ್‌ನ ತೀರ್ಪಿನ ಮೂಲಕ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಬಲ ಬಂದಂತಾಗಿದೆ.