Home ಇದೀಗ ಬಂದ ಸುದ್ದಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುವುದು, ಡೌನ್‌ಲೋಡ್‌ ಮಾಡುವುದು ಪೋಕ್ಸೋ ಅಪರಾಧ : ಸುಪ್ರೀಂ ಮಹತ್ವದ ತೀರ್ಪು

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುವುದು, ಡೌನ್‌ಲೋಡ್‌ ಮಾಡುವುದು ಪೋಕ್ಸೋ ಅಪರಾಧ : ಸುಪ್ರೀಂ ಮಹತ್ವದ ತೀರ್ಪು

0
ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುವುದು, ಡೌನ್‌ಲೋಡ್‌ ಮಾಡುವುದು ಪೋಕ್ಸೋ ಅಪರಾಧ : ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ,ಸೆ.23- ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು, ಡೌನ್‌ಲೋಡ್‌ ಮಾಡುವುದು ಮತ್ತು ಸಂಗ್ರಹಿಸಿಟ್ಟುಕೊಳ್ಳುವುದು ಪೋಕ್ಸೋ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಯಾವುದೇ ಉದ್ದೇಶವಿಲ್ಲದೆ ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು, ಕವರೇಜ್‌ ಮಾಡುವುದು ಪೋಕ್ಸೋ ಅಡಿ ಬರುವುದಿಲ್ಲ ಎಂದು ಮದ್ರಾಸ್‌‍ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ.

ಮೊಬೈಲ್‌ ಸೇರಿದಂತೆ ಇನ್ನಿತರ ಸಾಧನದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದೂ ಕೂಡಾ ಪೊಕ್ಸೋ ಕಾಯ್ದೆಯಡಿ ಅಪರಾಧವೇ ಎಂದು ಸ್ಪಷ್ಟಪಡಿಸಿದೆ.ಇದರ ಜೊತೆಗೆ, ಮಕ್ಕಳ ಅಶ್ಲೀಲ ಚಿತ್ರ ಎಂಬ ಪದವನ್ನು ಮಕ್ಕಳ ಲೈಂಗಿಕ ಶೋಷಣೆ ಎಂಬುದಾಗಿ ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಎಲ್ಲ ನ್ಯಾಯಾಲಯಗಳಲ್ಲೂ ಮಕ್ಕಳ ಅಶ್ಲೀಲ ಚಿತ್ರ ಎಂಬ ಪದವನ್ನು ತಮ ನ್ಯಾಯಾಲಯದ ಅದೇಶಗಳಲ್ಲೂ ಬಳಕೆ ಮಾಡದಂತೆ ನಿರ್ದೇಶನ ನೀಡಿದೆ.

ಮದ್ರಾಸ್‌‍ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಫರಿದಾಬಾದ್‌ ಮೂಲದ ಸರ್ಕಾರೇತರ ಸಂಸ್ಥೆಯಾದ, ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಜಸ್ಟ್‌ ರೈಟ್‌್ಸ ಫಾರ್‌ ಚಿಲ್ಡ್ರನ್‌ ಅಲೈಯನ್‌್ಸ ಮತ್ತು ನವದೆಹಲಿ ಮೂಲದ ಬಚ್ಪನ್‌ ಬಚಾವೊ ಆಂದೋಲನ್‌ ಹೆಸರಿನ ಸಂಘಟನೆಗಳು ಸಲ್ಲಿಸಿದ್ದ ಮೇಲನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಹಾಗೂ ಮನೋಜ್‌ ಮಿಶ್ರ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಮದ್ರಾಸ್‌‍ ಹೈಕೋರ್ಟ್‌ ನೀಡಿದ ತೀರ್ಪು ಸಾಕಷ್ಟು ಪ್ರಮಾದದಿಂದ ಕೂಡಿದೆ ಎಂದು ಅಸಮಾಧಾನ ಹೊರ ಹಾಕಿದರು.

ನಾವು ಪೋಕ್ಸೊಗೆ ತಿದ್ದುಪಡಿ ತರಲು ಸಂಸತ್ತಿಗೆ ಸೂಚಿಸಿದ್ದೇವೆ. ಆದ್ದರಿಂದ ಮಕ್ಕಳ ಅಶ್ಲೀಲತೆಯ ವ್ಯಾಖ್ಯಾನವನ್ನು ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಸ್ತು ಎಂದು ಉಲ್ಲೇಖಿಸಬಹುದು. ನಾವು ಸುಗ್ರೀವಾಜ್ಞೆ ತರಲು ಸಲಹೆ ನೀಡಿದ್ದೇವೆ. ನಾವು ಎಲ್ಲಾ ನ್ಯಾಯಾಲಯಗಳನ್ನು ಕೇಳಿದ್ದೇವೆ. ಯಾವುದೇ ಆದೇಶದಲ್ಲಿ ಮಕ್ಕಳ ಅಶ್ಲೀಲತೆಯನ್ನು ಉಲ್ಲೇಖಿಸಬಾರದು ಎಂದು ಸೂಚಿಸಿದರು.

ಕಳೆದ ಜ.11ರಂದು ಮದ್ರಾಸ್‌‍ ಹೈಕೋರ್ಟ್‌ ಮಕ್ಕಳ ಅಶ್ಲೀಲ ಚಿತ್ರವನ್ನು ವೀಕ್ಷಿಸಿದ ಮತ್ತು ಡೌನ್‌ಲೋಡ್‌ ಮಾಡಿಕೊಂಡ ಆರೋಪದ ಮೇಲೆ ಚೆನ್ನೈನ ನಿವಾಸಿ 28 ವರ್ಷದ ವ್ಯಕ್ತಿಯ ಮೇಲೆ ದಾಖಲಾಗಿದ್ದ ಮೊಕದ್ದಮೆಗಳನ್ನು ರದ್ದುಪಡಿಸಿತ್ತು.

ಖಾಸಗಿಯಾಗಿ ವೀಕ್ಷಿಸುವುದು ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ಮದ್ರಾಸ್‌‍ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ ಈ ಸಂದರ್ಭದಲ್ಲಿ ರದ್ದುಪಡಿಸಿ ಇದು ಘೋರ ಅಪರಾಧವಾಗಿದ್ದು, ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿದರು.
ಅಲ್ಲದೆ ಹಿಂದೆ ಚೆನ್ನೈ ನಿವಾಸಿ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ದಾಖಲಿಸಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.

ಮಕ್ಕಳ ಅಶ್ಲೀಲತೆ ವಿಷಯವನ್ನು ಪ್ರಕಟಿಸುವುದು ಮತ್ತು ಅದನ್ನು ಹಂಚಿಕೊಳ್ಳುವುದು ಅಪರಾಧ. ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಇನ್ನಷ್ಟು ಅಪಾಯಕಾರಿ ಬೆಳವಣಿಗೆ. ಕೇಂದ್ರ ಸರ್ಕಾರ ಈ ಬಗ್ಗೆ ಹೊಸದಾಗಿ ಮಾರ್ಗಸೂಚಿ ಪ್ರಕಟಿಸಬೇಕೆಂದು ನಿರ್ದೇಶನ ನೀಡಿದರು.
ಮಕ್ಕಳನ್ನು ಲೈಂಗಿಕವಾಗಿ ನಿಂದಿಸುವ ಮತ್ತು ಶೋಷಣೆ ಮಾಡುವ ವಸ್ತು ಎಂಬ ಪದದ ಬದಲಿಗೆ ತಿದ್ದುಪಡಿ ತರಲು ಸಾಧ್ಯವೇ ಎಂಬುದನ್ನು ಕೇಂದ್ರ ಸರ್ಕಾರ ಪರಿಶೀಲನೆ ಮಾಡಬೇಕೆಂದು ಸೂಚನೆ ಕೊಟ್ಟಿದೆ. ಅಲ್ಲದೆ ಇನ್ನುಮುಂದೆ ದೇಶದ ಯಾವುದೇ ನ್ಯಾಯಾಲಯಗಳು ಮಕ್ಕಳ ಅಶ್ಲೀಲತೆ ಎಂಬ ಪದವನ್ನು ಬಳಸದಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠ ಸೂಚಿಸಿತು.

ಮದ್ರಾಸ್‌‍ ಹೈಕೋರ್ಟ್‌ ಈ ಕುರಿತು ಆದೇಶ ನೀಡುವಾಗ ಘೋರ ತಪ್ಪು ಮಾಡಿದೆ. ಪ್ರಕರಣದಲ್ಲಿ ಖುಲಾಸೆಯಾಗಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್‌ ಮರು ಸ್ಥಾಪಿಸಲಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?:
28 ವರ್ಷದ ವ್ಯಕ್ತಿಯೊಬ್ಬ ಮಕ್ಕಳ ಅಶ್ಲೀಲ ಚಿತ್ರವನ್ನು ತನ್ನ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿ ವೀಕ್ಷಣೆ ಮಾಡುತ್ತಿದ್ದ. ಈ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಕುರಿತು ಜನವರಿ 11ರಂದು ವಿಚಾರಣೆ ನಡೆಸಿದ ಮದ್ರಾಸ್‌‍ ಹೈಕೋರ್ಟ್‌, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಪೊಕ್ಸೋ ಕಾಯ್ದೆ 2012ರ ಅಡಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಮತ್ತು ಡೌನ್‌ಲೋಡ್‌ ಮಾಡುವುದು ಅಪರಾಧವಲ್ಲ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.