ನವದೆಹಲಿ,ಆ.4- ಚೀನಾ ಭಾರತದ 2 ಸಾವಿರ ಕಿ.ಮೀ ಭೂ ಪ್ರದೇಶವನ್ನು ಕಬಳಿಸಿದೆ ಎಂದು ನಿಮಗೆ ಹೇಗೆ ಗೊತ್ತು? ನೀವು ನಿಜವಾಗಿಯೂ ಭಾರತದ ಪ್ರಜೆಯಾಗಿದ್ದರೆ ಈ ಮಾತನ್ನು ಹೇಳುತ್ತಿದ್ದೀರಾ? ಅರುಣಾಚಲಪ್ರದೇಶದಲ್ಲಿ ಚೀನಾ ಸೈನಿಕರು ಭಾರತಕ್ಕೆ ಸೇರಿದ 2000 ಕಿ.ಮೀ ಭೂಪ್ರದೇಶವನ್ನು ಆಕ್ರಮಿಸಿದೆ ಎಂಬ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಸುಪ್ರೀಂಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಲಕ್ನೋದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ತಮ ಹೇಳಿಕೆ ಕುರಿತು ಹೊರಡಿಸಿದ್ದ ಸಮನ್ಸ್ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ನಲ್ಲಿ ಮೇಲನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ.ಮಸಿಹ್ ಅವರನ್ನೊಳಗೊಂಡ ದ್ವೀಸದಸ್ಯ ಪೀಠವು, ಚೀನಾ ಅರುಣಾಚಲ ಪ್ರದೇಶದಲ್ಲಿ 2 ಸಾವಿರ ಕಿ.ಮೀ ಪ್ರದೇಶವನ್ನು ಕಬಳಿಕೆ ಮಾಡಿದೆ ಎಂದು ಅಷ್ಟು ನಿರ್ಧಿಷ್ಟವಾಗಿ ಯಾವ ಗ್ಯಾರಂಟಿ ಮೇಲೆ ನೀವು ಹೇಳುತ್ತೀರಿ. ಇದು ನಿಮಗೆ ಹೇಗೆ ತಿಳಿಯಿತು ಎಂದು ರಾಹುಲ್ ಗಾಂಧಿ ಪರ ವಕೀಲರನ್ನು ಪ್ರಶ್ನೆ ಮಾಡಿದರು.
ನೀವೊಬ್ಬ ಜವಾಬ್ದಾರಿಯುತ ಪ್ರತಿಪಕ್ಷದ ನಾಯಕ. ಕೇವಲ ಹೊರಗಡೆ ಆರೋಪ ಮಾಡುವುದು ಸರಿಯಲ್ಲ. ಸೂಕ್ಷ್ಮ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಶ್ನೆ ಮಾಡಬಹುದು. ಅಲ್ಲಿ ಮಾತ್ರ ಪ್ರಶ್ನೆ ಕೇಳದೆ ಸಾರ್ವಜನಿಕವಾಗಿ ಆರೋಪ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.
ರಾಹುಲ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಕೆಲವು ವ್ಯಕ್ತಿಗಳು ರಾಜಕೀಯ ಲಾಭಕ್ಕಾಗಿ ಚೀನಾ ವಿಷಯದ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. 1962 ರಲ್ಲಿ ಕಳೆದುಕೊಂಡ ಭೂಮಿಯನ್ನು ಇತ್ತೀಚಿನ ಬೆಳವಣಿಗೆ ಎಂದು ಅವರು ದಾರಿತಪ್ಪಿಸುವ ರೀತಿಯಲ್ಲಿ ಬಿಂಬಿಸುತ್ತಾರೆ ಎಂದು ತಿರುಗೇಟು ನೀಡಿದ್ದರು.
ಗಡಿಯಾಚೆ ಸಂಘರ್ಷ ಉಂಟಾದರೆ, ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸುವುದು ಅಸಾಮಾನ್ಯವೇ? ಕೇವಲ ಸಾರ್ವಜನಿಕ ವೇದಿಕೆ ಅಲ್ಲದೆ ಬೇರೆ ಕಡೆಯೂ ಈ ಮಾತನ್ನು ಉಲ್ಲೇಖಿಸಿದ್ದಾರೆ. ಲೋಕಸಭೆಯಲ್ಲಿ ಮಾತ್ರ ಏಕೆ ಪ್ರಸ್ತಾಪಿಸಿಲ್ಲ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು.
ರಾಹುಲ್ ಗಾಂಧಿ ಪರ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ವಿರೋಧ ಪಕ್ಷದ ನಾಯಕರೊಬ್ಬರು ಸಮಸ್ಯೆಗಳನ್ನು ಎತ್ತಲು ಸಾಧ್ಯವಾಗದಿದ್ದರೆ, ಅದು ದುರದೃಷ್ಟಕರ ಪರಿಸ್ಥಿತಿಯಾಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಷಯಗಳನ್ನು ಅವರು ಹೇಳಲು ಸಾಧ್ಯವಾಗದಿದ್ದರೆ, ಅವರು ವಿರೋಧ ಪಕ್ಷದ ನಾಯಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಆಗ ನ್ಯಾಯಮೂರ್ತಿ ದತ್ತ ಅವರು, ಹಾಗಾದರೆ ನೀವು ಇಂಥ ವಿಷಯಗಳನ್ನು ಏಕೆ ಸಂಸತ್‌ನಲ್ಲಿ ಪ್ರಶ್ನೆ ಮಾಡಬಾರದು. ಕೇವಲ ಸಾರ್ವಜನಿಕ ವೇದಿಕೆಗಳಲ್ಲಿ ಮಾತ್ರ ಮಾತನಾಡಬೇಕೆ? ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಕ್ಕಷ್ಟೇ ಸೀಮಿತವೇ? ಎಂದು ತರಾಟೆಗೆ ತೆಗೆದುಕೊಂಡರು.
ರಾಹುಲ್ ಗಾಂಧಿ ಹೇಳಿಕೆ:
ಜನವರಿ 2023ರಲ್ಲಿ ತಮ ಭಾರತ್ ಜೋಡೋ ಯಾತ್ರೆಯನ್ನು ಮುಕ್ತಾಯಗೊಳಿಸುವ ಮುನ್ನಾದಿನ ರಾಹುಲ್ ಗಾಂಧಿ, ಚೀನಾ ನಮ ಭೂಮಿಯನ್ನು ವಶಪಡಿಸಿಕೊಂಡಿದೆ ಎಂಬುದನ್ನು ಸಂಪೂರ್ಣವಾಗಿ ನಿರಾಕರಿಸುವ ಸರ್ಕಾರದ ವಿಧಾನವು ಅತ್ಯಂತ ಅಪಾಯಕಾರಿ, ಏಕೆಂದರೆ ಇದು ಬೀಜಿಂಗ್ ಅನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ವರ್ತಿಸಲು ಧೈರ್ಯ ತುಂಬಬಹುದು ಎಂದು ಎಚ್ಚರಿಸಿದ್ದರು.
ಈ ಚೀನಿಯರನ್ನು ನಿಭಾಯಿಸುವ ಮಾರ್ಗವೆಂದರೆ ಅವರೊಂದಿಗೆ ದೃಢವಾಗಿ ವ್ಯವಹರಿಸುವುದು ಮತ್ತು ಅವರು ನಮ ನೆಲದ ಮೇಲೆ ಕುಳಿತಿದ್ದಾರೆ ಮತ್ತು ನಾವು ಅದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವುದು. ಚೀನಿಯರು ಭಾರತದಿಂದ ಯಾವುದೇ ಭೂಮಿಯನ್ನು ತೆಗೆದುಕೊಂಡಿಲ್ಲ ಎಂಬ ಅಭಿಪ್ರಾಯದಲ್ಲಿರುವ ದೇಶದ ಏಕೈಕ ವ್ಯಕ್ತಿ ಭಾರತದ ಪ್ರಧಾನಿ. ನಾನು ಇತ್ತೀಚೆಗೆ ಕೆಲವು ಮಾಜಿ ಸೈನಿಕರನ್ನು ಭೇಟಿಯಾದೆ, ಲಡಾಖ್‌ನ ನಿಯೋಗವೂ ಸಹ, ನಮ ಭಾರತದ ಭೂಪ್ರದೇಶದ 2000 ಚದರ ಕಿಲೋಮೀಟರ್‌ಗಳನ್ನು ಚೀನಿಯರು ವಶಪಡಿಸಿಕೊಂಡಿದ್ದಾರೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.ಒಂದು ಕಾಲದಲ್ಲಿ ಭಾರತದ ಭೂಪ್ರದೇಶದಲ್ಲಿದ್ದ ಅನೇಕ ಗಸ್ತು ಕೇಂದ್ರಗಳು ಈಗ ಚೀನಾದ ನಿಯಂತ್ರಣದಲ್ಲಿವೆ ಎಂದು ಮಾಜಿ ಸೇನಾ ಸಿಬ್ಬಂದಿ ತನಗೆ ಹೇಳಿದ್ದಾಗಿ ಅವರು ತಿಳಿಸಿದ್ದರು.
- ವೋಟ್ ಚೋರಿ ಆರೋಪ : ಸಹಿ ಸಮೇತ ಮಾಹಿತಿ ನೀಡುವಂತೆ ರಾಹುಲ್ ಗಾಂಧಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸೂಚನೆ
- ಒಳಮೀಸಲಾತಿ ಕುರಿತು ಆ.16ರಂದು ವಿಶೇಷ ಸಚಿವ ಸಂಪುಟ ಸಭೆ
- ಟ್ರಂಪ್ನಿಂದ ಆರ್ಥಿಕ ಬ್ಲ್ಯಾಕ್ಮೇಲ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
- ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮನೆ ಮೇಲೆ ಇಡಿ ದಾಳಿ
- ಡಿಸಿಎಂ ಡಿಕೆಶಿ ಚಲಾಯಿಸಿದ್ದ ದ್ವಿಚಕ್ರ ವಾಹನದ ಮೇಲಿದ್ದ ದಂಡ ಪಾವತಿ