Friday, April 18, 2025
Homeರಾಷ್ಟ್ರೀಯ | Nationalರಾಷ್ಟ್ರಪತಿಗಳಿಗೆ ಸುಪ್ರೀಂ ನಿರ್ದೇಶನ ಇದು  ದೇಶದಲ್ಲೇ ಮೊದಲ ಬಾರಿಗೆ

ರಾಷ್ಟ್ರಪತಿಗಳಿಗೆ ಸುಪ್ರೀಂ ನಿರ್ದೇಶನ ಇದು  ದೇಶದಲ್ಲೇ ಮೊದಲ ಬಾರಿಗೆ

Supreme Court

ನವದೆಹಲಿ,ಏ.12- ರಾಜ್ಯಪಾಲರು ಕಾರಣಾಂತರಗಳಿಂದ ಅಂಕಿತ ಹಾಕದೆ ಸೂಚಿಸುವ ಮಸೂದೆಗಳ ಬಗ್ಗೆ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕೆಂದು ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ಕೊಟ್ಟಿದೆ.

ಸಾಮಾನ್ಯವಾಗಿ ದೇಶದ ಪ್ರಥಮ ಪ್ರಜೆ ಎನಿಸಿದ ರಾಷ್ಟ್ರಪತಿಗಳಿಗೆ ದೇಶದ ಯಾವುದೇ ನ್ಯಾಯಾಲಯಗಳು ಮಸೂದೆಗಳಿಗೆ ಸಹಿ ಹಾಕುವುದೂ ಸೇರಿದಂತೆ ಇತರ ವಿಷಯಗಳಲ್ಲಿ ನಿರ್ದೇಶನ ನೀಡುವುದು ತೀರ ವಿರಳ.

ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಮತ್ತು ಆರ್ ಮಹದೇವನ್ ಅವರ ಪೀಠವು, ರಾಜ್ಯಪಾಲರು ಬಾಕಿ ಉಳಿದಿರುವ ಮಸೂದೆಗಳಿಗೆ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಟ್ಟರೆ ಮೂರು ತಿಂಗಳೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದೆ.

ಸುಪ್ರೀಂಕೋರ್ಟ್ ಹೊರಡಿಸಿರುವ ಅಧಿಸೂಚನೆ ವೆಬ್ ಸೈಟ್ ನಲ್ಲಿ ಪ್ರಕಟವಾಗಿದೆ. ಕಳೆದ ಮಂಗಳವಾರ ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಶಾಸನಸಭೆಯಲ್ಲಿ ಅಂಗೀಕೃತವಾಗಿದ್ದ 10 ಮಸೂದೆಗಳಿಗೆ ಸಹಿ ಹಾಕದೆ ತಡೆಯೊಡ್ಡಿದ್ದರು.

ಈ ಪ್ರಕರಣ ಕುರಿತಂತೆ ಸುಪ್ರೀಂಕೋರ್ಟ್ ರಾಜ್ಯಪಾಲರ ನಡೆಗೆ ಭೀಮಾರಿ ಹಾಕಿತ್ತು. ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿಗಳ ಕಾರ್ಯ ನಿರ್ವಹಣೆಯು ನ್ಯಾಯಾಂಗ ಪರಿಶೀಲನೆಗೆ ಅರ್ಹವಾಗಿದೆ ಎಂದು ಆದು ಹೇಳಿದೆ.

ಆರ್ಟಿಕಲ್ 201ನೇ ಪ್ರಕಾರ ರಾಜ್ಯಪಾಲರಿಂದ ಮಸೂದೆಯನ್ನು ಕಾಯ್ದಿರಿಸಿದಾಗ ರಾಷ್ಟ್ರಪತಿಗಳು ಮಸೂದೆಗೆ ಒಪ್ಪಿಗೆ ನೀಡಬೇಕು. ಇಲ್ಲವೇ ತಡೆ ಹಿಡಿಯಲಾಗಿದೆ ಎಂದು ತಿಳಿಸಬೇಕು. ಸಂವಿಧಾನದಲ್ಲಿ ಇದಕ್ಕೆ ಕಾಲಮಿತಿ ಒದಗಿಸಿಲ್ಲ, ರಾಷ್ಟ್ರಪತಿಗಳು ಪಾಕೆಟ್ ವೀಟೋ ಅಧಿಕಾರವನ್ನು ಹೊಂದಿಲ್ಲ, ನೀವು ಮಸೂದೆಗೆ ಒಪ್ಪಿಗೆ ನೀಡಿದ್ದೇನೆ ಇಲ್ಲವೇ ತಡ ಹಿಡಿದಿದ್ದೇನೆ ಎಂದು ಹೇಳಬೇಕು. ಇದಕ್ಕೆ ಸಮಂಜಸವಾದ ಕಾರಣವನ್ನು ತಿಳಿಸಬೇಕು ಎಂದು ಸೂಚಿಸಿದ್ದಾರೆ.

ಕಾನೂನಿನಡಿ ಯಾವುದೇ ಅಧಿಕಾರವನ್ನು ಚಲಾಯಿಸಲು ಸಮಯ ಮಿತಿಯನ್ನು ಸೂಚಿಸದಿದ್ದರೂ ಸಹ ನಿರ್ಧಿಷ್ಟ ಸಮಯದೊಳಗೆ ಚಲಾಯಿಸಬೇಕೆಂಬ ಕಾನೂನಿನ ನಿಲವು ಉತ್ಯರ್ಥವಾಗಿದೆ.

ಆರ್ಟಿಕಲ್ 201ರಡಿ ರಾಷ್ಟ್ರಪತಿಗಳ ಅಧಿಕಾರವನ್ನು ಚಲಾಯಿಸುವುದು ಕಾನೂನಿನ ಈ ಸಾಮಾನ್ಯ ತತ್ವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಲಾಗುವುದಿಲ್ಲ. ಒಂದು ವೇಳೆ ವಿಧೇಯಕಕ್ಕೆ ಸಹಿ ಹಾಕಲು ಎಳಂಬವಾದರೆ ಸೂಕ್ತ ಕಾರಣಗಳನ್ನು ದಾಖಲಿಸಿ ಸಂಬಂಧಪಟ್ಟ ರಾಜ್ಯಗಳಿಗೆ ಮೂರು ತಿಂಗಳೊಳಗೆ ಕಳುಹಿಸಿಕೊಡಬೇಕು ಎಂದು ದ್ವಿಸದಸ್ಯ ಪೀಠ ಹೇಳಿದೆ.

ಮೂರು ತಿಂಗಳ ಅವಧಿಯಲ್ಲಿ ರಾಜ್ಯಪಾಲರು ತಮ್ಮ ಪರಿಗಣನೆಗೆ ಕಾಯ್ದಿರಿಸಿದ ಮಸೂದೆ ಬಗ್ಗೆ ರಾಷ್ಟ್ರಪತಿಗಳು ನಿರ್ಧಾರ ತೆಗೆದುಕೊಳ್ಳಬೇಕೆಂದು ನ್ಯಾಯಾಲಯ ಸೂಚಿಸುತ್ತದೆ. ಒಂದು ವೇಳೆ ಕಾಲಮಿತಿಯೊಳಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಅಂತಹ ರಾಜ್ಯಗಳು ನ್ಯಾಯಾಲಯವನ್ನು ಸಂಪರ್ಕಿಸಬಹುದೆಂದು ಸುಪ್ರೀಂಕೋರ್ಟ್ ಹೇಳಿದೆ.

ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆಗಳಿಂದಾಗಿ ಮಸೂದೆಗಳನ್ನು ಕಾಯ್ದಿರಿಸಿದರೆ ಕಾರ್ಯಾಂಗವು ನ್ಯಾಯಾಲಯಗಳ ಪಾತ್ರವನ್ನು ವಹಿಸಬಾರದು.

ಮಸೂದೆಯಲ್ಲಿ ಸಂಪೂರ್ಣವಾಗಿ ಕಾನೂನು ಸಮಸ್ಯೆಗಳೊಂದಿಗೆ ತೊಡಗಿಸಿಕೊಂಡಾಗ ಕಾರ್ಯಾಂಗದ ಕೈಗಳನ್ನು ಕಟ್ಟಿ ಹಾಕಿದಂತಾಗುತ್ತದೆ ಎಂದು ಹೇಳಲು ನಮಗೆ ಯಾವುದೇ ಹಿಂಜರಿಕೆ ಇಲ್ಲ, ಮಸೂದೆಯ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಶಿಫಾರಸುಗಳನ್ನು ನೀಡುವ ಅಧಿಕಾರ ನ್ಯಾಯಾಲಯಗಳಿಗೆ ಮಾತ್ರ ಇದೆ ಎಂದು ಒತ್ತಿ ಹೇಳಿದೆ.

ಪ್ರಕರಣದ ಹಿನ್ನಲೆ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳಿಗೆ ಒಪ್ಪಿಗೆ ನೀಡದೇ ತಡೆಹಿಡಿದಿರುವ ಕ್ರಮಕ್ಕೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯಪಾಲರ ಈ ನಡೆ ಸಂವಿಧಾನದ ಉಲ್ಲಂಘನೆಯಾಗಿದ್ದು, ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವಂತಿಲ್ಲ ಎಂದು ಆದೇಶಿಸಿತ್ತು.

ತಮಿಳುನಾಡು ಸರ್ಕಾರವು ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿತ್ತು. ರಾಜ್ಯಪಾಲ ಆರ್.ಎನ್ ರವಿ ಅವರು ಹತ್ತು ಮಸೂದೆಗಳನ್ನು ಒಪ್ಪಿಗೆ ನೀಡದೆ ತಡೆಹಿಡಿದಿದ್ದರು. ಇದರಲ್ಲಿ ಶಿಕ್ಷಣ, ಆಡಳಿತ ಸುಧಾರಣೆ ಮತ್ತು ಸ್ಥಳೀಯ ಆರೋಗ್ಯ ಕಾಯ್ದೆಗಳು ಸೇರಿದ್ದವು. ಈ ಮಸೂದೆಗಳನ್ನು ವಿಧಾನಸಭೆಯಲ್ಲಿ ಮರು ಅಂಗೀಕರಿಸಿದ ಸಂತರವೂ ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ್ದು ಇವುಗಳನ್ನು ಅನುಮೋದಿಸಿಲ್ಲ ಎಂದು ಆರೋಪಿಸಿ ತಮಿಳುನಾಡು ಅರ್ಜಿ ಸಲ್ಲಿಸಿತ್ತು.

ರಾಜ್ಯಪಾಲರು ಸಂವಿಧಾನದ 200ನೇ ವಿಧಿಯಡಿ ರಾಜ್ಯ ಸರ್ಕಾರದ ಸಲಹೆಗೆ ಬದ್ದರಾಗಿರಬೇಕು. ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ಅಧಿಕಾರ ಅವರಿಗಿಲ್ಲ ಅವರ ನಡೆ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

ರಾಜ್ಯಪಾಲರು ಮಸೂದೆಯನ್ನು ವೀಟೋ ಮಾಡಲು ಅಥವಾ ಪಾಕೆಟ್ ವೀಟೋ ಮಾಡಲು ಸಾಧ್ಯವಿಲ್ಲ, ಮಸೂದೆಗಳನ್ನು ಸೀಟಿನ ಕೆಳಗಿಟ್ಟುಕೊಂಡು ಕೂರುವಂತಿಲ್ಲ. ರಾಜ್ಯಪಾಲರು ಮಸೂದೆಯನ್ನು ಅನುಮೋದಿಸಬಹುದು ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬಹುದು. ರಾಜ್ಯಪಾಲರು ಮಸೂದೆಯನ್ನು 2ನೇ ಬಾರಿಗೆ ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸುವಂತೆ ಕೇಳುವ ಮೂಲಕ ಅದನ್ನು ತಡೆಯಲು ಸಾಧ್ಯವಿಲ್ಲ, ರಾಜ್ಯಪಾಲರು 2ನೇ ಬಾರಿಗೆ ಮಸೂದೆಯನ್ನು ಅನುಮೋದಿಸಬೇಕು. ಆದರೆ ಎರಡನೆ ಮಸೂದೆಯು ಮೊದಲನೆಯದಕ್ಕಿಂತ ಭಿನ್ನವಾಗಿರಬೇಕು ಎಂದು ಕೋರ್ಟ್ ಹೇಳಿತ್ತು. ಅದನ್ನು ಮೂರು ತಿಂಗಳೊಳಗೆ ಅನುಮೋದಿಸಬೇಕು ಎಂದು ಕೋರ್ಟ್ ತಿಳಿಸಿತ್ತು.

RELATED ARTICLES

Latest News