Monday, November 25, 2024
Homeರಾಷ್ಟ್ರೀಯ | Nationalಕಂಗನಾ ವಿರುದ್ಧ ಅಶ್ಲೀಲ ಪೋಸ್ಟ್ ಮಾಡಿದ್ದ ಸುಪ್ರಿಯಾ ಶ್ರಿನೇಟ್ ವಿರುದ್ಧ ದೂರು

ಕಂಗನಾ ವಿರುದ್ಧ ಅಶ್ಲೀಲ ಪೋಸ್ಟ್ ಮಾಡಿದ್ದ ಸುಪ್ರಿಯಾ ಶ್ರಿನೇಟ್ ವಿರುದ್ಧ ದೂರು

ನವದೆಹಲಿ,ಮಾ.26- ಬಾಲಿವುಡ್ ನಟಿ ಕಂಗನಾ ರಾವತ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿ ವಿವಾದಕ್ಕೆ ಸಿಲುಕಿರುವ ಎಐಸಿಸಿ ವಕ್ತಾರೆ ಸುಪ್ರಿಯ ಶ್ರಿನೇಟ್ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಇಂತಹ ವರ್ತನೆಯನ್ನು ಹಾಗೂ ಮಹಿಳೆಯರ ಘನತೆಯನ್ನು ಕುಂದಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಎಲ್ಲಾ ಮಹಿಳೆಯರ ಗೌರವ ಹಾಗೂ ಘನತೆಯನ್ನು ಎತ್ತಿಹಿಡಿಯೋಣ ಎಂದು ಆಯೋಗ ತಿಳಿಸಿದೆ. ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥೆಯಾಗಿರುವ ಸುಪ್ರಿಯಾ ಶ್ರೀನೇಟ್ ಅವರು, ಕಂಗನಾ ಅಲ್ಪ ಬಟ್ಟೆ ಧರಿಸಿರುವ ಫೋಟೊ ಒಂದನ್ನು ಇನ್ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡು, ಅಕ್ಷೇಪಾರ್ಹ ಶೀರ್ಷಿಕೆ ನೀಡಿದ್ದರು.

ಶ್ರೀನೇಟ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ತಿರುಗೇಟು ನೀಡಿದ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರ ಮನಸ್ಥಿತಿ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಒಬ್ಬ ಮಹಿಳೆಯಾಗಿ ಮತ್ತೊಬ್ಬ ಮಹಿಳೆಯನ್ನು ಹೀನವಾಗಿ ನೋಡುವ ನಾಯಕರು ಪಕ್ಷದ ಸಾಮಾಜಿಕ ಜಾಲತಾಣದ ಹೊಣೆ ಹೊತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸುಪ್ರಿಯಾ ಶ್ರೀನೇಟ್ ಅವರಿಗೆ ಮರುತ್ತರ ನೀಡಿರುವ ಕಂಗನಾ ರಣಾವತ್, ಕಳೆದ 20 ವರ್ಷದಿಂದ ನಾನು ಚಿತ್ರರಂಗದಲ್ಲಿದ್ದೇನೆ. ಹಲವು ಪಾತ್ರ ನಿಭಾಯಿಸಿದ್ದೇನೆ. ಕ್ವೀನ್‍ನ ನಿಷ್ಕಪಟ ಹುಡುಗಿ ಪಾತ್ರದಿಂದ ಹಿಡಿದು ಧಾಕಡ್‍ನ ಮೋಹಕ ಗೂಢಚಾರಿಣಿ ಪಾತ್ರದವರೆಗೂ, ದೇವಕನ್ಯೆ ಮಣಿಕರ್ಣಿಕದಿಂದ ಹಿಡಿದು ರಾಕ್ಷಸಿ ಅವತಾರದ ಚಂದ್ರಮುಖಿವರೆಗೆ, ರಜ್ಜೋದ ವೇಶ್ಯೆ ಪಾತ್ರದಿಂದ ಕ್ರಾಂತಿಕಾರಿ ತಲೈವಿಯ ಪಾತ್ರಗಳವರೆಗೆ ವೈವಿಧ್ಯಮಯ ಪಾತ್ರ ನಿರ್ವಹಿಸಿರುವೆ.

ನಾವು ನಮ್ಮ ಹೆಣ್ಣು ಮಕ್ಕಳನ್ನು ಪೂರ್ವಾಗ್ರಹ ಮನಸ್ಥಿತಿಯ ಸಂಕೋಲೆಯಿಂದ ಬಿಡುಗಡೆ ಮಾಡಬೇಕು. ದೇಹದ ಭಾಗಗಳ ಮೇಲಿರುವ ಕುತೂಹಲ ಮೀರಿ ಮುನ್ನಡೆಯಬೇಕು. ದಿನ ನಿತ್ಯ ಜೀವನದಲ್ಲಿ ಹೆಣ್ಣು ಅನುಭವಿಸುವ ನಿಂದನೆಯನ್ನು ತಡೆಯಲು ಗಮನ ಕೊಡಬೇಕು. ಎಲ್ಲಾ ಮಹಿಳೆಯರು ತಮ್ಮ ಘನತೆಗೆ ಅರ್ಹರು, ಎಂದಿದ್ದಾರೆ.

ಕಂಗನಾ ಅವರ ಬಗ್ಗೆ ಆಕ್ಷೇಪಾರ್ಹ ಫೋಟೋ ಹಾಕಿ ಅವಹೇಳನಕಾರಿ ಶೀರ್ಷಿಕೆ ನೀಡಿದ ಸುಪ್ರಿಯಾ ಶ್ರೀನೇಟ್ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆಗ್ರಹಿಸಿದ್ದಾರೆ.

ತಮ್ಮ ಚುನಾವಣಾ ಪ್ರವೇಶ ಕುರಿತು ಗುಜರಾತ್ ಕಾಂಗ್ರೆಸ್ ನಾಯಕರೊಬ್ಬರ ಕೀಳು ಮಟ್ಟದ ಸಂಭಾಷಣೆಯ ಸ್ಕ್ರೀನ್‍ಶಾಟ್‍ನ್ನು ಕೂಡ ಕಂಗನಾ ಹಂಚಿಕೊಂಡಿದ್ದಾರೆ. ವಿಕ್ರಮ್ ಎಂಬುವವರ ಪೋಸ್ಟ್ ಗೆ ಗುಜರಾತ್ ಕಾಂಗ್ರೆಸ್ ನಾಯಕ ಎಚ್‍ಎಸ್ ಅಹೀರ್ ನಗುವಿನ ಮೋಜಿ ಹಾಕಿದ್ದರು.

ಯುವ ನಾಯಕನಿಗೆ ಟಿಕೆಟ್ ದೊರೆತರೆ, ಆತನ ಸಿದ್ಧಾಂತದ ಮೇಲೆ ದಾಳಿ ನಡೆಯುತ್ತದೆ. ಯುವ ನಾಯಕಿಗೆ ಟಿಕೆಟ್ ಸಿಕ್ಕರೆ, ಆಕೆಯ ಮೇಲೆ ಲೈಂಗಿಕವಾಗಿ ದಾಳಿ ನಡೆಸಲಾಗುತ್ತದೆ. ವಿಚಿತ್ರ! ಜತೆಗೆ, ಕಾಂಗ್ರೆಸ್ ನಾಯಕರು ಸಣ್ಣ ಪಟ್ಟಣದ ಹೆಸರನ್ನೂ ಲೈಂಗಿಕಗೊಳಿಸುತ್ತಿದ್ದಾರೆ. ಮಂಡಿಯಲ್ಲಿ ಯುವ ಮಹಿಳೆ ಅಭ್ಯರ್ಥಿಯಾಗಿದ್ದಾಳೆ ಎಂಬ ಕಾರಣಕ್ಕಾಗಿಯೇ ಎಲ್ಲಾ ಕಡೆ ಆ ಪಟ್ಟಣವನ್ನು ಲೈಂಗಿಕ ಕಂಟೆಕ್ಸ್‍ನಲ್ಲಿ ಬಳಸಲಾಗುತ್ತಿದೆ. ಸೆಕ್ಸಿಸ್ಟ್ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು ಎಂದು ಕಂಗನಾ ಕಿಡಿಕಾರಿದ್ದಾರೆ.

ನಕಲಿ ಅಕೌಂಟ್ ಎಂದ ಸುಪ್ರಿಯಾ
ವೈರಲ್ ಪೋಸ್ಟ್ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸುಪ್ರಿಯಾ ಶ್ರೀನೇಟ್, ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವ ಕಿಡಿಗೇಡಿಗಳು ಪೋಸ್ಟ್ ಮಾಡಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಈ ಮೋಜಿ ಸಂಬಂಧ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಯಾರೋ ನಕಲಿ ಖಾತೆಯಿಂದ ಆ ಪೋಸ್ಟ್ ಅನ್ನು ಕಾಪಿ ಮಾಡಿ, ನನ್ನ ಇನ್ಸ್ಟಗ್ರಾಂ ಮತ್ತು ಫೇಸ್ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಖಾತೆಗೆ ಪ್ರವೇಶ ಹೊಂದಿರುವ ಯಾರು ಈ ಕೆಲಸ ಮಾಡಿದ್ದಾರೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

RELATED ARTICLES

Latest News