Friday, January 17, 2025
Homeರಾಜ್ಯಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಯಾವುದೇ ನೋಟೀಸ್ ನೀಡಿಲ್ಲ : ಸುರ್ಜೇವಾಲ ಸ್ಪಷ್ಟನೆ

ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಯಾವುದೇ ನೋಟೀಸ್ ನೀಡಿಲ್ಲ : ಸುರ್ಜೇವಾಲ ಸ್ಪಷ್ಟನೆ

Surjewala clarifies on notice to Minister Satish Jarkiholi

ಬೆಂಗಳೂರು, ಜ.17- ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವದಂತಿಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಸಚಿವ ಸತೀಶ್‌ ಜಾರಕಿಹೊಳಿ ಅವರಿಗೂ ಯಾವುದೇ ನೋಟೀಸ್‌‍ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಪ್ರಮುಖ ವದಂತಿಗಳನ್ನು ತಳ್ಳಿ ಹಾಕುವ ಮೂಲಕ ರಾಜ್ಯ ಕಾಂಗ್ರೆಸ್‌‍ ನಲ್ಲಿ ಸೃಷ್ಟಿಯಾಗಿದ್ದ ಅಲ್ಲೋಲಕಲ್ಲೋಲವನ್ನು ತಣ್ಣಗಾಗಿಸುವ ಯತ್ನ ನಡೆಸಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ನೋಟೀಸ್‌‍ ನೀಡಲಾಗಿದೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಸುರ್ಜೇವಾಲ, ಇಂತಹ ವಿಕಲ್ಪ ಸುದ್ದಿಗಳು ಎಲ್ಲಿಂದ ಹರಡುತ್ತವೆ ಎಂದು ನನಗೆ ಗೊತ್ತಿಲ್ಲ. ಮಾಧ್ಯಮಗಳು ಜವಾಬ್ದಾರಿಯುತ ಹಾಗೂ ಸಂಯಮದಿಂದ ವರ್ತಿಸಬೇಕು. ಸಚಿವರು ಅಥವಾ ಯಾವುದೇ ವ್ಯಕ್ತಿಗೆ ವಿನಾಕಾರಣ ನೋಟೀಸ್‌‍ ನೀಡಲಾಗುವುದಿಲ್ಲ. ಬಿಜೆಪಿ ಪ್ರಾಯೋಜಿತ ವದಂತಿಗಳನ್ನು ಯಾರು ನಂಬಬಾರದು ಎಂದು ಮನವಿ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುವುದಾದರೆ ಡಿ.ಕೆ.ಶಿವಕುಮಾರ್‌ ಅವರು ಗಾಂಧಿ ಭಾರತ ಕಾರ್ಯಕ್ರಮದ ಸಿದ್ಧತೆಗಾಗಿ ಇಂದಿನ ಪೂರ್ವ ಭಾವಿ ಸಭೆಗೆ ಏಕೆ ಬರುತ್ತಿದ್ದರು ಎಂದು ಮರು ಪ್ರಶ್ನಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಇಲ್ಲ ಎಂದಿದ್ದಾರೆ.

ಎರಡು ಬಣಗಳಿಗೂ ಬ್ರೇಕ್‌:
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂದು ಸಚಿವರಾದ ಕೆ.ಎನ್‌.ರಾಜಣ್ಣ, ಸತೀಶ್‌ ಜಾರಕಿಹೊಳಿ ಸೇರಿದಂತೆ ಅನೇಕರು ಬಹಿರಂಗ ಹೇಳಿಕೆ ನೀಡಿದ್ದರು. ಒಂದು ಹೆಜ್ಜೆ ಮುಂದೆ ಹೋಗಿದ್ದ ಸತೀಶ್‌ ಜಾರಕಿಹೊಳಿ, ವಿಧಾನಸಭೆ ಚುನಾವಣೆ ಬಳಿಕ ಪಕ್ಷ ಸಂಘಟನೆ ಸೊರಗಿದೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮತ ತಂದು ಕೊಡುವ ಪೂರ್ಣಾವಧಿ ಅಧ್ಯಕ್ಷರು ಬೇಕು ಎಂದು ಹೇಳಿದ್ದರು. ಇದು ಭಾರೀ ಸಂಚಲನ ಮೂಡಿಸಿತ್ತು.

ಸತೀಶ್‌ ಜಾರಕಿಹೊಳಿ ಬೆಳಗ್ಗೆ ನೋಟೀಸ್‌‍ ಕೊಟ್ಟರೆ ಸಂಜೆ ವೇಳೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್‌ ಭಂಡಾರಿ ಸಚಿವರು ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಸಚಿವರು ತಮ ಇಲಾಖೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡುವಂತೆ ಪತ್ರ ಬರೆದಿದ್ದರು. ಇದನ್ನು ನೋಟೀಸ್‌‍ ಎಂದು ಪರಿಭಾವಿಸಲಾಗಿತ್ತು.
ನೋಟೀಸ್‌‍ ಕೊಟ್ಟರೆ ಅನಾವುತವೇನೂ ಆಗುವುದಿಲ್ಲ. ಅದಕ್ಕೆ ಉತ್ತರ ಕೊಡುತ್ತೇನೆ ಎಂದು ಸತೀಶ್‌ ಜಾರಕಿಹೊಳಿ ಕೂಡ ಖಾರವಾಗಿಯೇ ತಿರುಗೇಟು ನೀಡಿದ್ದರು.

ಇದಕ್ಕೆಲ್ಲಾ ತೆರೆ ಎಳೆದಿರುವ ರಣದೀಪ್‌ ಸಿಂಗ್‌ ಸುರ್ಜೇವಾಲ ಯಾರಿಗೂ ನೋಟೀಸ್‌‍ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅದೇ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ಅವರನ್ನು ಬದಲಾವಣೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌‍ ನಲ್ಲಿರುವ ಎರಡೂ ಬಣಗಳಿಗೆ ಚಾಟಿ ಬೀಸಿದ್ದಾರೆ.

ಎಲ್ಲರೂ ತಮಗೆ ನೀಡಿರುವ ಜವಾಬ್ದಾರಿ ನಿಭಾಯಿಸುವತ್ತ ಗಮನ ಹರಿಸಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಎಲ್ಲದಕ್ಕೂ ಮೂಗು ತೂರಿಸಬೇಡಿ ಮತ್ತು ಪಕ್ಷಕ್ಕೆ ಹಾನಿಯಾಗುವಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದಂತಿದೆ. ಇನ್ನೂ ಮುಂದಾದರೂ ಆಡಳಿತಾ ರೂಢ ಕಾಂಗ್ರೆಸ್‌‍ ನಲ್ಲಿ ಗುಂಪುಗಾರಿಕೆ ತಣ್ಣಗಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Latest News