Tuesday, July 8, 2025
Homeರಾಜ್ಯಅತ್ತ ಶಾಸಕರ ಜೊತೆ ಸುರ್ಜೇವಾಲ ಸಭೆ, ಇತ್ತ ಸಚಿವರೊಂದಿಗೆ ಸಿಎಂ ಪ್ರಗತಿ ಪರಿಶೀಲನೆ

ಅತ್ತ ಶಾಸಕರ ಜೊತೆ ಸುರ್ಜೇವಾಲ ಸಭೆ, ಇತ್ತ ಸಚಿವರೊಂದಿಗೆ ಸಿಎಂ ಪ್ರಗತಿ ಪರಿಶೀಲನೆ

Surjewala meets with MLAs, CM reviews progress with ministers

ಬೆಂಗಳೂರು,ಜು.7- ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಒಂದೆಡೆ ಪಕ್ಷದ ಶಾಸಕರ ಜೊತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಇಲಾಖೆಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ ಸರ್ಕಾರ ಮತ್ತು ಪಕ್ಷ ಚಟುವಟಿಕೆಗಳು ಏಕಕಾಲಕ್ಕೆ ಬಿರುಸು ಪಡೆದುಕೊಂಡಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಿಗ್ಗೆಯಿಂದಲೇ ಪ್ರಗತಿ ಪರಿಶೀಲನಾ ಸಭೆ ಆರಂಭಿಸಿದ್ದಾರೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಆರ್ಥಿಕ ಇಲಾಖೆ, ಗೃಹ ಇಲಾಖೆಗಳ ಸರಣಿ ಸಭೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳ ಮತ್ತು ಭರವಸೆಗಳ ಅನುಷ್ಠಾನ ಇಲಾಖಾವಾರು ಬಿಡುಗಡೆಯಾಗಿರುವ ಅನುದಾನ ಮತ್ತು ಅದರ ವೆಚ್ಚ, ಬಾಕಿ ಯೋಜನೆಗಳ ಅಧಿಸೂಚನೆಗಳು, ಅನುದಾನದ ಲಭ್ಯತೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ.

ಈ ನಡುವೆ ಹಣಕಾಸು ಇಲಾಖೆಯಿಂದ ತೆರಿಗೆ ಸಂಪನೂಲ ಸಂಗ್ರಹ ಮತ್ತು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳ ಅನುದಾನ ಲಭ್ಯತೆ ಬಗ್ಗೆಯೂ ಮುಖ್ಯಮಂತ್ರಿ ಮಾಹಿತಿ ಕಲೆ ಹಾಕಿದ್ದಾರೆ. ಬಹಳಷ್ಟು ಇಲಾಖೆಗಳಲ್ಲಿ ಬಜೆಟ್‌ ಯೋಜನೆಗಳು ಈವರೆಗೂ ಅನುಷ್ಠಾನಗೊಳ್ಳದೆ ನನೆಗುದಿಗೆ ಬಿದ್ದಿವೆ. ಪ್ರತಿಯೊಂದಕ್ಕೂ ಅನುದಾನದ ಕೊರತೆಯ ನೆಪ ಹೇಳಿ ಅಧಿಕಾರಿಗಳು ಉಡಾಫೆ ನಡವಳಿಕೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳಿದ್ದವು.

ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಇಲಾಖೆಯ ಜೊತೆ ಪ್ರತ್ಯೇಕ ಮಾತುಕತೆ ನಡೆಸುವ ಮೂಲಕ ಅದರಲ್ಲೂ ತಲಾ ಒಂದು ಗಂಟೆ ಸುದೀರ್ಘ ಅವಧಿಯ ಸಮಾಲೋಚನೆ ಮೂಲಕ ಜಡತನ ಪ್ರದರ್ಶಿಸುವ ಇಲಾಖೆ ಮುಖ್ಯಸ್ಥರಿಗೆ ಮುಖ್ಯಮಂತ್ರಿ ಚಳಿ ಬಿಡಿಸಿದ್ದಾರೆ.

ಘೋಷಿತ ಎಲ್ಲಾ ಯೋಜನೆಗಳು ಈ ಆರ್ಥಿಕ ವರ್ಷದಲ್ಲೇ ಅನುಷ್ಠಾನಕ್ಕೆ ಬರಬೇಕು. ಒಂದು ವೇಳೆ ವಿಳಂಬವಾಗುವುದಾದರೆ ಅದಕ್ಕೆ ಸೂಕ್ತ ಕಾರಣಗಳನ್ನು ಮತ್ತು ವಿವರಣೆಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ.

ಇತ್ತ ಮುಖ್ಯಮಂತ್ರಿಗಳು ಸರಣಿ ಸಭೆ ನಡೆಸುತ್ತಿರುವ ವೇಳೆಯಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ 24 ಶಾಸಕರ ಜೊತೆ ವೈಯಕ್ತಿಕ ಮಟ್ಟದ ಚರ್ಚೆ ನಡೆಸಿದ್ದಾರೆ.

ಈ ಮೊದಲು ಕೇಳಿಬಂದಂತಹ ಗೊಂದಲದ ಹೇಳಿಕೆಗಳು, ಆರೋಪಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹೈಕಮಾಂಡ್‌ ಸುರ್ಜೇವಾಲ ಅವರ ಸಭೆಯ ಮೂಲಕ ಪಕ್ಷದ ಶಿಸ್ತನ್ನು ಮರುಸ್ಥಾಪಿಸಲು ಯತ್ನಿಸುತ್ತಿದೆ.

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದ ಬಿ.ಆರ್‌.ಪಾಟೀಲ್‌ ತಣ್ಣಗಾಗಿದ್ದು, ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಬೆಳಗಾವಿಯ ರಾಜು ಕಾಗೆ ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಮಾಡಿ ಟಾಂಗ್‌ ನೀಡಲಾರಂಭಿಸಿದ್ದ ರಾಮನಗರದ ಇಕ್ಬಾಲ್‌ ಹುಸೇನ್‌, ಕುಣಿಗಲ್‌ನ ರಂಗನಾಥ್‌ ಮತ್ತಿತರರು ಡಿ.ಕೆ.ಶಿವಕುಮಾರ್‌ರವರ ನೋಟೀಸ್‌‍ನ ಗುಟುರಿಗೆ ತಣ್ಣಗಾಗಿದ್ದಾರೆ.

ಒಟ್ಟಿನಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್‌‍ ಪಕ್ಷದ ಓರೆಕೋರೆಗಳು ಸದ್ಯಕ್ಕೆ ಸರಿಹೋದಂತೆ ಕಂಡುಬರುತ್ತಿದೆ. ರಾಜಕಾರಣ ನಿಂತ ನೀರಲ್ಲ ಎಂಬ ನಾಣ್ಣುಡಿಯಂತೆ ಯಾವಾಗ, ಏನು ನಡೆಯಲಿದೆ ಎಂಬುದು ಕೂಡ ಸದ್ಯಕ್ಕೆ ಊಹಿಸಲು ಕಷ್ಟಸಾಧ್ಯವಾಗಿದೆ.

RELATED ARTICLES

Latest News