Wednesday, September 17, 2025
Homeರಾಜ್ಯಕರ್ನಾಟಕಕ್ಕೆ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸುರ್ಜೇವಾಲ ಒತ್ತಾಯ

ಕರ್ನಾಟಕಕ್ಕೆ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸುರ್ಜೇವಾಲ ಒತ್ತಾಯ

Surjewala urges central government to supply 3.36 lakh metric tonnes of urea fertilizer to Karnataka

ಬೆಂಗಳೂರು, ಸೆ.17- ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರವನ್ನು ತ್ವರಿತವಾಗಿ ಪೂರೈಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ಶಿವಾರಜ್‌ ಸಿಂಗ ಚೌಹಾಣ್‌ ಅವರಿಗೆ ಪತ್ರ ಬರೆದಿರುವ ಅವರು, ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು. ಕರ್ನಾಟಕದಲ್ಲಿ ಮುಂಗಾರು ಬೇಗ ಪ್ರಾರಂಭವಾಗಿದ್ದು ಸರಾಸರಿಗಿಂತ ಶೇ.3ರಷ್ಟು ಹೆಚ್ಚು ಮಳೆಯಾಗಿದ್ದರಿಂದ ಬಿತ್ತನೆ ನಿರೀಕ್ಷೆಗೂ ಮುಂಚೆ ಚಾಲನೆಯಾಗಿದೆ ಎಂದು ವಿವರಿಸಿದ್ದಾರೆ.

2025-26ನೇ ಸಾಲಿನಲ್ಲಿ ರಾಜ್ಯದಲ್ಲಿ 114.40 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 160.68 ಲಕ್ಷ ಟನ್‌ ಆಹಾರಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನಾ ಗುರಿ ಇದೆ. ಮುಂಗಾರು ಹಂಗಾಮಿಗೆ 82.50 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು 81.85 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ ಎಂದು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 26.77 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿದೆ. 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಕೊರತೆ ಉಂಟಾಗಿದೆ. ರಾಜ್ಯಗಳಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯ ಸಂಪೂರ್ಣ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು. ಕರ್ನಾಟಕದ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡಿಲ್ಲ ಎಂದು ಟೀಕಿಸಿದ್ದಾರೆ.

ಏಪ್ರಿಲ್‌ನಿಂದ ಸೆಪ್ಟೆಂಬರ್‌ 2025ರವರೆಗೆ ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಬಾಕಿಯಿದೆ. ಕೇಂದ್ರ ಸರ್ಕಾರದಿಂದ ರಸಗೊಬ್ಬರ ಪೂರೈಕೆಯಲ್ಲಿ ಆಗಿರುವ ಕೊರತೆಯಿಂದ ಕರ್ನಾಟಕ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ. ಈ ವರ್ಷ ಯೂರಿಯಾ ಪೂರೈಕೆ ಪ್ರಮಾಣ ಶೇ.50ರಷ್ಟು ಕಡಿಮೆ ಆಗಿದೆ ಎಂದು ಅವರು ಹೇಳಿದ್ದಾರೆ.
ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕಕ್ಕೆ ಪೂರೈಸಬೇಕಿದ್ದ ಯೂರಿಯಾ ರಸಗೊಬ್ಬರವನ್ನು ಆದಷ್ಟು ಶೀಘ್ರದಲ್ಲಿ ಪೂರೈಸಬೇಕೆಂದು ಕರ್ನಾಟಕ ರಾಜ್ಯದ ರೈತರ ಪರವಾಗಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಿ ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರವನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಮಾನ್ಯ ಮಾಡಿ ರಾಜ್ಯದ ರೈತರ ಹಿತಕಾಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

RELATED ARTICLES

Latest News