Wednesday, July 9, 2025
Homeರಾಜ್ಯಶಾಸಕರ ಅಭಿಪ್ರಾಯ ಸಂಗ್ರಹ ಸಂಗ್ರಹಿಸಿದ ಸುರ್ಜೇವಾಲ, ಸಚಿವರಿಗೆ ತಲೆ ಬಿಸಿ

ಶಾಸಕರ ಅಭಿಪ್ರಾಯ ಸಂಗ್ರಹ ಸಂಗ್ರಹಿಸಿದ ಸುರ್ಜೇವಾಲ, ಸಚಿವರಿಗೆ ತಲೆ ಬಿಸಿ

Surjewala, who collected the opinions of the MLAs

ಬೆಂಗಳೂರು,ಜು.9– ಡಿಸೆಂಬರ್‌ನಲ್ಲಿ ಸಂಪುಟ ಪುನರ್‌ ರಚನೆಯಾಗಲಿದ್ದು, ಆ ವೇಳೆಗೆ ಶಾಸಕರೊಂದಿಗೆ ಚರ್ಚೆ ನಡೆಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಂಗ್ರಹಿಸಿರುವ ಅಭಿಪ್ರಾಯಗಳು ಮಹತ್ವದ ಪಾತ್ರ ವಹಿಸಲಿದೆ.

ಕಳೆದ ವಾರ ಮತ್ತು ಈ ವಾರ ತಲಾ ಮೂರು ದಿನ ಸುರ್ಜೇವಾಲ ಸುಮಾರು ಬಹುತೇಕ ಶಾಸಕರ ಜೊತೆ ವೈಯಕ್ತಿಕವಾದ ಚರ್ಚೆ ನಡೆಸಿದ್ದು, ಅಭಿಪ್ರಾಯ ಸಂಗ್ರಹಿಸಿದ್ದಾರೆ.ಸಚಿವರ ಕಾರ್ಯವೈಖರಿಗಳು, ಶಾಸಕರ ಸ್ಪಂದನೆ, ಇಲಾಖೆಯ ಅಭಿವೃದ್ಧಿ ಆಲೋಚನೆಗಳು ಜನಸ್ಪಂದನೆ, ಪಕ್ಷಸಂಘಟನೆ ಸೇರಿದಂತೆ ಹಲವಾರು ವಿಚಾರಗಳಿಗೆ ಸಂಬಂಧಪಟ್ಟಂತೆ ಸುರ್ಜೇವಾಲ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಈ ವೇಳೆ ಯಾವ ಶಾಸಕರ ಸಾಮರ್ಥ್ಯ ಮತ್ತು ಸಂಘಟನಾ ಶಕ್ತಿಗಳೇನು ಎಂಬ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. ಇದನ್ನು ಹೈಕಮಾಂಡ್‌ಗೆ ಸುರ್ಜೇವಾಲ ವರದಿ ರೂಪದಲ್ಲಿ ನೀಡಲಿದ್ದಾರೆ. ಮುಂದಿನ 5 ತಿಂಗಳಲ್ಲಿ ರಾಜ್ಯಸರ್ಕಾರಕ್ಕೆ ಎರಡೂವರೆ ವರ್ಷಗಳಾಗಿದ್ದು, ಸಚಿವ ಸಂಪುಟ ಪುನರ್‌ರಚನೆಯಾಗಲಿದೆ.

ಆ ವೇಳೆ ಶಾಸಕರ ಅಭಿಪ್ರಾಯಗಳನ್ನು ಆಧರಿಸಿ ಸಚಿವರನ್ನು ಸಂಪುಟದಲ್ಲಿ ಮುಂದುವರೆಸುವ ಅಥವಾ ಕೈಬಿಡುವ ಬಗ್ಗೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದವರೇ ಆಗಿರುವುದರಿಂದ ರಾಜಕೀಯ ಪ್ರಭಾವಗಳು ಸುಲಭಸಾಧ್ಯವಾಗಿ ಕೆಲಸ ಮಾಡಲಿವೆ. ಅನಗತ್ಯ ಒತ್ತಡಗಳು ಹೆಚ್ಚಲಿದ್ದು, ನಿಷ್ಟುರಗಳಿಗೆ ಕಾರಣವಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಹೈಕಮಾಂಡ್‌ ಅಭಿಪ್ರಾಯ ಸಂಗ್ರಹದ ಕಸರತ್ತು ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾವುದೇ ನಾಯಕರ ಬೆಂಬಲಿಗರು ಎಂಬುದು ಅಮುಖ್ಯವಾಗಲಿದೆ. ಇಲಾಖೆಯಲ್ಲಿ ಸಚಿವರ ಕಾರ್ಯವೈಖರಿ, ಶಾಸಕರೊಂದಿಗೆ ಸೌಹಾರ್ದತೆ ಹಾಗೂ ಪಕ್ಷ ಸಂಘಟನೆಯಲ್ಲಿನ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪರಿಗಣಿಸಿ ಸ್ಥಾನಮಾನಗಳು ನಿರ್ಧಾರವಾಗಲಿವೆ ಎಂದು ಹೇಳಲಾಗುತ್ತಿದೆ.

ಶಾಸಕರು ಸ್ಥಳೀಯ ಮಟ್ಟದಲ್ಲಿ ಜನರ ಜೊತೆ ನೇರವಾದ ಸಂಬಂಧ ಹೊಂದಿರುತ್ತಾರೆ. ಸರ್ಕಾರದ ವಿಚಾರವಾಗಿ ಅವರು ಸಂಗ್ರಹಿಸುವ ಮಾಹಿತಿಗಳು ವಾಸ್ತವಾಂಶಕ್ಕೆ ಹತ್ತಿರವಾಗಿರಲಿದ್ದು, ಸರ್ಕಾರದ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳೇನು ಎಂಬುದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವುದು ಸುರ್ಜೇವಾಲರವರ ಸಭೆಯ ಪ್ರಮುಖ ಉದ್ದೇಶವಾಗಿದೆ.

ಗ್ಯಾರಂಟಿ ಯೋಜನೆಗಳಿಂದಾಗಿ ವರ್ಷಕ್ಕೆ 50 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದು ಜನರಿಗೆ ಅನುಕೂಲವಾಗಿದೆಯೇ? ಅಥವಾ ಸರ್ಕಾರದ ಯೋಜನೆಗಳು ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥವಾಗುತ್ತಿವೆಯೇ? ಎಂಬುದರ ಬಗ್ಗೆಯೂ ಸುರ್ಜೇವಾಲ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಮುಂದಿನ ಡಿಸೆಂಬರ್‌ನಲ್ಲಿ ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜೊತೆ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ.ಆ ಬಳಿಕ ಸಚಿವರ ಜೊತೆ ನೇರವಾದ ಚರ್ಚೆ ನಡೆಸಿ ಅವರ ಕಾರ್ಯವೈಖರಿ ಸುಧಾರಣೆಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಸಚಿವರು ತಿದ್ದಿಕೊಳ್ಳದೇ ಇದ್ದರೆ ಡಿಸೆಂಬರ್‌ನಲ್ಲಿ ನಡೆಯುವ ಸಂಪುಟ ಪುನರ್‌ರಚನೆಯಲ್ಲಿ ತಲೆದಂಡವಾಗುವ ಸಾಧ್ಯತೆಗಳು ದಟ್ಟವಾಗಿವೆ.ಬಹಳಷ್ಟು ಮಂದಿ ಸಚಿವರು ಉಡಾಫೆ ಮನೋಭಾವದಲ್ಲಿದ್ದು, ಹೈಕಮಾಂಡ್‌ನ ಸೂಚನೆಯ ಹೊರತಾಗಿ ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುತ್ತಿದ್ದು, ಸರ್ಕಾರದ ವರ್ಚಸ್ಸಿಗೂ ಧಕ್ಕೆಯುಂಟು ಮಾಡಿದ್ದಾರೆ ಎಂಬ ಆರೋಪಗಳಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸುರ್ಜೇವಾಲ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.ಶಾಸಕರ ಅಭಿಪ್ರಾಯ ಸಂಗ್ರಹ ಸಚಿವರ ಎದೆಬಡಿತವನ್ನು ಹೆಚ್ಚಿಸಿದೆ.

RELATED ARTICLES

Latest News