ಬೆಂಗಳೂರು,ಜು.25– ರಾಜ್ಯಸರ್ಕಾರದ ಅಧಿಕಾರಿಗಳೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದ್ದಾರೆ ಎನ್ನಲಾದ ಬೆಳವಣಿಗೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಆಡಳಿತ ಪಕ್ಷದ ಶಾಸಕರು, ಸಚಿವರೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸುರ್ಜೇವಾಲ ಈಗಾಗಲೇ 4 ಹಂತಗಳಲ್ಲಿ ಕರ್ನಾಟಕಕ್ಕೆ ಬಂದು ಶಾಸಕರು, ಸಚಿವರು ಹಾಗೂ ಪ್ರಮುಖ ನಾಯಕರ ಜೊತೆ ಆಪ್ತ ಸಮಾಲೋಚನೆ ನಡೆಸಿದರು.
ಅವರು ತಂಗಿರುವ ಖಾಸಗಿ ಹೋಟೆಲ್‌ನಲ್ಲಿ ಅಧಿಕಾರಿಗಳ ಸಭೆ ಕೂಡ ನಡೆಸಿದ್ದಾರೆ ಎಂಬ ಆರೋಪ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸುರ್ಜೇವಾಲ ಅವರು ಶಾಸಕರು, ಸಚಿವರ ಜೊತೆ ಚರ್ಚೆ ನಡೆಸುವಾಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಹೊರಗಿಟ್ಟಿದ್ದರು. ಅದರ ಮುಂದುವರೆದ ಭಾಗವಾಗಿ ವಿವಿಧ ಇಲಾಖೆಗಳ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ತಾವು ತಂಗಿದ್ದ ಖಾಸಗಿ ಹೋಟೆಲ್‌ಗೆ ಕರೆಸಿ ಮಾಹಿತಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.
ಇದಕ್ಕೆ ಜೆಡಿಎಸ್ ಪಕ್ಷ ಕಟು ಟೀಕೆ ಮಾಡಿದೆ. ಸದಾಕಾಲ ಸ್ವಪಕ್ಷದ ಸಚಿವರು, ಶಾಸಕರ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸುರ್ಜೇವಾಲ ಅವರ ನಡೆಯನ್ನು ಟೀಕಿಸಿದ್ದಾರೆ.
ಪಕ್ಷದ ಉಸ್ತುವಾರಿ ನಾಯಕರಾದ ಸುರ್ಜೇವಾಲ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರ ಜೊತೆ ಸಭೆ ನಡೆಸುವ ಎಲ್ಲಾ ಅಧಿಕಾರವನ್ನು ಹೊಂದಿದ್ದಾರೆ. ಆದರೆ ಅಧಿಕಾರಿಗಳ ಜೊತೆ ಸಭೆ ನಡೆಸಿದರೆ ಅದು ಸಂವಿಧಾನ ವಿರೋಧಿ ನಡವಳಿಕೆ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸುರ್ಜೇವಾಲ ಅವರ ನಡವಳಿಕೆಗೆ ಪಕ್ಷದ ಬಹಳಷ್ಟು ಮಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇಲಾಖಾವಾರು ಮಾಹಿತಿ ಕಲೆ ಹಾಕುವ ಮೂಲಕ ಸುರ್ಜೇವಾಲ ಸೂಪರ್ ಸಿಎಂ ಅಂತೆ ವರ್ತಿಸುತ್ತಿದ್ದಾರೆ ಹಾಗೂ ಹೈಕಮಾಂಡ್‌ಗೆ ಸಚಿವರ ಮೇಲೆ ನಂಬಿಕೆ ಇಲ್ಲ ಎಂಬ ಸಂದೇಶ ರವಾನೆ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಶಾಸಕರು, ಸಚಿವರು ಕಿಡಿಕಾರುತ್ತಿದ್ದಾರೆ.
ಜೆಡಿಎಸ್ ಕಿಡಿ :
ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳೊಂದಿಗೆ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅವರಿಗೆ ಸಭೆ ನಡೆಸುವ ಅಧಿಕಾರ ಕೊಟ್ಟವರು ಯಾರು? ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಅಧಿಕಾರಿಗಳ ಜೊತೆ ಸುರ್ಜೇವಾಲ ಸಭೆ ನಡೆಸುವುದು ಸಂವಿಧಾನ ವಿರೋಧಿ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.ವಸೂಲಿವಾಲಾ ಸುರ್ಜೇವಾಲ ಅವರು ಕೇವಲ ರಾಜ್ಯ ಉಸ್ತುವಾರಿಯೋ? ಕರ್ನಾಟಕದ ಮುಖ್ಯಮಂತ್ರಿಯೋ? ಇಷ್ಟು ದಿನ ಕಾಂಗ್ರೆಸ್ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸುತ್ತಿದ್ದ ರಣದೀಪ್ ಸುರ್ಜೇವಾಲ, ಈಗ ಸೂಪರ್ ಸಿಎಂ ರೀತಿ
ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದೆ.
ರಾಜ್ಯ ಆಡಳಿತರೂಢ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಣಗಳ ನಡುವೆ ಅಧಿಕಾರಕ್ಕಾಗಿ ಅಂತರ್ಯುದ್ಧ ನಡೆಯುತ್ತಿದೆ. ಹೀಗಾಗಿ ಹೈಕಮಾಂಡ್ ಸದ್ದಿಲ್ಲದೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರನ್ನೇ ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿರುವ ಶಂಕೆಯೂ ವ್ಯಕ್ತವಾಗುತ್ತಿದೆ ಎಂದು ಟೀಕಿಸಿದೆ.
ಹೈಕಮಾಂಡ್ ಗುಲಾಮಗಿರಿಯಲ್ಲಿ ತೊಡಗಿರುವ ಡಮ್ಮಿ ಸಿಎಂ ಹಾಗೂ ಡಮ್ಮಿ ಡಿಸಿಎಂ ಕರ್ನಾಟಕದ ಸ್ವಾಭಿಮಾನವನ್ನು ಅಡವಿಟ್ಟಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟಿರುವ ಜನಾದೇಶಕ್ಕೆ ಅಪಮಾನ, ವಿದ್ರೋಹ ಎಸಗುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
- ಸುರಂಗ ಮಾರ್ಗಕ್ಕೆ ಗಡ್ಕರಿ ಅನುಮತಿ ನೀಡಿದ್ದಾರೆಂಬುದು ಕೇವಲ ವದಂತಿ : ತೇಜಸ್ವಿ ಸೂರ್ಯ
- ಲಾಲ್ಬಾಗ್ನಲ್ಲಿ ಗುಂಡಿ ತೋಡುವ ಕೆಲಸ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ : ಆರ್.ಅಶೋಕ್
- ಸುರಂಗ ರಸ್ತೆ ವಿರೋಧಿಸಿ ಬಿಜೆಪಿ ಪ್ರತಿಭಟನೆಗೆ ಡಿಕೆಶಿ ತಿರುಗೇಟು
- ರಾಜ್ಯದಲ್ಲಿ ನವೆಂಬರ್ ರಾಜಕೀಯ ಕ್ರಾಂತಿ, ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ದೌಡು
- 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಸಸೂತ್ರವಾಗಿ ನಡೆದ ಕೆ-ಸೆಟ್ ಪರೀಕ್ಷೆ
