ಬೆಂಗಳೂರು, ಸೆ.26- ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ತಪ್ಪದೇ ಪಾಲಿಸುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯವನ್ನು ನಾವು ಗೌರವಿಸುತ್ತೇವೆ. ಅಲ್ಲಿನ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ ಎಂದರು.ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡುವಂತೆ ಯಾರನ್ನೂ ಬಲವಂತ ಮಾಡಬಾರದೆಂದು ನ್ಯಾಯಾಲಯ ಆದೇಶಿಸಿದೆ.
ನಾವು ಮೊದಲಿನಿಂದಲೂ ಇದನ್ನೇ ಹೇಳುತ್ತಿದ್ದೇವೆ. ಇಚ್ಛೆ ಇರುವವರು ಮಾಹಿತಿ ನೀಡಬಹುದು, ನೀಡದೇ ಇದ್ದರೆ ಬಲವಂತ ಪಡಿಸುವುದಿಲ್ಲ. ಹೀಗೆ ಬರೆಸಬೇಕೆಂದು ನಾವು ಯಾರ ಮೇಲೂ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು. ಸಮೀಕ್ಷೆಯಲ್ಲಿ ಎಲ್ಲಾ ಶಿಕ್ಷಕರೂ ಭಾಗವಹಿಸುತ್ತಿದ್ದಾರೆ. ಭಾಗವಹಿಸದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.