Saturday, October 4, 2025
Homeರಾಜಕೀಯ | Politicsಡಿಸಿಎಂ ಮನೆಯಿಂದಲೇ ಬೆಂಗಳೂರಲ್ಲಿ ಸಮೀಕ್ಷೆ ಶುರು, ಸಿಡಿಮಿಡಿಗೊಂಡು ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆಶಿ..!

ಡಿಸಿಎಂ ಮನೆಯಿಂದಲೇ ಬೆಂಗಳೂರಲ್ಲಿ ಸಮೀಕ್ಷೆ ಶುರು, ಸಿಡಿಮಿಡಿಗೊಂಡು ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆಶಿ..!

Survey begins in Bengaluru from DCM's home

ಬೆಂಗಳೂರು, ಅ.3- ಒಂಬತ್ತು ದಿನಗಳ ವಿಳಂಬವಾಗಿ ಗ್ರೆಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಇಂದಿನಿಂದ ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.

ಸದಾಶಿವನಗರದಲ್ಲಿನ ತಮ ನಿವಾಸಕ್ಕೆ ಆಗಮಿಸಿದ್ದ ಸಮೀಕ್ಷಾದಾರರಿಗೆ ತಮ ಹಾಗೂ ಕುಟುಂಬದ ಮಾಹಿತಿ ನೀಡುವ ಮೂಲಕ ಡಿ.ಕೆ.ಶಿವಕುಮಾರ್‌ ಸಮೀಕ್ಷೆಗೆ ಚಾಲನೆ ನೀಡಿದರು. ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿ ಭರ್ತಿ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸರ್ವರ್‌ ತೊಡಕು ಕಂಡು ಬಂತು.

ಇದರಿಂದ ಸಿಡಿಮಿಡಿಯಾದ ಡಿ.ಕೆ.ಶಿವಕುಮಾರ್‌ ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನನ್ನೊಬ್ಬನ ಮಾಹಿತಿ ಪಡೆಯಲು ಇಷ್ಟು ಸಮಯವಾದರೆ ಉಳಿದಂತೆ ಜನಸಾಮಾನ್ಯರ ಗತಿಯೆನು ಎಂದು ಪ್ರಶ್ನಿಸಿದರು. ಸಮಸ್ಯೆ ಸರಿ ಪಡಿಸಿ, ತೊಂದರೆಯಾಗದೆ ಸಮೀಕ್ಷೆ ಸುಲಲಿತವಾಗಿ ನಡೆಯಲು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು. ಪಾಲಿಕೆ ಆಯುಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾಹಿತಿ ನೀಡದಿದ್ದವರಿಗಾಗಿ ಘೋಷಣಾ ಪತ್ರ:
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾಹಿತಿ ನೀಡಲು ಇಷ್ಟವಿಲ್ಲದವರು ಪ್ರತ್ಯೇಕವಾದ ನಮೂನೆಗೆ ಸಹಿ ಹಾಕಿ ಸಮೀಕ್ಷೆಯಲ್ಲಿ ಭಾಗವಹಿಸಲು ಇಷ್ಟವಿಲ್ಲ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ವಿಶೇಷವಾದ ನಮೂನೆಯನ್ನು ಸಿದ್ಧ ಪಡಿಸಲಾಗಿದೆ.

ಪ್ರತಿವಾರ್ಡ್‌ನಲ್ಲೂ ಮಸ್ಟರಿಂಗ್‌ ಸೆಂಟರ್‌ ಗಳನ್ನು ಆರಂಭಿಸಲಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ಸಮೀಕ್ಷಾದಾರರು ಈ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಎಲ್ಲರಿಗೂ ಗುರುತಿನ ಕಾರ್ಡ್‌ ವಿತರಣೆ, ಹಾಜರಾತಿ ಪಡೆಯಲಾಗಿದೆ. ಅಲ್ಲಿ ಆ್ಯಪ್‌ಗಳನ್ನು ಮೊಬೈಲ್‌ಗೆ ಡೌನ್‌ ಲೋಡ್‌ ಮಾಡಿಕೊಟ್ಟು, ಬ್ಯಾಗ್‌, ಟೋಪಿ ಸೇರಿದಂತೆ ಅಗತ್ಯ ಸಲಕರಣೆಗಳನ್ನು ನೀಡಲಾಯಿತು. ನಂತರ ಕಂದಾಯ ಅಧಿಕಾರಿಗಳು ಸಮೀಕ್ಷಾದಾರರನ್ನು ನಿಗದಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಮೀಕ್ಷೆಗೆ ಚಾಲನೆ ನೀಡಲಾಯಿತು. ಉಸ್ತುವಾರಿ ಅಧಿಕಾರಿಗಳು ವಾರ್ಡ್‌ ಹಂತದಲ್ಲಿ ಲಭ್ಯವಿದ್ದು, ದೂರವಾಣಿ ಮೂಲಕ ಅಗತ್ಯ ಸೂಚನೆ ನೀಡುತ್ತಿದ್ದರು.

ಸಮೀಕ್ಷೆಗಾಗಿ 12 ಸಮೀಕ್ಷಾದಾರರಿಗೆ ಒಬ್ಬ ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ವಾರ್ಡ್‌ ಹಂತದಲ್ಲಿ ಚಾರ್ಜ್‌ ಆಫಿಸರ್‌ ಗಳನ್ನು, ವಿಧಾನಸಭಾಕ್ಷೇತ್ರಕ್ಕೆ ಕೆಎಸ್‌‍ಎಸ್‌‍ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ವಾರ್ಡ್‌ ಮಟ್ಟದಲ್ಲಿ ಪ್ರತಿಯೊಂದು ಮತಗಟ್ಟೆಯನ್ನು ಪ್ರತ್ಯೇಕವಾದ ಘಟಕವನ್ನಾಗಿ ಗುರುತಿಸಲಾಗಿದೆ. ಯಾವ ಮನೆಯನ್ನು ಬಿಟ್ಟು ಹೋಗದಂತೆ ಸಮೀಕ್ಷೆ ನಡೆಸುವ ಪ್ರಯತ್ನಗಳನ್ನು ನಡೆಸಲಾಗಿದೆ. ಸ್ಥಳೀಯವಾಗಿ ಪ್ರತಿಯೊಂದು ಮನೆಯ ಮಾಹಿತಿ ಇರುವ ಕಂದಾಯ ಅಧಿಕಾರಿಗಳು ಮತ್ತು ಬಿಲ್‌ ಕಲೆಕ್ಟರ್‌ಗಳು ಸಮೀಕ್ಷೆಯ ನಿಗಾವಹಿಸಲಿದ್ದಾರೆ. ತಾಜ್ಯ ನಿರ್ವಹಣೆ ಘಟಕದ ಸಿಬ್ಬಂದಿಗಳನ್ನು ಬಳಕೆ ಮಾಡಲಾಗುತ್ತಿದೆ.

ಪ್ರತಿಯೊಂದು ಪಾಲಿಕೆಗೂ ಜಿಬಿಎ ಕೇಂದ್ರ ಕಚೇರಿಯಿಂದ ಸಮೀಕ್ಷಾದಾರರನ್ನು ನಿಯೋಜನೆ ಮಾಡಲಾಗಿತ್ತು. ಇದರಿಂದ ಹಲವಾರು ಗೊಂದಲಗಳಾದವು.ವೈದ್ಯಕೀಯ ಸಿಬ್ಬಂದಿಯನ್ನು ಸಮೀಕ್ಷೆಗೆ ಬಳಸಿಕೊಳ್ಳುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಗಣತಿಯ ವೇಳೆ ಕುಟುಂಬದ ಮನೆ ಯಜಮಾನರಿಗೆ 40 ಪ್ರಶ್ನೆಗಳು, ಉಳಿದ ಸದಸ್ಯರಿಗೆ ತಲಾ 20 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿಯೊಂದು ಮನೆಯ ಗಣತಿಗೂ 20ರಿಂದ 30 ನಿಮಷಗಳ ಸಮಯ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ಉದ್ಯೋಗಗಳಿಗೆ ತೆರಳುವವರನ್ನು ಸಂಪರ್ಕಿಸಲು ಕಚೇರಿಯ ಸಮಯ ಹೊರತು ಪಡಿಸಿ ಬೆಳಗ್ಗೆ ಅಥವಾ ಸಂಜೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಮಾಹಿತಿ ನೀಡಲು ಮನೆಯಲ್ಲಿ ಯಾರು ಇಲ್ಲದಿದ್ದರೆ ಅಂತಹ ಮನೆಗೆ ಮತ್ತೊಂದು ಸ್ಟಿಕರ್‌ ಅಂಟಿಸಲಾಗುತ್ತಿದ್ದು, ಅದರಲ್ಲಿರುವ ದೂರವಾಣಿ ಸಂಖ್ಯೆ ಮನೆಯವರು ಕರೆ ಮಾಡಿ, ಯಾವ ಸಮಯಕ್ಕೆ ಲಭ್ಯ ಇರುತ್ತಾರೆ ಎಂದು ಮಾಹಿತಿ ನೀಡಬಹುದು. ಆ ಸಮಯಕ್ಕೆ ಬಂದು ಸಮೀಕ್ಷೆದಾರರು ಗಣತಿ ಮಾಡಲಿದ್ದಾರೆ.

ಅಪಾರ್ಟ್‌ಮೆಂಟ್‌, ಸ್ಲಂ ಸೇರಿ ಬೇರೆ ಬೇರೆ ಪ್ರದೇಶಕ್ಕೆ ಅನುಗುಣವಾಗಿ ಪ್ರತ್ಯೇಕ ಯೋಜನೆ ರೂಪಿಸಿ ಸಮೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಮೀಕ್ಷೆದಾರರಿಗೆ ಆ್ಯಪ್‌ ನಲ್ಲಿ ಬೇಕಾದ ವಾರ್ಡ್‌ ಆಯ್ಕೆ ಮಾಡಿಕೊಳ್ಳಲು ನಿನ್ನೆ ಅವಕಾಶ ನೀಡಲಾಗಿತ್ತು. ಆದರೆ ಬೆಳಗ್ಗೆ ಮಸ್ಟರಿಂಗ್‌ ಸೆಂಟರ್‌ಗೆ ಬಂದಾಗ ಬೇರೆಯ ಜಾಗಗಳನ್ನು ನಿಯೋಜಿಸಲಾಗಿತ್ತು. ಸಾಕಷ್ಟು ಗೊಂದಲಗಳು ಕಂಡು ಬಂದವು. ಸಮಸ್ಯೆ ಬಗೆಹರಿಯದ ಕಾರಣಕ್ಕೆ ಮನೆಗೆ ಹೋಗಿ ಮಧ್ಯಾಹ್ನದ ಬಳಿಕ ಬರುವಂತೆ ಕೆಲವರಿಗೆ ವಿನಾಯಿತಿ ನೀಡಲಾಗಿತ್ತು.

RELATED ARTICLES

Latest News