ಬೆಂಗಳೂರು, ಸೆ.30- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅ.4 ರಿಂದ ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ.ಈ ಹಿಂದೆ ಅ.3 ರಿಂದ ಸಮೀಕ್ಷೆ ಆರಂಭಿಸುವುದಾಗಿ ತಿಳಿಸಲಾಗಿತ್ತು. ಆದರೆ, ದಸರಾ ಹಬ್ಬದ ಅಂಗವಾಗಿ ಅ.4 ರಿಂದ ಸಮೀಕ್ಷೆ ನಡೆಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸಮೀಕ್ಷೆ ನಡೆಸುವ ಬಗ್ಗೆ ಈಗಾಗಲೇ ನಮ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದೇವೆ. ದಸರಾ ಇರುವ ಹಿನ್ನೆಲೆಯಲ್ಲಿ ಅ.3 ರಂದು ಇನ್ನು ಕೆಲವರಿಗೆ ತರಬೇತಿ ನೀಡಿ ಅ.4 ರಿಂದ ಸಮೀಕ್ಷೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಸರ್ಕಾರದ ನಿರ್ದೇಶನದಂತೆ ಬೇರೆ ಬೇರೆ ಇಲಾಖೆಗಳ ಸಹಕಾರ ಕೋರಿದ್ದೇವೆ. ಸಮೀಕ್ಷೆಯಲ್ಲಿ ಸುಮಾರು 17 ಸಾವಿರ ಸಿಬ್ಬಂದಿ ಭಾಗಿಯಾಗಲಿದ್ದಾರೆ..ಪ್ರತಿ ವಾರ್ಡ್ ಗೆ ತಲಾ 70 ರಿಂದ 80 ಸಿಬ್ಬಂದಿ ಬೇಕು..ಒಬ್ಬೊಬ್ಬ ಸಮೀಕ್ಷಕ ತಲಾ 750 ಮನೆ ಸಮೀಕ್ಷೆ ಮಾಡಬೇಕು ಎಂದು ಅವರು ತಿಳಿಸಿದರು.
ಆರೋಗ್ಯ ಸಮಸ್ಯೆ ಹಾಗೂ ವಿಕಲಚೇತನರ ಬಗ್ಗೆ ಸೂಕ್ತ ದಾಖಲೆ ನೀಡಿದರೆ ಅಂತವರಿಗೆ ಸಮೀಕ್ಷೆ ಕಾರ್ಯದಿಂದ ವಿನಾಯತಿ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಬೇರೆ ಬೇರೆ ಕಾರಣ ನೀಡಿ ಗೈರಾದರೆ ಕ್ರಮ ಕೈಗೊಳ್ಳುವ ಅಧಿಕಾರ ಆಯಾ ಸಮೀಕ್ಷಾ ತಂಡದ ಮುಖ್ಯಸ್ಥರಿಗೆ ನೀಡಲಾಗಿದೆ. ಸದ್ಯ 10 ರಿಂದ 15 ದಿನದೊಳಗೆ ಸಮೀಕ್ಷೆ ಮುಗಿಸೋಕೆ ಪ್ಲಾನ್ ಇದೆ.ಒಂದು ವೇಳೆ ಸಾಧ್ಯವಾಗದಿದ್ದರೆ ಹೆಚ್ಚುವರಿ ದಿನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.