Thursday, August 14, 2025
Homeರಾಜ್ಯಭೂಸ್ವಾಧೀನ ವೇಳೆ ಹಣ ಪಡೆದಿದ್ದರೆ ಸೂರ್ಯ ಮುಳುಗುವುದರೊಳಗೆ ಸಸ್ಪೆಂಡ್‌ : ಡಿಕೆಶಿ

ಭೂಸ್ವಾಧೀನ ವೇಳೆ ಹಣ ಪಡೆದಿದ್ದರೆ ಸೂರ್ಯ ಮುಳುಗುವುದರೊಳಗೆ ಸಸ್ಪೆಂಡ್‌ : ಡಿಕೆಶಿ

DK Shivakumar

ಬೆಂಗಳೂರು,ಆ.14– ಕೆಂಪೇಗೌಡ ಬಡಾವಣೆಯಲ್ಲಿ ರೈತರ ಜಮೀನು ಭೂಸ್ವಾಧೀನ ಪಡಿಸಿಕೊಳ್ಳುವ ವೇಳೆ ಯಾವುದೇ ಅಧಿಕಾರಿಗಳು ಹಣ ಪಡೆದಿದ್ದರೆ ಸಂಜೆ ಸೂರ್ಯ ಮುಳುಗುವುದರೊಳಗೆ ಅಂಥವರನ್ನು ನಿರ್ಧಾಕ್ಷಿಣ್ಯವಾಗಿ ಅಮಾನತ್ತುಪಡಿಸುತ್ತೇವೆ ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಸಿದ್ದಾರೆ.

ವಿಧಾನಪರಿಷತ್‌ನಲ್ಲಿಂದು ಸದಸ್ಯ ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದಸ್ಯರು ರೈತರ ಜಮೀನು ಭೂಸ್ವಾಧೀನ ವೇಳೆ ಕೆಲವರು ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಬಗ್ಗೆ ಅವರು ನಿರ್ಧಿಷ್ಟವಾಗಿ ದಾಖಲೆಗಳನ್ನು ಕೊಟ್ಟರೆ ಯಾವ ತನಿಖೆಯೂ ಬೇಡ. ಸಂಜೆ ಸೂರ್ಯ ಮುಳುಗುವುದರೊಳಗೆ ಅಂಥವರನ್ನು ಅಮಾನತು ಮಾಡುತ್ತೇನೆ ಎಂದು ಗುಡುಗಿದರು.

ಜಮೀನು ಕಳೆದುಕೊಂಡ ರೈತರ ಸಂಕಷ್ಟ ಏನೆಂಬುದು ನನಗೆ ಗೊತ್ತು. ಒಂದೇ ಒಂದು ಪೈಸಾವನ್ನೂ ರೈತರಿಂದ ಪಡೆಯಬಾರದೆಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಒಂದು ಎಕರೆಗೆ 9600 ಚದರ ಅಡಿ ಬರಬಹುದು. ಮಾರುಕಟ್ಟೆಯ ಮಾರ್ಗಸೂಚಿ ಬೆಲೆಯಂತೆ ಪರಿಹಾರ ನೀಡಲಾಗುತ್ತದೆ. ಯುಪಿಎ ಸರ್ಕಾರ ತಿದ್ದುಪಡಿ ಮಾಡಿದ್ದರಿಂದ 3ರಿಂದ 4ರಷ್ಟು ಪರಿಹಾರ ಸಿಗುತ್ತದೆ ಎಂದರು.

ಶಿವರಾಮ್‌ ಕಾರಂತ ಬಡಾವಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ನಾವು ಏನು ಮಾಡಲು ಆಗುತ್ತಿಲ್ಲ. ಸರ್ಕಾರ ಇಲ್ಲಿ ಏಳು ಸಾವಿರ ಕೋಟಿ ಬಂಡವಾಳ ಹೂಡಿದೆ. ನಮಗೆ ಪ್ರತಿ ವರ್ಷ ಒಂದು ಸಾವಿರ ಕೋಟಿ ನಷ್ಟವಾಗುತ್ತದೆ ಎಂದು ಹೇಳಿದರು.

ಅಡ್ವೋಕೇಟ್‌ ಜನರಲ್‌ ಅವರ ಬಳಿ ತಡೆಯಾಜ್ಞೆ ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ನ್ಯಾಯಾಲಯ ತಡೆಯಾಜ್ಞೆ ತೆರವು ಮಾಡಿದರೆ ಅಭಿವೃದ್ಧಿ ಚಟುವಟಿಕೆಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದರು.

RELATED ARTICLES

Latest News