ಬೆಂಗಳೂರು, ಏ.19- ಇತ್ತೀಚಿಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಕೊನೆಯ ದಿನದಂದು ಕಲಾಪದ ವೇಳೆ ಅನುಚಿತವಾಗಿ ವರ್ತನೆ ತೋರಿದ ಆರೋಪದ ಮೇಲೆ ವಿಧಾನಸಭೆಯಿಂದ ಆರು ತಿಂಗಳ ಕಾಲ ಶಾಸಕರನ್ನು ಅಮಾನತುಪಡಿಸಿರುವ ಆದೇಶವನ್ನು ವಿಧಾನಸಭಾಧ್ಯಕ್ಷರು ಹಿಂಪಡೆಯದಿದ್ದರೆ, ನ್ಯಾಯಾಲಯದ ಮೊರೆ ಹೋಗಲು ಬಿಜೆಪಿ ಪಕ್ಷ ತೀರ್ಮಾನಿಸಿದೆ.
ಈ ಹಿಂದೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ 12 ಶಾಸಕರ ಅಮಾನತು ರದ್ದುಗೊಳಿಸಿ ಅಲ್ಲಿನ ವಿಧಾನಸಭಾಧ್ಯಕ್ಷರು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ನ್ಯಾಯಾಲಯದ ಮೊರೆ ಹೋಗಿತ್ತು. ಎರಡು ಕಡೆ ವಾದ- ವಿವಾದ ಆಲಿಸಿದ್ದ ಬಾಂಬೆ ಹೈಕೋರ್ಟ್ 2021 ರ ತೀರ್ಪನ್ನು ಉಲ್ಲೇಖಿಸಿ ಅಮಾನತು ಆದೇಶವನ್ನು ರದ್ದುಪಡಿಸಿತ್ತು. ಇದೀಗ ರಾಜ್ಯದ ಬಿಜೆಪಿ ಶಾಸಕರು ಇದೇ ನ್ಯಾಯಾಂಗ ಮಾರ್ಗವನ್ನು ಹುಡುಕುತ್ತಿದ್ದಾರೆ. ಆದರೂ ಅವರು ಕೊನೆಯ ಕ್ಷಣದವರೆಗೆ ಸದನದೊಳಗೆ ಸಮಸ್ಯೆಯನ್ನು ಪರಿಹರಿಸುವ ಆಶಯ ಹೊಂದಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದ ಬಿಜೆಪಿ ನಿಯೋಗವು ಅಮಾನತು ರದ್ದತಿಗೆ ಮನವಿ ಸಲ್ಲಿಸಲು ಶುಕ್ರವಾರ ಸಭಾಧ್ಯಕ್ಷರನ್ನು ಭೇಟಿ ಮಾಡಬೇಕಿತ್ತು. ಆದಾಗ್ಯೂ, ಗುಡ್ ಫ್ರೈಡೇ ರಜೆಯ ಕಾರಣ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಸೋಮವಾರ ನಡೆಯಲಿರುವ ಸಭೆಯ ತೀರ್ಮಾನದ ಬಳಿಕ ಬಿಜೆಪಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ನ್ಯಾಯಾಲಯಕ್ಕೆ ಹೋಗುವುದು ಒಂದು ಆಯ್ಕೆಯಾಗಿದ್ದರೂ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷವನ್ನು ತಪ್ಪಿಸುವುದು ನಮ ಉದ್ದೇಶವಾಗಿರುವುದರಿಂದ ನಾವು ಸಂಯಮವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಆದರೆ, ಈಗ ಜವಾಬ್ದಾರಿ ಸಭಾಧ್ಯಕ್ಷರ ಮೇಲಿದೆ. ಸೋಮವಾರ ಅಮಾನತು ಆದೇಶವನ್ನು ಹಿಂಪಡೆಯಲು ಅವರು ಮುಂದಾಗದಿದ್ದರೆ, ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಏನಿದು ಪ್ರಕರಣ?
ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಸಭಾಧ್ಯಕ್ಷ ಯು.ಟಿ.ಖಾದರ್ ಆದೇಶ ಹೊರಡಿಸಿದ್ದರು.
ಸಚಿವ ಕೆ .ಎನ್. ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ ವಿಚಾರವಾಗಿ ಬಿಜೆಪಿಯಿಂದ ಸದನದಲ್ಲಿ ಗದ್ದಲ ಉಂಟಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಪೀಠದ ಬಳಿ ಹೋಗಿ ಬಿಜೆಪಿ ಶಾಸಕರು ಗದ್ದಲ ಉಂಟು ಮಾಡಿದ್ದರು. ಅಲ್ಲದೆ, ಕಾಗದ ಪತ್ರಗಳನ್ನು ಹರಿದು ಹಾಕಿ ಪೀಠಕ್ಕೆ ಎಸೆದಿದ್ದರು. ಬಳಿಕ ಸದನವನ್ನು ಮುಂದೂಡಲಾಗಿತ್ತು.
ಇದಾದ ಬೆನ್ನಲ್ಲೇ ಸಭಾಧ್ಯಕ್ಷರ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಸಭೆ ನಡೆಸಿದ್ದರು. ಸಭೆಯಲ್ಲಿ ಅಮಾನತು ನಿರ್ಧಾರ ಕೈಗೊಳ್ಳಲಾಗಿತ್ತು. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಸದನ ಮತ್ತೆ ಆರಂಭಗೊಂಡ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಸಭಾಧ್ಯಕ್ಷರು ಪೀಠಕ್ಕೆ ಅಗೌರವ ತೋರಿಸಿದರೆ ಸಹಿಸೋದಿಲ್ಲ. ಈ ನಿಟ್ಟಿನಲ್ಲಿ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗುವುದು ಎಂಬ ಆದೇಶ ಪ್ರಕಟಿಸಿದ್ದರು. ಅಮಾನತುಗೊಂಡ ಶಾಸಕರುಗಳನ್ನು ವಿಧಾನಸಭೆ ಮಾರ್ಷಲ್‌ಗಳು ಹೊರ ಹಾಕಿದ್ದರು.
ಆದೇಶ ಹಿಂಪಡೆಯಲು ಮನವಿ:
ಕರ್ನಾಟಕ ವಿಧಾನಸಭೆಯ 18 ಸದಸ್ಯರನ್ನು ಅಮಾನತು ಮಾಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಕೋರಿ ಸಭಾಧ್ಯಕ್ಷ ಯು.ಟಿ.ಖಾದರ್‌ಗೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದರು.
ರಾಜ್ಯದ ವಿಧಾನಮಂಡಲದ ಉಭಯ ಸದನಗಳು ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಳಗಳು, ಪ್ರಜಾಪ್ರಭುತ್ವದ ದೇಗುಲಗಳು ಎಂದು ಕರೆದರೆ ತಪ್ಪೇನೂ ಇಲ್ಲ. ಈ ದೇಗುಲಗಳಲ್ಲಿನ ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ಇರುವ ಸ್ಥಾನವೂ ಅಷ್ಟೇ ಗೌರವಾನ್ವಿತವಾದುದು. ಈ ವಿಚಾರದಲ್ಲಿ ನನಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಮಾರ್ಚ್ 21ರಂದು ನಡೆದ ಘಟನೆ ಉದ್ದೇಶಪೂರ್ವಕವಾದುದಲ್ಲ.
ಅಥವಾ ನಿಮ ಪೀಠಕ್ಕೆ ಅಗೌರವ ತರುವ ಉದ್ದೇಶವೂ ಯಾವ ಶಾಸಕರಿಗೂ ಇರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ತಾವು ಸದನದ ಕಲಾಪ ನಿರ್ವಹಿಸುವುದನ್ನು ನಾವು ಅತ್ಯಂತ ಹತ್ತಿರದಿಂದ ನೋಡಿದ್ದೇವೆ. ಸಂಸದೀಯ ಚರ್ಚೆಯ ಗುಣಮಟ್ಟ ಭಾಷೆಯ ಬಳಕೆ, ಕಲಾಪಗಳಲ್ಲಿನ ನಿಯಮಗಳ ಪಾಲನೆ ಇತ್ಯಾದಿಗಳೆಲ್ಲವೂ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ದಿನಗಳಲ್ಲಿ, ಯಾರಿಗೇ ಆಗಲೀ ಇದು ಅತ್ಯಂತ ಕಷ್ಟದ ಕೆಲಸ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ನಿಮ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಹೇಳಿದ್ದರು.
ಅಮಾನತು ಆದೇಶವನ್ನು ಮತ್ತೊಮೆ ಪರಿಶೀಲಿಸಲು ಕೋರುತ್ತಾ, ಸದರಿ ಅದೇಶವನ್ನು ಹಿಂಪಡೆಯಿರಿ. ನಮ ಪ್ರತಿಭಟನೆ ನಿಮ ವಿರುದ್ಧ ಇರಲಿಲ್ಲ ಎಂಬುದನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತೊಮೆ ಗಮನಕ್ಕೆ ತರಲು ಬಯಸುತ್ತೇನೆ. ಈ ಪತ್ರದ ಆರಂಭದಲ್ಲಿ ತಿಳಿಸಿದಂತೆ ಸದನ ದೊಡ್ಡದು. ಸಭಾಧ್ಯಕ್ಷರು ದೊಡ್ಡವರು ಎಂಬ ಪ್ರಜಾಪ್ರಭುತ್ವದ ಮೂಲಭೂತ ಆಶಯಕ್ಕೆ ಅನುಗುಣವಾಗಿ ಹಾಗೂ ನಾವೆಲ್ಲರೂ ಸೇರಿಕೊಂಡು ಈ ಸಂಸ್ಥೆಯ ಘನತೆ ಹಾಗೂ ಗೌರವವನ್ನು ಉಳಿಸಬೇಕಾಗಿದೆ ಎಂಬ ತತ್ವದಲ್ಲಿ ನಂಬಿಕೆ ಇರಿಸಿ ಅಮಾನತು ಆದೇಶವನ್ನು ಮತ್ತೊಮೆ ಮರು ಪರಿಶೀಲಿಸಲು ಕೋರುತ್ತಾ, ಸದರಿ ಆದೇಶವನ್ನು ಹಿಂಪಡೆಯಬೇಕಾಗಿ ತಮನ್ನು ಕೋರುತ್ತೇನೆ ಎಂದು ಆರ್.ಅಶೋಕ್ ಮನವಿ ಮಾಡಿದ್ದರು.
ಯಾರೆಲ್ಲಾ ಅಮಾನತು: ದೊಡ್ಡಣ್ಣ ಗೌಡ ಪಾಟೀಲ್, ಸಿ.ಕೆ.ರಾಮಮೂರ್ತಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ. ಎಸ್. ಆರ್. ವಿಶ್ವನಾಥ್, ಬೈರತಿ ಬಸವರಾಜ, ಎಂ.ಆರ್.ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಉಮಾನಾಥ್ ಕೋಟ್ಯಾನ್, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಯಶಪಾಲ್ ಸುವರ್ಣ, ಹರೀಶ್ ಬಿ.ಪಿ., ಡಾ. ಭರತ್ ಶೆಟ್ಟಿ, ಮುನಿರತ್ನ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಡಾ.ಚಂದ್ರು ಲಮಾಣಿ.