ಬೆಂಗಳೂರು,ನ.29- ಕಾಂಗ್ರೆಸ್ ಪಕ್ಷ ಹಾಗೂ ಶೋಷಿತ ಸಮುದಾಯಗಳ ಸಂಯುಕ್ತಾಶ್ರಯದಲ್ಲಿ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಯಲಿದೆ ಎಂದು ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಸನ ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ನಡೆಸುವಂತೆ ಕೇಳಿಬರುತ್ತಿರುವ ಒತ್ತಾಯಗಳಿಗೆ ಪ್ರತಿಕ್ರಿಯಿಸಿದರು.ಇಂತಹ ಯಾವ ವಿಚಾರಗಳೂ ಚರ್ಚೆಯೂ ಇಲ್ಲ, ವಿವಾದವೂ ಇಲ್ಲ. ಡಿ.5 ರಂದು ಹಾಸನದಲ್ಲಿ ಸಮಾವೇಶ ನಡೆಸಬೇಕು ಎಂದು ಶೋಷಿತ ಸಮುದಾಯ ನಿರ್ಧರಿಸಿತ್ತು.
ಪಕ್ಷದ ಎಲ್ಲರನ್ನೂ ಆಹ್ವಾನಿಸಲಾಗಿದೆ. ಹೀಗಾಗಿ ಪಕ್ಷ ಮತ್ತು ಸಂಘಟನೆಗಳು ಒಟ್ಟಾಗಿ ಸಮಾವೇಶ ನಡೆಸಬೇಕು ಎಂಬುದು ತಮ ಹಾಗೂ ಸಿದ್ದರಾಮಯ್ಯ ಅವರ ಅಭಿಪ್ರಾಯವಾಗಿದೆ ಎಂದರು.
ಈ ಕಾರಣಕ್ಕೆ ಪಕ್ಷ ಹಾಗೂ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿಯೇ ಸಮಾವೇಶ ನಡೆಯಲಿದೆ. ಇದರಲ್ಲಿ ಯಾವುದೇ ತಕರಾರಿಲ್ಲ ಎಂದು ಪುನರುಚ್ಚರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ವರ್ಷ ಅಧಿಕಾರದಲ್ಲಿರುತ್ತಾರೋ, ಇಲ್ಲವೋ ಎಂಬುದು ಶಾಸಕ ಬಿ.ಆರ್.ಪಾಟೀಲ್ ನೀಡಿರುವ ಹೇಳಿಕೆ ಬಗ್ಗೆ ತಾವು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.