ಬೆಂಗಳೂರು,ನ.11- ಮಕ್ಕಳ ಕೈಗೆ ಪೆನ್ನಿನ ಬದಲು ತಲ್ವಾರ್ ನೀಡಿ ಎಂದು ಸ್ವಾಮೀಜಿಯೊಬ್ಬರು ಹೇಳಿರುವುದು ಸರಿಯಲ್ಲ. ಇದರ ವಿರುದ್ಧ ಯಾವ ಸೆಕ್ಷನ್‌ಗಳಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂಬುದನ್ನು ಪರಿಶೀಲನೆ ನಡೆಸುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಧಾರ್ಮಿಕ ಗುರುಗಳು ಧರ್ಮವನ್ನು ಪ್ರಚಾರ ಮಾಡಬೇಕು. ಎಲ್ಲರೂ ಧಾರ್ಮಿಕ ನಾಯಕರಿಗೆ ಗೌರವ ಕೊಟ್ಟು ಕಾಲಿಗೆ ಬೀಳುತ್ತೇವೆ. ಪೂಜ್ಯನೀಯ ಸ್ಥಾನದಿಂದ ನೋಡುತ್ತೇವೆ. ಅವರು ಎಲ್ಲರನ್ನೂ ಸಮಾನವಾಗಿ ನೋಡಬೇಕು. ಅಂತಹವರು ಪ್ರಚೋದನೆಯ ಮಾತುಗಳನ್ನಾಡುವುದು ಸೂಕ್ತವಲ್ಲ ಎಂದರು.
ಕಾವಿ ಬಟ್ಟೆ ಹಾಕಿದವರು, ಮುಸ್ಲಿಂ ಸೇರಿದಂತೆ ಯಾವುದೇ ಧರ್ಮದ ಮುಖಂಡರಾದರೂ ನಿಷ್ಪಕ್ಷಪಾತವಾಗಿರಬೇಕು. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು.ಕೋವಿಡ್ ಹಗರಣದಲ್ಲಿ ನಾವು ಯಾವುದೇ ರೀತಿಯ ಆಯ್ಕೆ ರಾಜಕಾರಣ ಮಾಡುತ್ತಿಲ್ಲ. 2023 ರ ಚುನಾವಣೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪ ಮಾಡಿದ್ದೆವು.
ಅದರ ತನಿಖೆ ನಡೆಸುವುದಾಗಿಯೂ ತಿಳಿಸಿದ್ದೆವು. ಅದರಂತೆ ಜಸ್ಟೀಸ್ ಮೈಕುಲ್ ಕುನ್ನಾ ಸಮಿತಿ ರಚಿಸಲಾಗಿದ್ದು, ಮಧ್ಯಂತರ ವರದಿ ಬಂದಿದೆ. ಪಿಪಿಇ ಕಿಟ್ ಖರೀದಿಯಲ್ಲಿ ಸರ್ಕಾರಕ್ಕೆ 14 ಕೋಟಿ ರೂ. ನಷ್ಟವಾಗಿದೆ ಎಂಬ ವರದಿಯಿದೆ. ಇದರ ಅಧ್ಯಯನಕ್ಕೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪಚುನಾವಣೆ ಬಳಿಕ ಸಭೆ ನಡೆಸಿ ವರದಿ ನೀಡಲಾಗುವುದು. ಅನಂತರ ಆ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ನ್ಯಾಯಮೂರ್ತಿ ಮೈಕಲ್ ಕುನ್ನಾ ಅವರ ಸಮಗ್ರತೆಯ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ಪ್ರಹ್ಲಾದ್ ಜೋಶಿಯವರಿಗೆ ಇದೆಯೋ, ಇಲ್ಲವೋ ನಮಗೆ ಗೊತ್ತಿಲ್ಲ. ಮೈಕಲ್ ಕುನ್ನಾ ನ್ಯಾಯಮೂರ್ತಿಗಳಾಗಿ ಉತ್ತಮ ಅನುಭವಿ. ಅವರನ್ನು ಅನುಮಾನಿಸುವುದು ಸರಿಯಲ್ಲ. ಬಿಜೆಪಿಯವರು ತಪ್ಪು ಮಾಡದೇ ಇದ್ದರೆ ಹೆದರುವ ಅಗತ್ಯ ಏನಿದೆ? ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿರುವವರೆಗೂ ಮಾತ್ರ ಮುಸ್ಲಿಮರಿಗೆ ಶ್ರೇಯಸ್ಸು ಎಂದು ಇಕ್ಬಾಲ್ ಅನ್ಸಾರಿ ಯಾವ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಇಂತಹ ವಿಚಾರಗಳಿಗೆಲ್ಲಾ ಸರ್ಕಾರ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.
ವಕ್‌್ಫ ವಿಚಾರವಾಗಿ ಬಿಜೆಪಿ ರಾಜಕಾರಣ ಮಾಡುತ್ತಲೇ ಇದೆ. ಸ್ವಾತಂತ್ರ್ಯ ಭಾರತದಲ್ಲಿ ಎಲ್ಲರೂ ಸಮಾನರು. ಸಮಾಜದಲ್ಲಿ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳೂ ಹಿಂದುಳಿದಿವೆ. ಅವರನ್ನು ಮುನ್ನೆಲೆಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ತುಷ್ಠೀಕರಣ ಎಲ್ಲಿದೆ?, ಕಾಂಗ್ರೆಸ್ ಸರ್ಕಾರ ಎಲ್ಲರನ್ನೂ ಏಕರೀತಿಯಲ್ಲಿ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಮಂಡ್ಯದ ಅನಕೆರೆಯ ದೇವಸ್ಥಾನದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಿಸಲು ನಿರಾಕರಿಸಿದ ಪ್ರಕರಣ ನಾಚಿಕೆಗೇಡು. ಇದು ಒಂದು ದೇವಸ್ಥಾನದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಬಹಳಷ್ಟು ದೇವಸ್ಥಾನಗಳಲ್ಲಿ ಈ ರೀತಿ ಇದೆ. ಸಮಾಜ ಅರ್ಥ ಮಾಡಿಕೊಳ್ಳಬೇಕು. ದೇವರನ್ನು ವಿಂಗಡಣೆ ಮಾಡುವುದು ಸರಿಯಲ್ಲ ಎಂದರು.
ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರ ನೇತೃತ್ವದ ಸರ್ಕಾರ ಅತ್ಯಂತ ಭ್ರಷ್ಟವಾಗಿದ್ದು, ಅಲ್ಲಿ ಭ್ರಷ್ಟಾಚಾರದ ಮೇಲೆಯೇ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಯಾವ ರೀತಿ ಸ್ಪಷ್ಟನೆಯನ್ನೂ ನೀಡುತ್ತಿಲ್ಲ. ಬದಲಾಗಿ ಕರ್ನಾಟಕ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಯಾರೋ ಬಿಜೆಪಿಯ ಕೆಳ ಹಂತದ ನಾಯಕರು 700 ಕೋಟಿ ರೂ.ಗೆ ಆರೋಪ ಮಾಡಿದ್ದರೆ ನಿರ್ಲಕ್ಷಿಸಬಹುದಿತ್ತು. ಆದರೆ ಪ್ರಧಾನಿಯಂತಹ ಹುದ್ದೆಯಲ್ಲಿರುವವರು ಆಧಾರರಹಿತವಾಗಿ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮೈತ್ರಿಕೂಟ ಒಟ್ಟಾಗಿ ಚುನಾವಣೆ ನಡೆಸುತ್ತಿದೆ. ನಾವು ಜಯ ಗಳಿಸುತ್ತೇವೆ ಎಂದರು.ಕರ್ನಾಟಕದ ವಿಧಾನಸಭೆ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಬಹಿರಂಗ ಪ್ರಚಾರ ಇಂದು ಅಂತ್ಯಗೊಳ್ಳುತ್ತಿದೆ. ಇನ್ನು ಮುಂದಾದರೂ ರಾಜಕೀಯ ಟೀಕೆ ಟಿಪ್ಪಣಿಗಳು ನಿಲ್ಲಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಕಣದಲ್ಲಿ ಕೇಳಿಬಂದ ಆರೋಪ-ಪ್ರತ್ಯಾರೋಪಗಳನ್ನು ಮತದಾರರು ಗಮನಿಸಿದ್ದಾರೆ. ಸೂಕ್ತ ತೀರ್ಮಾನ ನೀಡುತ್ತಾರೆ. ಮೂರೂ ಕಡೆ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು. ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಳ್ಳುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿರುವುದರ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಹಿರಿಯ ರಾಜಕಾರಣಿಯವರಿಗೆ ಬಹುಶಃ ಮಾಹಿತಿ ಕೊರತೆಯಿದೆ ಎಂದು ಹೇಳಿದರು.