ಬೆಂಗಳೂರು, ಮೇ 8- ಹಾಸನದ ಪೆನ್‌ಡ್ರೈವ್ ಪ್ರಕರಣ ಮಾಸುವ ಮುನ್ನವೇ ಮತ್ತಷ್ಟು ಸಿಡಿಗಳು ಬಹಿರಂಗಗೊಳ್ಳುವ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ವಿಡಿಯೋ ಪಾತ್ರದಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ರಾಜ್ಯದಲ್ಲಿ ಹಲವಾರು ರಾಜಕಾರಣಿಗಳ ವಿವಾಹೇತರ ಸಂಬಂಧಗಳ ಕುರಿತು ಸಂದರ್ಭನುಸಾರ ವಿಡಿಯೋಗಳು ಬಹಿರಂಗಗೊಂಡಿವೆ, ಚರ್ಚೆಗೆ ಗ್ರಾಸವಾಗಿವೆ.
ಹಗರಣಕ್ಕೆ ಸಿಲುಕಿದವರ ಪೈಕಿ ಕೆಲವರು ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಬೆಳಗಾವಿಯ ಗೋಕಾಕ್ ಕ್ಷೇತ್ರದ ಶಾಸಕ ಹಾಗೂ ಆಗಿನ ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಬಹಿರಂಗ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಎಫ್‌ಐಆರ್ ದಾಖಲಾಗಿತ್ತು. ಆಗಿನ ವಿಪಕ್ಷ ಕಾಂಗ್ರೆಸ್ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು ಎಂದು ಭಾರೀ ಪ್ರತಿಭಟನೆಯನ್ನು ನಡೆಸಿತ್ತು. ಕೊನೆಗೆ ಆ ಪ್ರಕರಣ ಕಾಂಗ್ರೆಸ್ ನಾಯಕರ ನಿರೀಕ್ಷಿತ ರೀತಿಯಲ್ಲಿ ಇತ್ಯರ್ಥ ಕಾಣದೆ ನೇಪಥ್ಯಕ್ಕೆ ಸರಿದು ಹೋಯಿತು.
ರಮೇಶ್ ಜಾರಕಿಹೊಳಿ ವಿಡಿಯೋ ಬಹಿರಂಗವಾದ ಬೆನ್ನಲ್ಲೆ ಆಗಿನ ಸಂಪುಟದ ಸಚಿವರಾಗಿದ್ದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ, ಬೈರತಿ ಬಸವರಾಜು ಅವರು ತಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವಿಡಿಯೋ, ಆಡಿಯೋ, ಫೋಟೋಗಳನ್ನು ಬಹಿರಂಗ ಪಡಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. 6ಕ್ಕೂ ಹೆಚ್ಚು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಹಾಗೂ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಸಚಿವರು ತಡೆಯಾಜ್ಞೆ ತಂದಿದ್ದನ್ನು ಅನುಮಾನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪದಲ್ಲಿ ಮೂರು ದಿನ ಗದ್ದಲ ಎಬ್ಬಿಸಿದ್ದವು.
ನಾವೇನು ತಪ್ಪು ಮಾಡಿಲ್ಲ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ನಕಲಿ ವಿಡಿಯೋಗಳನ್ನು ತಯಾರಿಸಿ, ಹರಿಯ ಬಿಟ್ಟು ನಾವು ಇಷ್ಟು ದಿನ ಗಳಿಸಿದ ರಾಜಕೀಯ ವರ್ಚಸ್ಸನ್ನು ಹಾಳು ಮಾಡಲಾಗುತ್ತದೆ. ಆ ಕಾರಣಕ್ಕಾಗಿ ನಾವು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ ಎಂಬ ಸಮರ್ಥನೆಯನ್ನು ಆ ವೇಳೆ ಸಚಿವರು ನೀಡಿದ್ದರು.
ಅದೇ ಚರ್ಚೆಯ ವೇಳೆ ಕಾಂಗ್ರೆಸ್-ಜೆಡಿಎಸ್‌ನಿಂದ ವಲಸೆ ಹೋಗಿದ್ದ 17 ಮಂದಿ ಶಾಸಕರ ಪೈಕಿ ಕೆಲವರನ್ನು ಬಾಂಬೆ ಬಾಯ್‌್ಸ ಎಂದು ಗುರುತಿಸಿ ಲೇವಡಿ ಮಾಡಲಾಗುತ್ತಿದೆ. ತಡೆಯಾಜ್ಞೆ ತಂದಿದ್ದವರ ಪೈಕಿ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಪ್ರಸ್ತುತ ಬಿಜೆಪಿಯಲ್ಲಿ ಅಸಮಧಾನಿತ ಶಾಸಕರಾಗಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ. ಬಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ, ಡಾ.ಕೆ.ಸುಧಾಕರ್ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಅವರ ಪೈಕಿ ಡಾ.ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಬೈರತಿ ಬಸವರಾಜ್ ಕೆ.ಆರ್.ಪುರಂ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದಾರೆ.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಮತ್ತು ಫೋಟೋಗಳು ಬಹಿರಂಗಗೊಂಡ ಬೆನ್ನಲ್ಲೆ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಕಾಂಗ್ರೆಸ್ ವಿಡಿಯೋಗಳನ್ನು ಆಧಾರವಾಗಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಲಾಗುತ್ತಿದೆ. ಇದು ಒಂದಿಷ್ಟು ಹಾನಿಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ವಿಡಿಯೋಗಳನ್ನು ಬಹಿರಂಗ ಮಾಡಿ ತಿರುಗೇಟು ನೀಡಲು ತಯಾರಿಗಳಾಗಿವೆ ಎಂಬ ಚರ್ಚೆಗಳಿವೆ.
ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ನೇರವಾಗಿ ಅಕಾಡಕ್ಕೆ ಬರದೆ, ಡಾರ್ಕ್‌ನೆಟ್ ಬಳಸಿಕೊಂಡು ಅಂತರ್ಜಾಲದಲ್ಲಿ ವಿಡಿಯೋಗಳನ್ನು ಹರಿಯ ಬಿಟ್ಟು ಮುಜುಗರ ಉಂಟು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಸನದ ಪ್ರಕರಣದಲ್ಲಿ ದಿನಕ್ಕೊಂದು ವಿಡಿಯೋಗಳನ್ನು ಬಹಿರಂಗ ಪಡಿಸಿ ರಾಜಕೀಯವಾಗಿ ಭಾರೀ ಚರ್ಚೆ ಹುಟ್ಟು ಹಾಕಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಇದು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡಿದೆ. ರಾಜಕೀಯ ಕಾರಣಕ್ಕೆ ಮತ್ತಷ್ಟು ವಿಡಿಯೋಗಳನ್ನು ಹೊರ ಹಾಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇತ್ತ ಹಾಸನ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಇನ್ನಷ್ಟು ಆಘಾತಕಾರಿ ವಿಡಿಯೋಗಳನ್ನು ಹೊರ ಹಾಕುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.