ಡಮಾಸ್ಕಸ್, ಡಿ.10- ಸಿರಿಯಾ ವಶಪಡಿಸಿಕೊಂಡಿರುವ ಬಂಡುಕೋರರು ಮಹಿಳೆಯರ ಡ್ರೆಸ್ ನಿರ್ಬಂಧವನ್ನು ತೆರವುಗೊಳಿಸುವ ಮಹತ್ವದ ಘೋಷಣೆ ಮಾಡಿದ್ದಾರೆ.ಸಿರಿಯಾದ ಅಧ್ಯಕ್ಷ ಬಶರ್ ಅಸ್ಸಾದ್ ದೇಶ ತೊರೆಯುತ್ತಿದ್ದಂತೆ ಮಧ್ಯಂತರ ಸರ್ಕಾರ ರಚನೆಗೆ ಮುಂದಾಗಿರುವ ಸಿರಿಯನ್ ಬಂಡುಕೋರರು ಇದೀಗ ಮಹಿಳೆಯರ ಡ್ರೆಸ್ಕೋಡ್ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಮಹಿಳೆಯರಿಗೆ ಯಾವುದೇ ಧಾರ್ಮಿಕ ಡ್ರೆಸ್ಕೋಡ್ ವಿಧಿಸುವುದಿಲ್ಲ, ಎಲ್ಲರಿಗೂ ವೈಯಕ್ತಿಕ ಸ್ವಾತಂತ್ರ್ಯವಿರುತ್ತದೆ ಎಂದು ಹೇಳಿದ್ದಾರೆ.
ಮಹಿಳೆಯರ ಉಡುಪಿನ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ, ಅವರ ಉಡುಪು ಅಥವಾ ನೋಟಕ್ಕೆ ಸಂಬಂಧಿಸಿದಂತೆ ಯಾವುದೇ ಹೇರಿಕೆ ಇಲ್ಲ ಎಂದು ಬಂಡುಕೋರರು ಸ್ಪಷ್ಟಪಡಿಸಿದ್ದಾರೆ. ಜನರ ಹಕ್ಕುಗಳಿಗೆ ಗೌರವ ಕೊಟ್ಟಾಗ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ, ಎಲ್ಲಾ ಸಿರಿಯನ್ನರಿಗೆ ವೈಯಕ್ತಿಕ ಸ್ವಾತಂತ್ರ್ಯವನ್ನು ನೀಡಲಾಗುತ್ತಿದೆ ಎಂದು ಘೋಷಿಸಿದ್ದಾರೆ.
ಅರ್ಧ ಶತಮಾನದವರೆಗೆ ಅಸ್ಸಾದ್ ಕುಟುಂಬದ ಕಠಿಣ ನಿಯಂತ್ರಣವನ್ನು ಸಹಿಸಿಕೊಂಡ ನಂತರ, ಇಸ್ಲಾಮಿಸ್ಟ್ ಅಜೆಂಡಾದೊಂದಿಗೆ ಬಂಡುಕೋರರು ರಾಜಧಾನಿಗೆ ನುಗ್ಗಿ ವಶಪಡಿಸಿಕೊಂಡಿದೆ.
ಕಳೆದ ಹಲವು ದಿನಗಳಿಂದ ಸಿರಿಯಾದಲ್ಲಿ ಬಂಡುಕೋರ ಗುಂಪುಗಳು ಮತ್ತು ಸೇನೆಯ ನಡುವೆ ಹೋರಾಟ ನಡೆಯುತ್ತಿತ್ತು. ಅಂತಿಮವಾಗಿ, ಇಸ್ಲಾಮಿ ಹಯಾತ್ ತಹ್ರೀರ್ ಅಲ್-ಶಾಮ್ ಗುಂಪು ಅಸ್ಸಾದ್ ಕುಟುಂಬದ ಐದು ದಶಕಗಳ ಆಳ್ವಿಕೆಗೆ ಸವಾಲು ಹಾಕಿದ 11 ದಿನಗಳ ನಂತರ ಸರ್ಕಾರವು ಪತನವಾಗಿದೆ.