Sunday, February 23, 2025
Homeರಾಜ್ಯದೌರ್ಜನ್ಯ ನಡೆಸಲು ಹೊರಟರೆ ತಕ್ಕ ಪಾಠ ಕಲಿಸುತ್ತೇವೆ : ಕರವೇ ಎಚ್ಚರಿಕೆ

ದೌರ್ಜನ್ಯ ನಡೆಸಲು ಹೊರಟರೆ ತಕ್ಕ ಪಾಠ ಕಲಿಸುತ್ತೇವೆ : ಕರವೇ ಎಚ್ಚರಿಕೆ

TA Narayana gowda Warn maratha Goons

ಬೆಂಗಳೂರು,ಫೆ.22- ಕನ್ನಡ ಕಲಿತು ಕನ್ನಡಿಗರಾಗಿ ಬಾಳಿ. ಬದಲಾಗಿ ದೌರ್ಜನ್ಯ ನಡೆಸಲು ಹೊರಟರೆ ತಕ್ಕ ಪಾಠ ಕಲಿಸಲಾಗುವುದು ಎಂದು ಪರ ರಾಜ್ಯದ ಕನ್ನಡ ವಿರೋಧಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಖಡಕ್ ಎಚ್ಚರಿಕೆ ನೀಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಬೆಳಗಾವಿಯಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಸರ್ಕಾರಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧ ಎಚ್ಚರಿಕೆ ನೀಡಿದ್ದಾರೆ.

ಕನ್ನಡದಲ್ಲಿ ಮಾತನಾಡಿದ್ದಕ್ಕೆ ಮತ್ತು ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಮಹದೇವ ಎಂಬ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.
ಯಾವುದೇ ಕಾರಣಕ್ಕೂ ಇದನ್ನೂ ನಾವು ಸಹಿಸಿಕೊಳ್ಳುವುದಿಲ್ಲ. ಬೆಳಗಾವಿ ಪೊಲೀಸರು ಮಹದೇವ ಅವರ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬನನ್ನೂ ಬಂಧಿಸಿ ಜೈಲಿಗೆ ಕಳುಹಿಸಬೇಕು. ಇಲ್ಲವಾದಲ್ಲಿ ಇದರ ಪರಿಣಾಮ ಭೀಕರವಾಗುತ್ತದೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಿಗರು ಸೌಹಾರ್ದ ಪ್ರಿಯರು, ಶಾಂತಿಪ್ರಿಯರು, ಹಾಗೆಂದ ಮಾತ್ರಕ್ಕೆ ನಮ್ಮ ಮೇಲೆ ವಿನಾಕಾರಣ ಹಲ್ಲೆ ನಡೆಸುವ ಭಾಷಾಂಧರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಕಿತ್ತುಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದ ಮೇಲೆ ಹತಾಶರಾಗಿರುವ ಭಾಷಾಂಧ ಮರಾಠಿಪುಂಡರು ಈಗ ಕನ್ನಡಿಗರ ಮೇಲೆ ಕೈಮಾಡುವ ನೀಚ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಇವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಕನ್ನಡಿಗರ ಸಿಟ್ಟು ರಟ್ಟೆಗೆ ಬರುತ್ತದೆ. ಅಂಥ ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಪುಂಡರನ್ನು ಮೊದಲು ಬಂಧಿಸಲಿ ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ.

ಹಲ್ಲೆಗೊಳಗಾದ ಮಹದೇವ ಅವರು ಬೇಗ ಗುಣಮುಖರಾಗಲಿ, ಅವರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಇರುತ್ತದೆ. ಈಗಾಗಲೇ ನಮ್ಮ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗನಟ್ಟಿ ಸೇರಿದಂತೆ ನಮ್ಮ ಪದಾಧಿಕಾರಿಗಳು ಮಹದೇವ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೆಎಸ್ ಆರ್ ಟಿಸಿ ಚಾಲಕರು, ನಿರ್ವಾಹಕರು ಈ ಘಟನೆಯಿಂದ ಧೃತಿಗೆಡುವ ಅವಶ್ಯಕತೆ ಇಲ್ಲ. ಇಂಥ ಹೇಡಿಗಳಿಗೆ ಬೆದರುವ ಅಗತ್ಯವೂ ಇಲ್ಲ ಎಂದು ಅಭಯ ನೀಡಿದ್ದಾರೆ.

ಕರ್ನಾಟಕದ ನೆಲದಲ್ಲಿ ಬದುಕುವವರು ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು. ಅದನ್ನು ಹೊರತುಪಡಿಸಿ ತಮ್ಮ ಭಾಷೆ ಕಲಿಯಿರಿ ಎಂದು ತಾಕೀತು ಮಾಡಿ ದೌರ್ಜನ್ಯ ನಡೆಸಲು ಹೊರಟರೆ ಅಂಥವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಕ್ಕ ಪಾಠ ಕಲಿಸಲಿದೆ. ಇದು ನನ್ನ ನೇರವಾದ ಎಚ್ಚರಿಕೆ ಎಂದು ಹೇಳಿದ್ದಾರೆ.

ಏನಿದು ಘಟನೆ:
ಘಟನೆ ಬೆಳಗಾವಿ ಜಿಲ್ಲೆಯ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕ ಹಾಗೂ ಚಾಲಕನ ಮೇಲೆ ಯುವಕರ ಗುಂಪುಯೊಂದು ಹ ನಡೆಸಿತ್ತು.

ಹಲ್ಲೆ ನಡೆಸಿದ ಯುವಕರು ಕನ್ನಡ ಏಕೆ ಬೊಗಳುತ್ತೀ ಮರಾಠಿ ಕಲಿತುಕೋ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ 20ಕ್ಕೂ ಹೆಚ್ಚು ಯುವಕರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪವಿದೆ. ಸದ್ಯ ಗಾಯಗೊಂಡ ನಿರ್ವಾಹಕ ಮಹಾದೇವ ಹುಕ್ಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES

Latest News