ಬೆಂಗಳೂರು,ಆ.31- ಹಾಲು, ವಿದ್ಯುತ್, ನೀರು, ಬಸ್, ಮೆಟ್ರೊ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿದಂತೆ ವಿವಿಧ ದರ ಹೆಚ್ಚಳ ಬೆನ್ನಲ್ಲೇ ಇದೀಗ ಆಸ್ತಿ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಿ ಇಂದಿನಿಂದ ಅನ್ವಯವಾಗುವಂತೆ ಸರ್ಕಾರ ಜಾರಿ ಮಾಡಿ ಆದೇಶಿಸಿದೆ. ಹೊಸ ಶುಲ್ಕದೊಂದಿಗೆ ಸಿರಾಸ್ಥಿ, ಶುದ್ಧ ಕ್ರಯಪತ್ರ, ಸ್ವಾಧೀನ, ಭೋಗ್ಯಪತ್ರ, ಕ್ರಯ ಉದ್ದೇಶದ ಜಿಪಿಎ ಸೇರಿ ವಿವಿಧ ಆಸ್ತಿ ಖರೀದಿ ನೋಂದಣಿ ಶುಲ್ಕ 1ರಿಂದ ಶೇ.2ಕ್ಕೆ ಹೆಚ್ಚಳ ಮಾಡಿದ ಆದೇಶ ಇಂದಿನಿಂದ ಜಾರಿಯಾಗಲಿದೆ.
ಆ.31ರಿಂದ ಹೊಸ ಶುಲ್ಕ ಜಾರಿ ಎಂದು ಸ್ಪಷ್ಟವಾಗಿ ಆದೇಶ ನೀಡಿದರೂ ಆ.29 ಮತ್ತು 30ರಂದು ಕಂದಾಯ ಇಲಾಖೆಯ ಕಾವೇರಿ ನೋಂದಣಿ ಪೋರ್ಟಲ್ ಸರ್ವರ್ ಡೌನ್ ಆಗಿದೆ.
ಅಧಿಸೂಚನೆ ಜಾರಿಗೆ ಬರುವ ದಿನಾಂಕಕ್ಕೂ ಮೊದಲು ಕಾನೂನುಬದ್ಧ ಅಧಿಕಾರವಿಲ್ಲದೆ ಈ ರೀತಿ ತಾಂತ್ರಿಕ ದೋಷಗಳನ್ನು ಉಂಟು ಮಾಡಿರುವುದು ನಾಗರಿಕರ ಶಾಸನಬದ್ದ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ.31ರಿಂದ ಹೊಸ ಆದೇಶ ಎಂದು ಸರ್ಕಾರ ಸ್ಪಷ್ಟವಾಗಿ ಉಲ್ಲೇಖಿಸಿದರೂ ಅದಕ್ಕಿಂತ ಎರಡು ದಿನ ಮೊದಲು ಸರ್ವರ್ ಡೌನ್ (ಡಿಜಿಟಲ್ ನಿರ್ಬಂಧ) ಆಗಿದ್ದು, ಕಾನೂನು ಬಾಹಿರ ಮತ್ತು ಆಡಳಿತಾತಕ ವಿರೋಧಿ ಕಾಯ್ದೆ ಹಾಗೂ ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ದಿನ ಮೊದಲೇ ಸರ್ವರ್ ಡೌನ್ ನೆಪದಲ್ಲಿ ನೋಂದಣಿ ಸ್ಥಗಿತವಾಗಿರುವುದರಿಂದ ಸಾರ್ವಜನಿಕರಿಗೆ ಆರ್ಥಿಕವಾಗಿ ಅಪಾರ ನಷ್ಟ ಉಂಟಾಗಿದೆ. ಇದಕ್ಕೆ ಯಾರು ಹೊಣೆ? ಇದು ಉದ್ದೇಶಪೂರ್ವಕವಾಗಿ ನಡೆದಿರುವುದೇ ಅಥವಾ ತಾಂತ್ರಿಕ ದೋಷವೇ? ಈ ಬಗ್ಗೆ ಅಧಿಕಾರಿಗಳು ಉತ್ತರ ನೀಡಬೇಕಿದೆ.
ಸಾರ್ವಜನಿಕರು ನಿಗದಿತ ದಿನಾಂಕದಲ್ಲಿ ತಮ ದಾಖಲೆಗಳನ್ನು ನೊಂದಾಯಿಸಲು ಶಾಸನಬದ್ದ ಮತ್ತು ಮೂಲಭೂತ ಹಕ್ಕಿದೆ. ಆದರೆ ಆದೇಶದ ದಿನಾಂಕಕ್ಕಿಂತ ಎರಡು ದಿನ ಮೊದಲೇ ಹಕ್ಕುಗಳನ್ನು ಕಾನೂನು ಬಾಹಿರವಾಗಿ ಯಾವುದೇ ಸೂಚನೆ ಮತ್ತು ಪೂರ್ವ ಸೂಚನೆ ನೀಡದೆ ನಿರಾಕರಿಸಿರುವುದು ತೊಂದರೆ, ಗೊಂದಲ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಿದ್ದು, ಈ ಕುರಿತು ಕಂದಾಯ ಇಲಾಖ ಹಿರಿಯ ಅಧಿಕಾರಿಗಳು ಗಮನಹರಿಸಬೇಕಿದೆ.
ಎರಡು ದಿನ ಅನಿಯಂತ್ರಿತವಾಗಿ ನೋಂದಣಿ ಸ್ಥಗಿತಗೊಳಿಸುವುದು ಡಿಜಿಟಲ್ ಬಂಧನ(ಡಿಜಿಟಲ್ ಅರೆಸ್ಟ್)ಕ್ಕೆ ಸಮಾನಾಗಿದ್ದು, ಡಿಜಿಟಲ್ ಆಡಳಿತ ಮತ್ತು ಶಾಸನಬದ್ದ ಸೇವೆಗಳ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಆ.31ರಿಂದ ಜಾರಿಗೆ ಬಂದ ಶುಲ್ಕ ಪರಿಷ್ಕರಣೆ ಕಾನೂನು ಬದ್ದವಾಗಿ ಮಾನ್ಯವಾಗಿದ್ದರೂ ಈ ದಿನಾಂಕದ ಮೊದಲು ನೋಂದಣಿ ಸೇವೆಗಳನ್ನು ನಿರ್ಬಂಧಿಸುವುದು, ಡಿಜಿಟಲ್ ನಿರ್ಬಂಧ ನೆಪದಲ್ಲಿ ನಿರಾಕರಿಸುವುದು ಕಾನೂನುಬಾಹಿರವಾಗಿದೆ.
ಕೂಡಲೇ ಈ ಲೋಪವನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನಾಗಿ ಮಾಡಿ ಸಾರ್ವಜನಿಕರಿಗಾದ ತೊಂದರೆಯನ್ನು ತಪ್ಪಿಸಬೇಕು. ಪೂರ್ವ ಸೂಚನೆ ಇಲ್ಲದೆ ಭವಿಷ್ಯದಲ್ಲಿ ಈ ರೀತಿ ನೋಂದಣಿ ಸೇವೆಗಳನ್ನು ನಿರಾಕರಿಸುವುದಿಲ್ಲ ಎಂಬ ಭರವಸೆಯನ್ನು ನೀಡಬೇಕು.
ಶುಲ್ಕ ಪರಿಷ್ಕರಣೆ ಸಮಯದಲ್ಲಿ ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ನಾಗರಿಕರ ಮೂಲಭೂತ ಹಕ್ಕಗಳನ್ನು ರಕ್ಷಿಸುವ ಸುರಕ್ಷಿತ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಬೇಕಿದೆ.
ಈವರೆಗೆ ರಾಜ್ಯದಲ್ಲಿ ನಿವೇಶನ, ಭೂಮಿ, ಫ್ಲಾಟ್, ಮನೆ ಸೇರಿ ಯಾವುದೇ ಸ್ಥಿರಾಸ್ತಿ ಖರೀದಿ ವೇಳೆ ಶೇ.1ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು 6.6ರಷ್ಟು ಶುಲ್ಕ ಭರಿವಸಬೇಕಿತ್ತು. ಇದೀಗ ನೋಂದಣಿ ಶುಲ್ಕ ಶೇ.2ರಷ್ಟಾಗಿರುವುದನ್ನು ಆಸ್ತಿಯ ಮಾರುಕಟ್ಟೆಯ ಬೆಲೆ ಶೇ.7.6ರಷ್ಟನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಭರಿಸಬೇಕು.
ಹೊಸ ಶುಲ್ಕ ಜಾರಿಯಾಗಿದ್ದರಿಂದ ಕಾವೇರಿ ಸಾಫ್ಟ್ ವೇರ್ ಅಪ್‌ಡೇಟ್ ಮಾಡಬೇಕಾಗಿದ್ದರಿಂದ ಸರ್ವರ್ ಸಮಸ್ಯೆಯಾಯಿತು. ಅದನ್ನು ಬಿಟ್ಟರೆ ಬೇರೇನೂ ಇಲ್ಲ.
- ಕಂದಾಯ ಅಧಿಕಾರಿ
ಎಲ್ಲಿಂದಲೋ ಹಣ ತಂದು ಕಷ್ಟಪಟ್ಟು ಆಸ್ತಿ ನೋಂದಣಿಗೆಂದು ಬಂದರೆ ಇಲ್ಲಿ ಸರ್ವರ್ ಸಮಸ್ಯೆ ಹೇಳಿದರು. ಅದನ್ನು ಕೇಳಿದರೆ ಬೇರೇನೆ ಕಾರಣ ಹೇಳುತ್ತಾರೆ. ನಮಗಾಗುವ ನಷ್ಟಕ್ಕೆ ಹೊಣೆ ಯಾರು?
-ರಾಜು, ನಿವೃತ್ತ ಶಿಕ್ಷಕ
ಈ ಸರ್ಕಾರ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೇಕಾಬಿಟ್ಟಿ ಬೆಲೆ ಏರಿಸುತ್ತಲೇ ಇದ್ದಾರೆ. ಹೇಳುವವರು, ಕೇಳುವವರು ಯಾರು ಇಲ್ಲದಂಗಾಗಿದೆ.
-ನಾಗರಾಜ್, ಕೃಷಿಕ