Friday, November 22, 2024
Homeರಾಜ್ಯವಿಧಾನಸಭೆಯಲ್ಲಿ ಹಗರಣಗಳ ಗದ್ದಲ : ಆಡಳಿತ-ವಿಪಕ್ಷಗಳ ವಾಗ್ಯುದ್ಧ

ವಿಧಾನಸಭೆಯಲ್ಲಿ ಹಗರಣಗಳ ಗದ್ದಲ : ಆಡಳಿತ-ವಿಪಕ್ಷಗಳ ವಾಗ್ಯುದ್ಧ

ಬೆಂಗಳೂರು, ಜು.18– ವಿಧಾನಸಭೆಯಲ್ಲಿಂದು ಆಡಳಿತ ಹಾಗು ಪ್ರತಿಪಕ್ಷಗಳ ನಡುವೆ ಹಗರಣಗಳ ಸದ್ದು ಜೋರಾಗಿ ನಡೆದು ಇಡೀ ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕ ಮಹತ್ವದ ವಿಷಯ ನಿಯಮ-69ರಡಿ ಇಂದು ಪ್ರತಿಪಕ್ಷದ ನಾಯಕ ಅಶೋಕ್‌ ಅವರು ವಾಲೀಕಿ ನಿಗಮದಲ್ಲಿ ಪರಿಶಿಷ್ಟರ ಹಣ ಲೂಟಿ ಮಾಡಲಾಗಿದೆ ಎಂದು ಸಿಎಂ ವಿರುದ್ಧ ನೇರ ವಾಗ್ದಾಳಿ ನಡೆಸಿದಾಗ ಆಡಳಿತ ಪಕ್ಷದ ಸಚಿವರು, ಶಾಸಕರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಆಡಳಿತದಲ್ಲಿ ನೀವು ಎಷ್ಟು ಹಗರಣ ಮಾಡಿದ್ದೀರಿ ಎಂದು ತಿರುಗೇಟು ನೀಡಿದರು.

ಪ್ರತಿಪಕ್ಷದ ಶಾಸಕರಾದ ಬಸವರಾಜ ಪಾಟೀಲ್ ಯತ್ನಾಳ್‌, ಅರವಿಂದ ಬೆಲ್ಲದ್‌ ಸೇರಿದಂತೆ ಇತರರು ಚರ್ಚೆಯಲ್ಲಿ ಭಾಗಿಯಾಗಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕುಂಠಿತವಾಗಿದೆ ಎಂದು ಟೀಕಿಸಿದರು.

ಇದಕ್ಕೆ ಪ್ರತಿಯಾಗಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಚ್‌.ಸಿ.ಮಹದೇವಪ್ಪ, ದಿನೇಶ್‌ ಗುಂಡೂರಾವ್‌, ಶಾಸಕ ನರೇಂದ್ರ ಸ್ವಾಮಿ, ಪ್ರಕಾಶ್‌ ಕೋಳಿವಾಡ ಸೇರಿದಂತೆ ಹಲವರು ಪ್ರತಿಪಕ್ಷದ ಶಾಸಕರ ಟೀಕೆಗೆ ಅಡ್ಡಿ ಉಂಟುಮಾಡಿ ತಿರುಗೇಟು ನೀಡಿದರು.
ಒಟ್ಟಾರೆ ಕಳೆದ ಮೂರು ದಿನಗಳಿಂದ ಹಗರಣಗಳ ಕುರಿತು ಪದೇ ಪದೇ ಆಡಳಿತ, ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯುತ್ತಿದೆ.

ಈ ವೇಳೆ ಬಿಜೆಪಿ ಶಾಸಕರು ಮತ್ತೆ ಸಿಎಂ ಸಿದ್ದರಾಮಯ್ಯವಿರುದ್ಧ ಮುಗಿಬಿದ್ದು 100 ಪರ್ಸೆಂಟ್‌ ಸಿಎಂ ಎಂದು ಗಂಭೀರ ಆರೋಪ ಮಾಡಿದಾಗ ಕೆಂಡಾಮಂಡಲವಾದ ಮುಖ್ಯಮಂತ್ರಿಯವರು ನಿಮ ಹಗರಣಗಳನ್ನು ಹೊರ ತೆಗೆಯುತ್ತೇನೆ ಎಂದು ಎಚ್ಚರಿಸಿದಾಗ ಸದನ ಕಾವೇರಿತು.

ದಲಿತ ಪದ ಬಳಕೆ ಮಾಡುವಂತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಎಂದು ಹೇಳಿ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಅಶ್ವತ್‌ ನಾರಾಯಣ, ಸುರೇಶ್‌ ಕುಮಾರ್‌ ಮತ್ತಿತರರು ಎದ್ದು ನಿಂತ ಅಹಿಂದ ಬಳಕೆ ಮಾಡಿದ್ದು ನೀವೆ ಅಲ್ಲವೇ ಎಂದು ತೀರುಗೇಟು ನೀಡಿದರು.

ಬಿಜೆಪಿಯವರು ಪದೇ ಪದೇ ಸಾವಿರಕ್ಕೂ ಹೆಚ್ಚು ಸಲ ಇದೇ ಪದ ಬಳಕೆ ಮಾಡುತ್ತಿರುವುದನ್ನು ನೋಡಿದರೆ ಇವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಇವರ ನಡುವಳಿಕೆ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ಸಿಎಂ ಆಕೋಶ ವ್ಯಕ್ತಪಡಿಸಿದರು.
ಇದಕ್ಕೆ ಬಿಜೆಪಿ ಅಶ್ವಥ್‌ ನಾರಾಯಣ, ಕಾಂಗ್ರೆಸ್‌‍ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ತಿರುಗೇಟು ನೀಡಿದರು.

ನಿಮ ಹಗರಣಗಳು ಏನೇನಿವೆ ಎಂದು ತೆಗೆಯಬೇಕಾ? ಎಲ್ಲವನ್ನೂ ತೆಗೆಯುತ್ತೇನೆ ಎಂದು ಸಿಎಂ ಹೇಳಿದಾಗ, ಇದಕ್ಕೆ ಶಾಸಕ ಅಶ್ವತ್‌ ನಾರಾಯಣ ಏರು ಧ್ವನಿಯಲ್ಲಿ ಪೇ ಸಿಎಂ… ಶೇ.100ರಷ್ಟು ಸಿಎಂ… ಏನು ಬೆದರಿಕೆ ಹಾಕುತ್ತೀರಾ. ತೆಗೆಯಿರಿ ಎಂದು ತಿರುಗಿ ಬಿದ್ದರು.
ಸಿಟ್ಟಾದ ಸಿಎಂ ಏನೆಂದು ಮಾತನಾಡುತ್ತಿದ್ದೀರಾ..ನಿಮಗಿಂತಲೂ ಜೋರಾಗಿ ಕೂಗಲು ನನಗೂ ಬರುತ್ತದೆ.

ಶೇ.40ರಷ್ಟು ಕಮಿಷನ್‌ ಪಡೆದ ನಿಮಿಂದ ನಾವು ಭ್ರಷ್ಟಚಾರದ ವಿರುದ್ಧ ಪಾಠ ಕಲಿಯಬೇಕಾ? ಇವರ ಭ್ರಷ್ಟಚಾರ ಬಯಲಾಗಿದೆ. ಇವರಿಗೆ ನಾಚಿಕೆಯಾಗಬೇಕು, ಮಾನ ಮರ್ಯಾದೆ ಇಲ್ಲದೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಕೋಶ ವ್ಯಕ್ತಪಡಿಸಿದರು.ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ಕಾವೇರಿದ ಚರ್ಚೆಗಳು ನಡೆದವು.

ಮತ್ತೆ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಜೈಲಿಗೆ ಹೋಗಿ ಬಂದವರು ಇವರು. ಭ್ರಷ್ಟಚಾರದಿಂದ ಅಧಿಕಾರಕ್ಕೆ ಬಂದವರು. ಕೆಪಿಎಸ್ಸಿ ನೇಮಕಾತಿಯಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಕ್‌ ಟರ್ಮಿನಲ್‌ನಲ್ಲಿ ನಡೆದಿರುವುದರ ಬಗ್ಗೆ ಬಿಜೆಪಿಯವರು ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರಕ್ಕೆ ಲೂಟಿ ಹೊಡೆಯುವುದೇ ಕೆಲಸವಾಗಿದೆ ಎಂದು ಅಶ್ವಥ್‌ ನಾರಾಯಣ್‌ ಆರೋಪಿಸಿದರು.

ಈ ಹಂತದಲ್ಲಿ ಅಶ್ವಥ್‌ ನಾರಾಯಣ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ದಿನೇಶ್‌ ಗುಂಡುರಾವ್‌ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಪರ ನಾಚಿಕೆಯಾಗುವುದಿಲ್ಲವೇ ಎಂದು ಟೀಕಿಸಿಕೊಂಡಿದ್ದು ಆಯಿತು. ಬಿಜೆಪಿಯ ಕೆಲ ಶಾಸಕರು ಹದ್ದು ಮೀರಿದ ವರ್ತನೆ ಪ್ರದರ್ಶಿಸುತ್ತಿದ್ದಾರೆ, ಅವರನ್ನು ಸದನದಿಂದ ಅಮಾನತು ಮಾಡಿ ಎಂದು ಕಾಂಗ್ರೆಸ್‌‍ ಸದಸ್ಯರು ಒತ್ತಾಯಿಸಿದರು.

RELATED ARTICLES

Latest News