ಬೆಂಗಳೂರು, ಮೇ 23- ರಾಜ್ಯ ಸರ್ಕಾರ ಒಡೆತನದ ಮೈಸೂರು ಸ್ಯಾಂಡಲ್‌ಸೋಪ್ ಗೆ ಟಾಲಿವುಡ್ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ತಮ್ಮ ಒಡೆತನದ ಮೈಸೂರು ಸ್ಯಾಂಡಲ್ ಸೋಪ್ ಗೆ 2 ವರ್ಷ 2 ತಿಂಗಳ ಅವಧಿಗೆ ರಾಯಭಾರಿ ಆಗಿಸಿ 6.2 ಕೋಟಿ ನೀಡಲು ಒಪ್ಪಂದ ಮಾಡಿಕೊಂಡಿರುವುದು ಕೂಡ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಇದ್ದರೂ ಕೂಡ ಜಾಹೀರಾತಿನಲ್ಲಿ ತಮ್ಮ ಬಣ್ಣದ ಹೊನಪು ಹಾಗೂ ವೈಯಾರದಿಂದ ಬೇಡಿಕೆಯಲ್ಲಿರುವ ತಮನ್ನಾಳನ್ನು ತಮ್ಮ ಬ್ರಾಂಡ್‌ನ ರಾಯಭಾರಿಯಾಗಿಸಿ ತಮ್ಮ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಹೊರಟಿದೆ. ತಮನ್ನಾ ಭಾಟಿಯಾ ಈಗಾಗಲೇ ಸ್ಯಾಂಡಲ್ ವುಡ್ ನ ಜಾಗ್ವರ್, ಕೆಜಿಎಫ್, ರೇಡ್ 2 ಸಿನಿಮಾಗಳಲ್ಲಿ ಸ್ಪೆಷಲ್ ಹಾಡಿಗೆ ಬೋಲ್ಡ್ ಆಗಿ ಸ್ಟೆಪ್ಸ್ ಹಾಕುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.
ಭಾರೀ ಟೀಕೆ:
ತೆಲುಗು ಚಿತ್ರರಂಗದಲ್ಲಿ ಒಂದು ಕಾಲದಲ್ಲಿನಂಬರ್ 1 ನಟಿಯಾಗಿ ವಿಜೃಂಭಿಸಿದ್ದ ತಮನ್ನಾ, ಈಗ ಅಲ್ಲಿ ಅವಕಾಶ ಕಳೆದುಕೊಂಡಿದ್ದು ಐಟಂ ಸಾಂಗ್‌ಗೆ ಮೀಸಲಾಗಿರುವ ಬೆನ್ನಲ್ಲೇ ನಮ್ಮ ಕನ್ನಡಿಗ ನಟಿಯರು ಯಾರು ಸಿಗಲಿಲ್ಲವೇ? ಎಂದು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಬೆಂಗಳೂರಿನವರೇ ಆದ ಬಾಲಿವುಡ್ ನಟಿ ದೀಪಿಕಾಪಡುಕೋಣೆ ಸೇರಿದಂತೆ ಇನ್ನು ಹಲವು ನಟಿಯರು ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯನ್ನಾಗಿ ಮಾಡಬಹುದಿತ್ತು ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.