ಬೆಂಗಳೂರು, ಸೆ.19- ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ರೋಬೋ ಶಂಕರ್ (46)ಅವರು ತಮ ಇಹಲೋಕದ ಯಾತ್ರೆ ಮುಗಿಸಿದ್ದು, ಇವರ ನಿಧನಕ್ಕೆ ಕಾಲಿವುಡ್‌ನ ಖ್ಯಾತ ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.
ಚಿತ್ರವೊಂದರ ಶೂಟಿಂಗ್ ವೇಳೆಯೇ ರೋಬೋ ಶಂಕರ್ ಅವರು ಕುಸಿದು ಬಿದ್ದು ನಿತ್ರಾಣಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.ಈ ಹಿಂದೆ ರೋಬೋ ಶಂಕರ್ ಅವರು ಜಾಂಡೀಸ್‌ನಿಂದ ಬಳಲಿದ್ದರು. ಆನಂತರ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು.
ಆದರೆ ಈಗ ಮತ್ತೆ ಚೇತರಿಸಿಕೊಂಡಿದ್ದ ಅವರು ಎಂದಿನಂತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.
ರೋಬೋ ಶಂಕರ್ ಅವರ ನಿಧನಕ್ಕೆ ಕಾಲಿವುಡ್ ನ ಖ್ಯಾತ ಕಲಾವಿದರಾದ ಕಮಲಹಾಸನ್, ರಜನಿಕಾಂತ್, ವಿಜಯ್, ಅಜಿತ್, ಕಾರ್ತಿ, ಸಿಂಬು ಖುಷ್ಬೂ, ಸಿಮ್ರಾನ್ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.
ಇಂದು ರೋಬೋ ಶಂಕರ್ ಅವರ ಅಂತ್ಯಸಂಸ್ಕಾರವು ಇಂದು ನೆರವೇರಿದ್ದು, ಅಪಾರ ಅಭಿಮಾನಿಗಳು, ಕಲಾವಿದರು, ತಂತ್ರಜ್ಞರು ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.
1997ರಲ್ಲಿ ಧರ್ಮಚಕ್ರಂ ಸಿನಿಮಾದ ಮೂಲಕ ಬಣ್ಣದ ಲೋಕದ ಪಯಣ ಆರಂಭಿಸಿದ ರೋಬೋ ಶಂಕರ್, ಮಾರಿ, ಮಾರಿ 2, ವಿಶ್ವಾಸಂ ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ ದಿ ಲಯನ್ ಕಿಂಗ್, ಮುಫಾಸಾ, ದಿ ಲಯನ್ ಕಿಂಗ್ ಎಂಬ ಅನಿಮೇಷನ್ ಸಿನಿಮಾಗಳಿಗೆ ಕಂಠದಾನ ಮಾಡಿದ್ದ ರೋಬೋ ಶಂಕರ್ ಕಿರುತೆರೆಯಲ್ಲೂ ತಮನ್ನು ಗುರುತಿಸಿಕೊಂಡಿದ್ದರು.