ಬೆಂಗಳೂರು,ಅ.18– ನೀವು ನೀಡುವ ಹಣಕ್ಕೆ ಮೂರುಪಟ್ಟು ನಕಲಿ ನೋಟು ಕೊಡುವುದಾಗಿ ಹೇಳಿ ಸಾರ್ವಜನಿಕರನ್ನು ಯಾಮಾರಿಸುತ್ತಿದ್ದ ತಮಿಳುನಾಡಿನ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ವರನ್, ಮೀರನ್ ಮೊಹಿದು ದ್ದೀನ್ ಮತ್ತು ಶೇಕ್ ಮೊಹಮದ್ ಬಂಧಿತ ವಂಚಕರು. ತಮಿಳುನಾಡಿನಲ್ಲಿ ಸಕ್ರೀಯರಾಗಿದ್ದ ಈ ಮೂವರು ವಂಚಕರು ನಗರಕ್ಕೆ ಬಂದು ಮೊದಲ ಪ್ರಯತ್ನದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಸೂಟ್‌ಕೇಸ್‌ವೊಂದರಲ್ಲಿ ಯಾರಿಗೂ ಅನುಮಾನ ಬಾರದ ರೀತಿ ಮೇಲೆ ಹಾಗೂ ಕೆಳಗೆ 500 ರೂ. ಮುಖ ಬೆಲೆಯ ಅಸಲಿ ನೋಟುಗಳನ್ನು ಇಟ್ಟು ಮಧ್ಯದಲ್ಲಿ ನೋಟಿನ ರೀತಿಯಲ್ಲಿರುವ ಬಿಳಿ ಖಾಲಿ ಪೇಪರ್‌ಗಳನ್ನು ಜೋಡಿಸಿಕೊಂಡು ಬಂದಿದ್ದು, ಜಯನಗರ 4ನೇ ಬ್ಲಾಕ್‌ನಲ್ಲಿ ಸಾರ್ವಜನಿಕರಿಗೆ 10 ಲಕ್ಷ ನೀಡಿದರೆ 30 ಲಕ್ಷ ಅಂದರೆ ಮೂರು ಪಟ್ಟು ನಕಲಿ ನೋಟುಗಳನ್ನು ನೀಡುವುದಾಗಿ ಹೇಳಿ ಯಾಮಾರಿಸುತ್ತಿದ್ದರು.
ಈ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿ ತಮಿಳುನಾಡಿನ ತಿರುನೆಲ್ವೇಳಿಯ ಮೂವರನ್ನು ಬಂಧಿಸಿ ಕಾರು, ಸೂಟ್‌ಕೇಸ್, ಅದರಲ್ಲಿದ್ದ 15 ಸಾವಿರ ಅಸಲಿ ನೋಟ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಗ್ಯಾಂಗ್‌ನ ಹಲವರ ಹೆಸರುಗಳನ್ನು ಹೇಳಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.