Tuesday, August 26, 2025
Homeರಾಷ್ಟ್ರೀಯ | Nationalಹೊಸೂರಿನಲ್ಲಿ ಹೊಸ ವಿಮಾನ ನಿಲ್ಧಾಣ ನಿರ್ಮಿಸಲು ತಮಿಳುನಾಡು ಸರ್ಕಾರ ನಿರ್ಧಾರ

ಹೊಸೂರಿನಲ್ಲಿ ಹೊಸ ವಿಮಾನ ನಿಲ್ಧಾಣ ನಿರ್ಮಿಸಲು ತಮಿಳುನಾಡು ಸರ್ಕಾರ ನಿರ್ಧಾರ

Tamil Nadu government decides to build new airport in Hosur

ಚೆನ್ನೈ,ಆ.26– ಕರ್ನಾಟಕ ಸರ್ಕಾರ ಬೆಂಗಳೂರು ಸಮೀಪ ವಿಮಾನ ನಿಲ್ದಾಣದ ಬಗ್ಗೆ ಇನ್ನೂ ಚರ್ಚೆಯಲ್ಲಿರುವಾಗಲೆ ತಮಿಳುನಾಡು ಸರ್ಕಾರವು ಪ್ರಸ್ತಾವಿತ ಹೊಸೂರು ವಿಮಾನ ನಿಲ್ದಾಣದ ಸ್ಥಳವನ್ನು ಅಂತಿಮಗೊಳಿಸಿದೆ. ಕರ್ನಾಟಕದ ಗಡಿಯಿಂದ ಕೇವಲ 19 ಕಿ.ಮೀ ದೂರದಲ್ಲಿರುವ ಬೆರಿಗೈ ಮತ್ತು ಬಾಗಲೂರು ನಡುವಿನ ಶೂಲಗಿರಿ ತಾಲೂಕಿನಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ
ತಮಿಳುನಾಡು ಸರ್ಕಾರ ಮುಂದಾಗಿದೆ.

ಈ ಜಾಗ ತನೇಜಾ ಏರೋಸ್ಪೇಸ್‌‍ನಿಂದ ಪೂರ್ವಕ್ಕೆ ಸುಮಾರು 15.5 ಕಿಲೋಮೀಟರ್‌ ದೂರದಲ್ಲಿದ್ದರೆ ಕರ್ನಾಟಕ ಗಡಿಯಲ್ಲಿರುವ ಅತ್ತಿಬೆಲೆಯಿಂದ 19 ಕಿ.ಮೀ ದೂರದಲ್ಲಿದೆ. ಮುಂದಿನ ಎರಡು ವಾರಗಳಲ್ಲಿ ತಮಿಳುನಾಡು ಸರ್ಕಾರ ಅನುಮೋದನೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವನ್ನು ಸಂಪರ್ಕಿಸಲಿದೆ ಎಂದು ಮೂಲಗಳು ತಿಳಿಸಿವೆ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಬೆಂಗಳೂರು ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆ ಬಳಿಯೇ ಈ ಜಾಗ ಇರುವುದು ವಿಶೇಷ.

ಈ ವಿಮಾನ ನಿಲ್ದಾಣ ಯೋಜನೆಗೆ ಸುಮಾರು 2,300 ಎಕರೆ ಭೂಮಿಯ ಅಗತ್ಯವಿದೆ. ಹೀಗಾಗಿ ಆರು ವಾರಗಳಲ್ಲಿ ಭೂ ಸ್ವಾಧೀನ ಯೋಜನೆಯನ್ನು ಸಿದ್ಧಪಡಿಸುವಂತೆ ಕೃಷ್ಣಗಿರಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.

ಹೊಸೂರು ವಿಮಾನ ನಿಲ್ದಾಣ ಯೋಜನೆಯು ಪೂರ್ಣಗೊಳ್ಳಲು ಸುಮಾರು ಎಂಟು ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಕಳೆದ ವರ್ಷ ಘೋಷಿಸಿದ ಪ್ರಸ್ತಾವಿತ ವಿಮಾನ ನಿಲ್ದಾಣವನ್ನು ವಾರ್ಷಿಕ 3 ಕೋಟಿ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಅಭಿವೃದ್ಧಿ ಹೊಂದುತ್ತಿರುವ ಉತ್ಪಾದನಾ ಕೇಂದ್ರವೆಂದು ಕರೆಯಲ್ಪಡುವ ಹೊಸೂರಿನಲ್ಲಿ 500 ಕ್ಕೂ ಹೆಚ್ಚು ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿದೆ. ಆಟೋಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ಸ್ ನಂತಹ ವಲಯಗಳಿಗೆ ಸಂಬಂಧಿಸಿದಂತೆ 3,000 ಕಂಪನಿಗಳು ಹೊಸೂರು ವಲಯದಲ್ಲಿದೆ.

ಈ ಯೋಜನೆಯು ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಚೆನ್ನೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ಜನದಟ್ಟಣೆಯನ್ನು ಕಡಿಮೆ ಮಾಡಲಿದೆ. ಕೃಷ್ಣಗಿರಿ ಜಿಲ್ಲೆ ಮತ್ತು ಉತ್ತರ ತಮಿಳುನಾಡಿನ ಕೈಗಾರಿಕಾ ಬೆಳವಣಿಗೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.

ತಮಿಳುನಾಡು ಸರ್ಕಾರವು 2024ರ ಅಕ್ಟೋಬರ್‌ನಲ್ಲಿ ಅಧ್ಯಯನಕ್ಕಾಗಿ ಐದು ಸ್ಥಳಗಳನ್ನು ಆಯ್ಕೆ ಮಾಡಿತ್ತು. ಹೊಸೂರು ಇತ್ತೀಚಿನ ವರ್ಷಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಈ ಭಾಗದಲ್ಲಿ ಆಧುನಿಕ ಮೂಲಸೌಕರ್ಯಗಳ ವ್‌ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಮೂಲಕ ಪ್ರಮುಖ ಆರ್ಥಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ಬೆಂಗಳೂರು ಕಂಪೇಗೌಡ ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್‌ ವೈಮಾನಿಕ ಅಂತರದಲ್ಲಿ 25 ವರ್ಷಗಳವರೆಗೆ ಯಾವುದೇ ಹೊಸ ಅಥವಾ ಅಸ್ತಿತ್ವದಲ್ಲಿರುವ ದೇಶೀಯ ವಿಮಾನ ನಿಲ್ದಾಣಗಳನ್ನು ತೆರೆಯಬಾರದು ಎಂಬ ಷರತ್ತು ಇದೆ. ಈ ಷರತ್ತು 2033ಕ್ಕೆ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಬೆಂಗಳೂರಿಗೆ ಹೊಂದಿಕೊಂಡಂತೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗುತ್ತಿದೆ.

RELATED ARTICLES

Latest News