ಚೆನ್ನೈ, ನ.9- ಸಲಿಂಗಕಾಮದ ಮೋಹಕ್ಕೆ ಸಿಲುಕಿದ ತಾಯಿಯೊಬ್ಬರು ತಮ್ಮ ಪ್ರೇಮಕ್ಕಾಗಿ ಹೆತ್ತ ಮಗುವನ್ನೇ ಕೊಲೆ ಮಾಡಿರುವ ಹೀನ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತನ್ನ ಆರು ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಸಲಿಂಗಕಾಮಿ ಸಂಗಾತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ತಂದೆ ಮಗು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿಲ್ಲ ಎಂದು ನೀಡಿದ ದೂರಿನ ಆಧಾರದ ಮೇರೆಗೆ ಕಾರ್ಯಚರಣೆ ನಡೆಸಿದ ಪೊಲೀಸರು ಸಲಿಂಗಕಾಮಿಗಳ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಮಗುವಿಗೆ ಹಾಲುಣಿಸುವಾಗ ಸಾವನ್ನಪ್ಪಿದೆ ಎಂದು ಮೂಲತಃ ನಂಬಲಾಗಿತ್ತು.ಆ ಸಮಯದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿತ್ತು ಮತ್ತು ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ನಂತರ ಮಗುವನ್ನು ಕುಟುಂಬದ ಕೃಷಿ ಭೂಮಿಯಲ್ಲಿ ಹೂಳಲಾಯಿತು. ಕೆಲ ದಿನಗಳ ನಂತರ, ಮಗುವಿನ ತಾಯಿ ಮತ್ತು ಇನ್ನೊಬ್ಬ ಮಹಿಳೆಯ ನಡುವಿನ ಸಂಬಂಧದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಕಂಡುಹಿಡಿದಿರುವುದಾಗಿ ಹೇಳಿಕೊಂಡು ಮಗುವಿನ ತಂದೆ ಅಧಿಕಾರಿಗಳನ್ನು ಸಂಪರ್ಕಿಸಿದರು. ಸಂಬಂಧಕ್ಕೆ ಸಂಬಂಧಿಸಿದ ಒತ್ತಡದಿಂದಾಗಿ ಮಗುವಿಗೆ ಹಾನಿಯಾಗಿರಬಹುದೆಂದು ಅವರು ಶಂಕಿಸಿದ್ದಾರೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದರು.
ಇದರ ನಂತರ, ಅಧಿಕಾರಿಗಳು ಈ ವಾರದ ಆರಂಭದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹೊರತೆಗೆದರು.ಮಗುವನ್ನು ಉಸಿರುಗಟ್ಟಿಸಿ ಕತ್ತು ಹಿಸುಕಲಾಗಿದೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದರು.
ವಿಚಾರಣೆಯ ಸಮಯದಲ್ಲಿ, ಮಹಿಳೆ ತನ್ನ ಗಂಡನ ಮಗುವನ್ನು ಬಯಸುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಪತಿ ತನ್ನನ್ನು ನೋಡಿಕೊಳ್ಳಲಿಲ್ಲ ಎಂದು ಸಹ ಅವರು ಹೇಳಿದ್ದಾರೆ.ಶಿಶುವನ್ನು ಕೊಲೆ ಮಾಡಿದರೆ ಕಾನೂನು ತನ್ನ ದಾರಿಯಲ್ಲಿ ಹೋಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
