ಕೇರಳ,ಆ.10- ವಯನಾಡಿನಲ್ಲಿ ಸಂಭವಿಸಿದ ಗುಡ್ಡಕುಸಿತದಿಂದ ನೂರಾರು ಜನ ಪ್ರಾಣ ಕಳೆದುಕೊಂಡು, ನೂರಾರು ಜನ ಸಂತ್ರಸ್ತರಾಗಿ ಅತಂತ್ರರಾಗಿದ್ದಾರೆ. ಇವರ ಸಂಕಷ್ಟಕ್ಕೆ ಸ್ಪಂದಿಸಲು ನೂರಾರು ಜನ ಮುಂದೆ ಬರುತ್ತಿದ್ದಾರೆ.
ಚಲನಚಿತ್ರ ನಟರು, ವಿವಿಧ ಗಣ್ಯರು ಕೋಟ್ಯಂತರ ರೂ. ನೆರವು ನೀಡಿದ್ದಾರೆ. ವಿವಿಧ ಸರ್ಕಾರಗಳು ನೂರಾರು ಕೋಟಿ ರೂ. ನೆರವು ಘೋಷಣೆ ಮಾಡಿವೆ.ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಮನೆಗಳನ್ನು, ತನ್ನವರನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಈ ಪುಟ್ಟ ಬಾಲಕಿ ಸತತ ಮೂರು ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ಮಾಡಿ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿ ಗಮನ ಸೆಳೆದಿದ್ದಾಳೆ.
ಕೇರಳ ವಯನಾಡಿನಲ್ಲಿ ಸಾಲುಸಾಲು ಗುಡ್ಡ ಕುಸಿದಿರುವುದರಿಂದ ಪ್ರವಾಹದ ಪರಿಸ್ಥಿತಿಯೂ ನಿರ್ಮಾಣವಾಗಿದೆ. 300 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಯನಾಡಿಗಾಗಿ ಎಲ್ಲರ ಹೃದಯ ಮಿಡಿಯುತ್ತಿದೆ.ನಿಧಿ ಸಂಗ್ರಹಿಸಲು 13 ವರ್ಷದ ಬಾಲಕಿಯೊಬ್ಬಳು ಸತತ ಮೂರು ಗಂಟೆಗಳ ಕಾಲ ಭರತನಾಟ್ಯ ಮಾಡಿ ಅದರಿಂದ ಬಂದ ಹಣವನ್ನು ಕೇರಳ ಸಿಎಂಗೆ ನೀಡಿದ್ದಾಳೆ. ಬಾಲಕಿಯ ಈ ಕಾರ್ಯವನ್ನು ಪಿಣರಾಯಿ ವಿಜಯನ್ ಶ್ಲಾಘಿಸಿದ್ದಾರೆ.
ಬಾಲಕಿ ಹರಿಣಿ ಕೇರಳ ಸಿಎಂ ಅನ್ನು ಭೇಟಿ ಮಾಡಿ ಸಿಎಂ ಪರಿಹಾರ ನಿಧಿಗೆ ತಾನು ಗಳಿಸಿದ ಹಣ ಹಾಗೂ ತನ್ನ ಉಳಿತಾಯದ ಹಣ ಸೇರಿದಂತೆ 15 ಸಾವಿರ ರೂ.ಗಳನ್ನು ನೀಡಿದ್ದಾಳೆ. ಅಲ್ಲದೆ, ತನ್ನ ಭರತನಾಟ್ಯವನ್ನು ಫೋನ್‌ನಲ್ಲಿ ರೆಕಾರ್ಡ್ ಮಾಡಿ ಮುಖ್ಯಮಂತ್ರಿಗಳಿಗೆ ತೋರಿಸಿದ್ದಾಳೆ.
ಪಿಣರಾಯಿ ವಿಜಯನ್ ಅವರು ಬಾಲಕಿಯ ತಲೆ ಮೇಲೆ ಕೈ ಇಟ್ಟು ಹಾರೈಸಿದ್ದಾರೆ. ಕಳೆದ ಜು.30 ರಂದು ಸುರಿದ ಧಾರಾಕಾರ ಮಳೆಗೆ ಮುಂಡಕೈ, ಚೂರಲಲ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ನೂರಾರು ಮನೆಗಳು ನೆಲಸಮಗೊಂಡವು. ದುರಂತದಲ್ಲಿ 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು.
ಈ ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ರಾಹುಲ್‌ಗಾಂಧಿ ಸೇರಿದಂತೆ ಪ್ರತಿಪಕ್ಷದ ನಾಯಕರ ಒತ್ತಾಯದ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಯನಾಡಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.