ಪಣಜಿ, ಮೇ 3: ಉತ್ತರ ಗೋವಾದಲ್ಲಿ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಮಂದಿ ಸಾವನ್ನಪ್ಪಿದ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಘೋಷಿಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳ ನಂತರ ಸಾವಂತ್ ಶಿರ್ಗಾವ್ ಗ್ರಾಮದ ಶ್ರೀ ಲೈಲ್ವೆ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತದ ಸ್ಥಳಕ್ಕೆ ಭೇಟಿ ನೀಡಿದರು. ಮುಂಜಾನೆ 3 ಗಂಟೆ ಸುಮಾರಿಗೆ ದೇವಾಲಯದ ವಾರ್ಷಿಕ ಉತ್ಸ ವದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾವಂತ್, ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ನಾನು ಕೇಳಿದ್ದೇನೆ. ನಾವು ವರದಿಯನ್ನು ಸಾರ್ವಜನಿಕಗೊಳಿಸುತ್ತೇವೆ ಎಂದು ಹೇಳಿದರು.
ಇಂತಹ ಘಟನೆಗಳನ್ನು ತಡೆಗಟ್ಟಲು ಭವಿಷ್ಯದಲ್ಲಿ ರಾಜ್ಯದ ಎಲ್ಲಾ ದೇವಾಲಯ ಉತ್ಸ ವಗಳಿಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಕಾಲ್ತುಳಿತದ ಬಗ್ಗೆ ತಿಳಿದ ನಂತರ ಮುಂಜಾನೆ ಮಾಪುಸಾ ಪಟ್ಟಣದ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ ಎಂದು ಸಾವಂತ್ ಹೇಳಿದರು. ಇದಕ್ಕೂ ಮುನ್ನ ಟ್ವಿಟ್ ಮಾಡಿದ್ದ ಸಾವಂತ್, ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರೆ ಬಂದಿದ್ದು, ಅವರು ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.