ಬೆಂಗಳೂರು, ಮಾ.7 – ಪ್ರಸಕ್ತ ಸಾಲಿನ ಅಂತ್ಯದ ವೇಳೆಗೆ ರಾಜ್ಯದಲ್ಲಿ 4.4 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ಆಕರ್ಷಿಸುವುದರೊಂದಿಗೆ ದೇಶದಲ್ಲೇ ಮೂರನೇ ಸ್ಥಾನಕ್ಕೆ ಬರುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದಲ್ಲದೆ 88,853 ಮಿಲಿಯನ್ ಡಾಲರ್ ರಫ್ತು ಮಾಡುವುದರೊಂದಿಗೆ ಅಗ್ರ ಸ್ಥಾನಕ್ಕೇರುವ ಗುರಿಯಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.11.17 ರಷ್ಟು ಬೆಳವಣಿಗೆ ಸಾಧನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದ ಏಸ್ ಆಫ್ ಡುಯಿಂಗ್ ಬ್ಯುಸಿನೆಸ್‌ನಲ್ಲೂ ಅತ್ಯುತ್ತಮ ಸಾಧಕ ಎಂದು ಗುರುತಿಸಲ್ಪಟ್ಟಿದೆ. ಇತ್ತೀಚೆಗೆ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವಿವಿಧ ಕಂಪನಿಗಳಿಂದ 10.20 ಲಕ್ಷ ಕೋಟಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು, ಇದರಿಂದ 6 ಕ್ಕಿಂತ ಹೆಚ್ಚು ಉದ್ಯೋಗವಕಾಶವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಘೋಷಿಸಲಾಗಿರುವ ಹೊಸ ಕೈಗಾರಿಕಾ ನೀತಿ 2025-30 ಯಿಂದ 7.50 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹಾಗೂ 20 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಇದೆ ಎಂದಿದ್ದಾರೆ.
ಕೈಗಾರಿಕೋದ್ಯಮಿಗಳ ಅನುಸರಣೆಯ ನಿಯಮಗಳು ಮತ್ತು ಷರತ್ತುಗಳ ಸರಳೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉದ್ಯೋಗದಾತ ನಂಬಿಕೆ ವಿಧೇಯಕ ಹಾಗೂ ಕರ್ನಾಟಕ ಉದ್ಯೋಗದಾತ ಅನುಸರಣೆ ಜಾಲಬಂಧ ಮಸೂದೆಯನ್ನು ಜಾರಿಗೆ ತರಲಿದೆ. ಇದರ ಮೂಲಕ ಉದ್ಯೋಗದಾತರ ಷರತ್ತುಗಳ ಉಲ್ಲಂಘನೆಯನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಿಂದ ಹೊರತರಲಾಗುವುದು ಮತ್ತು ಡಿಜಿಟಲೀಕರಣಗೊಳಿಸಲ ಗುವುದು. ಇದು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸುತ್ತಿರುವ ಕೀರ್ತಿ ನಮ್ಮದಾಗಿದೆ ಎಂದು ಹೇಳಿದರು.
ಸರ್ಕಾರ ಈಗಾಗಲೇ ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿಯನ್ನು ಘೋಷಿಸಿದ್ದು ಇದರಿಂದ ವಾಹನ ಮೌಲ್ಯ ಸರಪಳಿಯಲ್ಲಿ 50 ಸಾವಿರ ಕೋಟಿ ಹೂಡಿಕೆ ಆಕರ್ಷಿಸಿ 1 ಲಕ್ಷ ಉದ್ಯೋಗ ಸೃಷ್ಟಿ ಉದ್ದೇಶ ಹೊಂದಲಾಗಿದೆ ಎಂದರು.
ವಿದ್ಯುತ್ ವಾಹನಗಳ (ಇವಿ) ತಯಾರಿಕೆ ಮತ್ತು ಬಳಕೆ ಉತ್ತೇಜನ ನೀಡಲು ಬೆಂಗಳೂರು ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಕೂಡಿರುವ ಇವಿ ಕ್ಲಸ್ಟರ್ ಅನ್ನು ನಿರ್ಮಿಸಲಾಗುವುದು. ಇದಕ್ಕಾಗಿ 25 ಕೋಟೆ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ದೇವನಹಳ್ಳಿ ಬಳಿ ಫಾಕ್ಸಾನ್ ಸಂಸ್ಥೆಯಿಂದ ಮೊಬೈಲ್ ಫೋನ್ ಉತ್ಪಾದನಾ ಘಟಕ 21,911 ಕೋಟಿ ವೆಚ್ಚದಲ್ಲಿ ಪ್ರಾರಂಭವಾಗಿದೆ. ಇದರಿಂದ 50 ಸಾವಿರ ಉದ್ಯೋಗ ಸೃಜನೆಯನ್ನು ನಿರೀಕ್ಷಿಸಲಾಗಿದೆ. ಈ ಕಂಪನಿಗೆ ಇಎಸ್‌ಡಿಎಂನ ನೀತಿಯಡಿ 6,970 ಕೋಟಿ ರೂ.ಗಳ ಪ್ರೋತ್ಸಾಹಕಗಳನ್ನು ನೀಡಲಾಗುವುದು ಎಂದರು.
ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷತೆ ಹಾಗೂ ಉತ್ತಮ ವಾತಾವರಣ ಕಲ್ಪಿಸಲು ಕೋಲಾರ ಜಿಲ್ಲೆಯ ನರಸಾಪುರದಲ್ಲಿ 173 ಕೋಟಿ ರೂ. ವೆಚ್ಚದಲ್ಲಿ 6 ಸಾವಿರ ಸಾಮರ್ಥ್ಯದ ಮಹಿಳಾ ವಸತಿ ನಿಲಯ ಹಾಗೂ ತುಮಕೂರು ಜಿಲ್ಲೆಯ ವಸಂತ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಜಯಪುರದ ತಿಡಗುಂಡಿಯಲ್ಲಿ ಪ್ಲಗ್ ಅಂಡ್ ಪ್ಲೇ ಸೌಲಭ್ಯವಿರುವ ಫ್ಲಾಟ್ ಕಾರ್ಖಾನೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಕೋಲಾರದ ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿಸೆಕ್ಟರ್ ನೆಟ್ ಜೀರೋ ಸಸ್ಟೈನೆಬಲ್ ಇಂಡಸ್ಟ್ರಿಯಲ್ ಪಾರ್ಕ್‌ನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿಪಡಿಸಿರುವ ತುಮಕೂರು ಕೈಗಾರಿಕಾ ನೋಡ್ ನಲ್ಲಿ ಜಪಾನೀಸ್ ಕೈಗಾರಿಕಾ ಪಾರ್ಕ್ ಸ್ಥಾಪಿಸಲಾಗುವುದು. ಈ ಮೂಲಕ ವರ್ಲ್ಡ್ ಎಕ್ಸ್‌ಪೋ ವೇದಿಕೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಇದನ್ನು ಬಳಸಿಕೊಳ್ಳಲಾಗುವುದು ಎಂದರು.
ಎಂಎಸ್‌ಎಂಇ ವಲಯಕ್ಕೆ ಪ್ರೋತ್ಸಾಹ ನೀಡಲು ಎಂಎಸ್‌ಸಿ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗುವುದು. ಇದುವರೆಗೂ 16 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 1,379 ಎಂಎಸ್‌ಎಂಇ ಘಟಕಗಳು ಇದರ ಸೇವೆ ಬಳಸಿಕೊಳ್ಳುತ್ತಿದೆ. ಇದಕ್ಕಾಗಿ ಸರ್ಕಾರ 22 ಕೋಟಿ ರೂ. ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಿ ಜೀವನಮಟ್ಟ ಸುಧಾರಿಸಲು ಬಿದಿರು ಕಲಾಕೃತಿಗಳು ಹಾಗೂ ಶ್ರೀಗಂಧ ಕಲಾಕೃತಿಗಳ ಕಚ್ಚಾವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲು 1 ಕೋಟಿ ರೂ. ಅನುದಾನ, ಕೈಗಾರಿಕಾ ನಿತಿಯಡಿಯಲ್ಲಿ 3,778 ಎಂಎಸ್‌ಎಂಇ ಘಟಕಗಳಿಗೆ ಪ್ರಸಕ್ತ ಸಾಲಿನಲ್ಲಿ 182 ಕೋಟಿ ರೂ. ಒದಗಿಸಲಾಗುವುದು ಮತ್ತು ಪ್ರತ್ಯೇಕ ಎಂಎಸ್ಎಂಇ ನೀತಿಯನ್ನು ಕೂಡ ರೂಪಿಸಲಾಗುವುದು ಎಂದು ಹೇಳಿದ್ದಾರೆ.