Friday, November 22, 2024
Homeಜಿಲ್ಲಾ ಸುದ್ದಿಗಳು | District Newsತರೀಕೆರೆ : ಕಲುಷಿತ ನೀರು ಸೇವಿಸಿ 28 ಮಂದಿ ಅಸ್ವಸ್ಥ

ತರೀಕೆರೆ : ಕಲುಷಿತ ನೀರು ಸೇವಿಸಿ 28 ಮಂದಿ ಅಸ್ವಸ್ಥ

ತರೀಕೆರೆ, ಜು.30- ಪಟ್ಟಣದ ಹಳಿಯೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯ ಶಂಕೆಯಿಂದ ವಾಂತಿ-ಬೇಧಿ ಸಂಭವಿಸಿ ಸುಮಾರು 28 ಜನರು ಅಸ್ಥಸ್ಥಗೊಂಡಿರುವುದಾಗಿ ವರದಿಯಾಗಿದೆ.

ಜನರು ಕೊಳವೆಬಾವಿ ಮೂಲಕ ಕುಡಿಯುವ ನೀರನ್ನು ತೆಗೆದುಕೊಂಡು ಅಡಿಗೆ ಮತ್ತಿತರ ಕಾರ್ಯಕ್ಕೆ ಬಳಸಿದ್ದಾರೆ. ಆದರೆ ಬಳಸಿದ ಕೆಲವು ಸಮಯದ ನಂತರ ವಾಂತಿ-ಬೇಧಿ ಕಾಣಿಸಿಕೊಂಡಿದೆ. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಬ್ಬೊಬ್ಬರೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಇನ್ನು ಕೆಲವರು ಶಿವಮೊಗ್ಗದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ.

ದಾಖಲಾದವರೆಲ್ಲ ಒಂದೇ ಗ್ರಾಮದವರಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್‌ ಕೂಡಲೇ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡು ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಇದರ ಜೊತೆಯಲ್ಲಿ ಗ್ರಾಮದಲ್ಲಿಯೇ ಚಿಕಿತ್ಸೆಗಾಗಿ ತಾತ್ಕಾಲಿಕ ಶೆಡ್‌‍ತೆರೆದಿದ್ದು ಇದಕ್ಕೆ ಬೇಕಾದ ಅಗತ್ಯ ಸಿಬ್ಬಿಂದಿಗಳನ್ನೂ ಸಹ ನಿಯೋಜಿಸಲಾಗಿದೆ.

ಕಾಯಿಲೆಗೆ ಮೂಲ ಕಾರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ರೋಗಿಗಳ ರಕ್ತ ಪರೀಕ್ಷೆ ಹಾಗೂ ಇವರು ಬಳಸುತ್ತಿದ್ದ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ರೋಗದ ಲಕ್ಷಣಗಳನ್ನು ಪತ್ತೆಮಾಡಲಾಗುವುದೆಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್‌ ತಿಳಿಸಿದರು.

ಹಳಿಯೂರು ಗ್ರಾಮ ಈ ಮೊದಲು ಬೆಟ್ಟದಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪುರಸಭೆಗೆ ಸೇರ್ಪಡೆಗೊಂಡಿತ್ತು. ಪಟ್ಟಣದ ಎಲ್ಲಾ ಭಾಗಕ್ಕೆ ಭದ್ರಾ ಚಾನಲ್‌‍ನ ನೀರು ಒದಗಿಸುತ್ತಿದ್ದು, ಹಳಿಯೂರು ಮತ್ತು ಉಪ್ಪಾರ ಬಸವನಹಳ್ಳಿ ಗ್ರಾಮಗಳಲ್ಲಿ ಕುಡಿಯಲು ಕೊಳವೆಬಾವಿಯ ನೀರನ್ನು ಮಿನಿ ಟ್ಯಾಂಕ್‌ ಮೂಲಕ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದ್ದಾರೆ. ಆದರೆ ಭದ್ರಾ ನದಿಯ ನೀರನ್ನು ನಮಗೂ ಸರಬರಾಜು ಮಾಡಿದರೆ ಇಂತಹ ರೋಗಗಳನ್ನು ತಡೆಗಟ್ಟಬಹುದೆಂದು ಗ್ರಾಮದ ಕೆಲವರು ಪತ್ರಿಕೆಗೆ ತಿಳಿಸಿದ್ದಾರೆ.

ಘಟನೆ ತಿಳಿದು ಶಾಸಕ ಜಿ.ಎಚ್‌. ಶ್ರೀನಿವಾಸ್‌‍, ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್‌ ಮತ್ತು ಆರೋಗ್ಯ ಮತ್ತು ಇತರೆ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

RELATED ARTICLES

Latest News