Friday, March 21, 2025
Homeರಾಜ್ಯತೆರಿಗೆ ಸಂಗ್ರಹ ತುಸು ಕಡಿಮೆಯಾಗಿದೆ, ಆದರೆ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ : ಸಿಎಂಸಿದ್ದರಾಮಯ್ಯ

ತೆರಿಗೆ ಸಂಗ್ರಹ ತುಸು ಕಡಿಮೆಯಾಗಿದೆ, ಆದರೆ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ : ಸಿಎಂಸಿದ್ದರಾಮಯ್ಯ

Tax collection has decreased slightly, but the state's financial condition is good

ಬೆಂಗಳೂರು, ಮಾ.21- ಕೇಂದ್ರ ಸರ್ಕಾರಕ್ಕಿಂತಲೂ ನಮ್ಮ ರಾಜ್ಯದ ಬಜೆಟ್‌ನ ವಿಸ್ತರಣೆಯ ಗಾತ್ರ ದ್ವಿಗುಣಗೊಂಡಿದೆ. ದೇಶದಲ್ಲೇ ಕರ್ನಾಟಕ ಅತಿದೊಡ್ಡ ಬಜೆಟ್ ಹೊಂದಿರುವ 5ನೇ ಸ್ಥಾನ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯನವರು, 2025-26ನೇ ಸಾಲಿಗೆ 4,09,549 ಬಜೆಟ್ ಅನ್ನು ಮಂಡಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರ ಶೇ.10.3ರಷ್ಟು ಬೆಳವಣಿಗೆ ಕಂಡಿದೆ.

ಜನಸಂಖ್ಯೆಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದ್ದರೆ ತೆರಿಗೆ ಸಂಗ್ರಹಿಸಿಕೊಡುವ ವಿಚಾರದಲ್ಲಿ 2ನೇ ಸ್ಥಾನದಲ್ಲಿದೆ. ಜಿಎಸ್‌ಡಿಪಿಯಲ್ಲಿ ಕರ್ನಾಟಕ ತಮಿಳುನಾಡಿನ ನಂತರ 3ನೇ ಸ್ಥಾನದಲ್ಲಿದೆ. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ ನಮ್ಮದು 5ನೇ ದೊಡ್ಡ ಬಜೆಟ್ ಎಂದು ಹೇಳಿಕೊಂಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನಲ್ಲಿ 48.21 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದರು. ಮುಂದಿನ ಆರ್ಥಿಕ ವರ್ಷಕ್ಕೆ 50.65 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದು ಬೆಳವಣಿಗೆಯ ಗಾತ್ರ ಶೇ.5.06ರಷ್ಟು ಎಂದು ವಿವರಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ 1,89,893 ಕೋಟಿ ರಾಜಸ್ವಸುಂಕ ತೆರಿಗೆ ಸಂಗ್ರಹಿಸುವ ಅಂದಾಜಿತ್ತು. ಫೆಬ್ರವರಿ ಅಂತ್ಯಕ್ಕೆ 1,57,111 ಕೋಟಿ ಸಂಗ್ರಹಿಸಿ ಶೇ.82.7ರಷ್ಟು ಸಾಧನೆ ಮಾಡಿದ್ದೇವೆ. ಮಾರ್ಚ್ ಅಂತ್ಯಕ್ಕೆ ಇದು 1.77 ಲಕ್ಷ ಕೋಟಿಗೇರುವ ಸಾಧ್ಯತೆ ಇದೆ. ನಿರೀಕ್ಷೆಗಿಂತಲೂ ತೆರಿಗೆ ಸಂಗ್ರಹ ತುಸು ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.

ದೇಶದಲ್ಲಿ ನಡೆಯುವ ಬೆಳವಣಿಗೆಗಳು ರಾಜ್ಯದ ಮೇಲೂ ಪರಿಣಾಮ ಬೀರುತ್ತದೆ. ಕೇಂದ್ರದ ಮೋದಿ ಸರ್ಕಾರದಲ್ಲೂ 1.05 ಲಕ್ಷ ಕೋಟಿ ತೆರಿಗೆ ಸಂಗ್ರಹ ಕಡಿಮೆಯಾಗುವ ಅಂದಾಜಿದ್ದು, ಬಜೆಟ್ ಗಾತ್ರವನ್ನು 48.21 ಲಕ್ಷ ಕೋಟಿಯಿಂದ 47.16 ಲಕ್ಷ ಕೋಟಿಗೆ ಕಡಿಮೆ ಮಾಡಲಾಗಿದೆ. ರಾಜ್ಯ ಅಭಿವೃದ್ಧಿ ಹೊಂದುತ್ತಿದ್ದು, 2022-23ಕ್ಕೆ ಹೋಲಿಸಿದರೆ ಮುಂದಿನ ಆಯವ್ಯಯದ ಗಾತ್ರ ಶೇ.54.12ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ, ಕೃಷಿ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ಗಾಗಿ 18 ಸಾವಿರ ಕೋಟಿ, ಸಾಮಾಜಿಕ ಪಿಂಚಣಿ ಯೋಜನೆಗಳಿಗೆ 10,835 ಕೋಟಿ, ಮನೆ ನಿರ್ಮಾಣದ ಸಬ್ಸಿಡಿ, ವಿದ್ಯಾರ್ಥಿ ವೇತನ, ವಿವಿಧ ಇಲಾಖೆಗಳ ಸಹಾಯಧನ, ಹಾಲಿನ ಉತ್ಪಾದಕರಿಗೆ ಪ್ರೋತ್ಸಾಹ ಧನ ಸೇರಿ 20 ಸಾವಿರ ಕೋಟಿ, ಎಲ್ಲಾ ಒಟ್ಟು ಒಂದು ಲಕ್ಷ ಕೋಟಿ ರೂ.ಗಳನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡಿದ ನಂತರವೂ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ವಿವರಿಸಿದ್ದಾರೆ.

ಕಳೆದ ವರ್ಷ ರಾಜ್ಯ ಸರ್ಕಾರಿ ನೌಕರರ ಸಂಬಳಕ್ಕಾಗಿ 71,862 ಕೋಟಿ, ಪಿಂಚಣಿಗೆ 3907 ಕೋಟಿ ಸೇರಿ 1,02,769 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. 7ನೇ ವೇತನ ಆಯೋಗದ ಜಾರಿಯಿಂದಾಗಿ ಸಂಬಳಕ್ಕಾಗಿ 85,860 ಕೋಟಿ, ಪಿಂಚಣಿಗಾಗಿ 38,580 ಕೋಟಿ ಸೇರಿ ಒಟ್ಟು 1,24,440 ಕೋಟಿ ರೂ.ಗಳ ಅಂದಾಜು ವೆಚ್ಚವನ್ನು ನಿರೀಕ್ಷಿಸಲಾಗಿದೆ.

ಸಾಲದ ಬಡ್ಡಿ ಪಾವತಿಗೆ 45,600 ಕೋಟಿ, ವೇತನ, ಪಿಂಚಣಿ, ಬಡ್ಡಿ ಪಾವತಿಗೆ 1.70 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಎಲ್ಲಾ ಧರ್ಮದ ಪುರೋಹಿತರಿಗೆ ಮಾಸಿಕ ಗೌರವಧನ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತರು, ಶಾಲಾಕಾಲೇಜುಗಳ ಶಿಕ್ಷಕರು, ಅತಿಥಿ ಉಪನ್ಯಾಸಕರು, ಪತ್ರಕರ್ತರ, ಕಲಾವಿದರ, ಕುಸ್ತಿಪಟುಗಳ ಗೌರವಧನಗಳನ್ನು ಹೆಚ್ಚಿಸಲಾಗಿದೆ. ಇದೆಲ್ಲದರ ನಡುವೆಯೂ ಬಂಡವಾಳ ವೆಚ್ಚಗಳಿಗೆ 83,200 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
1

RELATED ARTICLES

Latest News